ಬೆಂಗಳೂರು, ಜು.24 www.bengaluruwire.com : ದೇಶಾದ್ಯಂತ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರದ ಹಿನ್ನಲೆಯಲ್ಲಿ ಈ ಬಾರಿ ದೇಶದ ಎರಡು ಕಡೆಗಳಲ್ಲಿ ಆಗಸ್ಟ್ 15ರಂದು ಅತ್ಯಂತ ಸದೃಢವಾದ ಸುಧಾರಿತ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟ ಅತಿದೊಡ್ಡ ತ್ರಿವರ್ಣ ಬಾವುಟ ಹಾರಿಸಲು ತಯಾರಿ ನಡೆಯುತ್ತಿದೆ.
ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT Delhi)ಯ ಬೆಂಬಲಿತ ಸ್ಟಾರ್ಟ್ ಅಪ್ ಸ್ವಾಟ್ರಿಕ್ (SWATRIC) ಕಳೆದ 6 ರಿಂದ 8 ತಿಂಗಳ ನಿರಂತರ ಸಂಶೋಧನೆಯ ಫಲವಾಗಿ ಎರಡನೇ ಹಂತದಲ್ಲಿ 20 ಅಡಿ X 30 ಅಡಿ ಅಳತೆಯ ಎರಡು ಅತಿದೊಡ್ಡ ಬಾವುಟವನ್ನು ತಯಾರಿಸಿದೆ. ಸಾಮಾನ್ಯವಾಗಿ ತಯಾರಿಸುವ ಬಟ್ಟೆಗಿಂತ ಹಲವು ಪಟ್ಟು ಸದೃಢವಾಗಿದ್ದು, ಈ ಬಾವುಟ ಹರಿದು ಹೋಗುವ ಸಾಧ್ಯತೆ ಕಡಿಮೆಯಿದ್ದು ಉಳಿದ ಬಟ್ಟೆಗಿಂತ ಸುಧೀರ್ಘ ಬಾಳಿಕೆ ಬರುತ್ತದೆ. ಎಂತಹ ಕಠಿಣ ಹವಾಮಾನ ಪರಿಸ್ಥಿತಿಯನ್ನು ತಾಳಿಕೊಳ್ಳುವಂತಹ ಕ್ಷಮತೆಯನ್ನು ಈ ಬಾವುಟಗಳು ಹೊಂದಿದೆ.
ದೇಶದಾದ್ಯಂತ ಅತಿದೊಡ್ಡ ರಾಷ್ಟ್ರಧ್ವಜ ಸ್ಥಾಪಿಸುವ ಸ್ಮಾರಕ ಸ್ಥಳಗಳಲ್ಲಿ ಬಳಕೆಯಾಗುವ ದೊಡ್ಡ ತಿರಂಗಗಳು ಸಾಮಾನ್ಯವಾಗಿ 48 ಅಡಿ ಹಾಗೂ 72 ಅಡಿ ವಿಸ್ತೀರ್ಣ ಹೊಂದಿದ್ದು ಸರಿ ಸುಮಾರು 55 ಕೆಜಿಯಷ್ಟು ಭಾರ ಹೊಂದಿರುತ್ತದೆ. ಈ ಬಾವುಟಗಳ ಬೆಲೆಯೂ ಏನಿಲ್ಲವೆಂದರೂ 50ರಿಂದ 80 ಸಾವಿರ ರೂಪಾಯಿಗಳಾಗುತ್ತದೆ. ಇಷ್ಟು ದೊಡ್ಡ ಬಾವುಟಗಳು ಸಾಮಾನ್ಯವಾಗಿ ಒಂದು ತಿಂಗಳು ಬಾಳಿಕೆ ಬಂದರೆ ಹೆಚ್ಚೆಚ್ಚು.
ಬೆಂಗಳೂರು ವೈರ್ ಗೆ ಐಐಟಿ ಪ್ರೊಫೆಸರ್ ಹೇಳಿದ್ದು ಹೀಗೆ :
‘ಇದೇ ಆಗಸ್ಟ್ 15ರ ಸ್ವಾಂತಂತ್ರ್ಯ ದಿನದಂದು ದೆಹಲಿಯ ರಾಜೀವ್ ಚೌಕ್ ಅಥವಾ ಐಐಟಿ ದೆಹಲಿಯಲ್ಲಿ ಮತ್ತು ಲಡಾಖ್ ನಲ್ಲಿ ಎರಡನೇ ಹಂತದಲ್ಲಿ ತಯಾರಿಸಿದ, ದೀರ್ಘ ಬಾಳಿಕೆ ಬರುವ, ಎರಡು ಸ್ಮಾರಕ ಬಾವುಟಗಳನ್ನು ಹಾರಿಸಲು ತಯಾರಿ ನಡೆದಿದೆ. 20X 30 ಅಡಿ ಅಳತೆಯ ಈ ಬಾವುಟದ ಬಟ್ಟೆಯನ್ನು ಸುಧಾರಿತ ತಂತ್ರಜ್ಞಾನದ ನಾರುಗಳನ್ನು ಬಳಸಿ ನಿರ್ಮಿಸಲಾಗಿದೆ. ಈ ಬಾವುಟದ ಬಟ್ಟೆ ಹರಿಯುವಿಕೆ, ಉಳಿದ ಬಟ್ಟೆಗಳಿಗಿಂತ ಅತಿಕಡಿಮೆಯಿದ್ದು, ಸಾಕಷ್ಟು ಹವಾಮಾನ ವೈಪರಿತ್ಯವನ್ನು ತಡೆಯುವ ಸಾಮರ್ಥ್ಯ ಹೊಂದಿದ್ದಾಗಿದೆ’ ಎನ್ನುತ್ತಾರೆ ದೆಹಲಿ ಐಐಟಿಯ ಟೆಕ್ಸ್ ಟೈಲ್ ಮತ್ತು ಫೈಬರ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಹಾಗೂ ಸ್ವಾಟ್ರಿಕ್ ಮಾರ್ಗದರ್ಶಕರಾದ ಪ್ರೊ.ಬಿಪಿನ್ ಕುಮಾರ್.
ಆರೇಳು ತಿಂಗಳಲ್ಲೇ ಬಾವುಟದ ಗುಣಮಟ್ಟ ಸುಧಾರಣೆಯಲ್ಲಿ ಯಶಸ್ಸು :
‘ದೆಹಲಿಯ ಐಐಟಿ ಮತ್ತು ಲಡಾಖ್ ನಲ್ಲಿ ಸುಧಾರಿತ ತಂತ್ರಜ್ಞಾನದಿಂದ ತಯಾರಿಸಲಾದ ಸ್ಮಾರಕ ಬಾವುಟಗಳು ಹಾಗೂ ದೇಶದ ವಿವಿಧ ಭಾಗಗಳಿಗೆ ಫೆಬ್ರವರಿ- ಮಾರ್ಚ್ ನಲ್ಲಿ ಕಳುಹಿಸಿದ 10 ಮಾದರಿ ಬಾವುಟಗಳು ಉತ್ತಮ ಸಾಮರ್ಥ್ಯ ತೋರಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ಸ್ಮಾರಕ ಬಾವುಟಗಳ ತೂಕವೂ ಕೂಡ ಶೇ.30ರಷ್ಟು ಕಡಿಮೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದೇವೆ. ಆಧುನಿಕ ತಂತ್ರಜ್ಞಾನದ ಮೂಲಕ ಉತ್ತಮ ಗುಣಮಟ್ಟದ ರಾಷ್ಟ್ರ ಬಾವುಟ ತಯಾರಿಸಲು ಆರೇಳು ತಿಂಗಳ ಹಿಂದಷ್ಟೇ ಸಂಶೋಧನೆ ಆರಂಭಿಸಿ, ಅಲ್ಪ ಕಾಲದಲ್ಲಿಯೇ ಬಾವುಟಗಳ ಬಟ್ಟೆಯ ಗುಣಮಟ್ಟದಲ್ಲಿ ಸುಧಾರಣೆ ತಂದಿದ್ದೇವೆ. ಮುಂದಿನ ವರ್ಷದ ಗಣರಾಜ್ಯೋತ್ಸವದ ವೇಳೆಗೆ ಸ್ಮಾರಕ ತಿರಂಗಗಳು ಇಂತಿಷ್ಟೇ ಕಾಲ ಬಾಳಿಕೆ ಬರುತ್ತದೆಂಬುದನ್ನು ಗುರ್ತಿಸುವ ಹಂತದಲ್ಲಿರುತ್ತೇವೆ’ ಎಂದು ಪ್ರೊ.ಬಿಪಿನ್ ಕುಮಾರ್ ನವದೆಹಲಿಯಿಂದ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ನಮ್ಮ ದೇಶದ ಹೆಮ್ಮೆ ಮತ್ತು ಗೌರವವಾಗಿರುವ ಅತಿದೊಡ್ಡ ಸ್ಮಾರಕ ಬಾವುಟಗಳು ವರ್ಷಕ್ಕೆ ಆರೇಳು ಬಾರಿ ಹರಿದ ಕಾರಣಕ್ಕೆ ಬದಲಾಯಿಸುವುದು, ಹಣಕಾಸು ಮತ್ತು ಶ್ರಮದ ದೃಷ್ಟಿಯಿಂದ ಕಾರ್ಯಸಾಧುವಲ್ಲ. ಹಾಗಾಗಿ ವರ್ಷಕ್ಕೆ ಮೂರು ಬಾರಿಯಷ್ಟೆ ಬಾವುಟ ಬದಲಾಯಿಸುವ ಗುರಿಯಿದ್ದು, ಹಗುರ ಮತ್ತು ಸದೃಢ ಬಾವುಟ ತಯಾರಿಸುವ ಉದ್ದೇಶವಿತ್ತು. ಅದರಲ್ಲಿ ನಾವು ಬಹಳ ಮಟ್ಟಿಗೆ ಈಗ ಯಶಸ್ಸು ಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ವರ್ಷಕ್ಕೆ 6-7 ಬಾರಿ ಬದಲಾಯಿಸಬೇಕಿದ್ದ ಸ್ಮಾರಕ ಬಾವುಟ :
ಪದೇ ಪದೇ ದುಬಾರಿ ಬಾವುಟಗಳನ್ನು ಬದಲಾಯಿಸುವುದು ಬಜೆಟ್ ದೃಷ್ಟಿಯಿಂದ ಸಮಂಜಸವಲ್ಲ. ಹಾಗಾಗಿ ಇದನ್ನು ಗಮನಿಸಿದ ಫ್ಲಾಗ್ ಫೌಂಡೇಷನ್ ಆಫ್ ಇಂಡಿಯಾ (FFI) ಎಂಬ ಸರ್ಕಾರೇತರ ಸಂಸ್ಥೆಯು, ದೆಹಲಿ ಐಐಟಿ ಬೆಂಬಲಿತ ಸ್ಟಾರ್ಟ್ ಅಪ್ ಸ್ವಾಟ್ರಿಕ್ ಜೊತೆಗೆ ಕಳೆದ ವರ್ಷ ಜುಲೈ 2021ರಂದು ದೇಶದ ಎಲ್ಲಾ ರೀತಿಯ ಹವಾಮಾನ ಹಾಗೂ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೆಯಾಗುವಂತಹ ರಚನೆ ಹಾಗೂ ವಿನ್ಯಾಸ ಹೊಂದಿದ ಅತ್ಯಾಧುನಿಕ ತಂತ್ರಜ್ಞಾನದ ಹೊಂದಿದ, ಅತಿದೊಡ್ಡ ಸ್ಮಾರಕ ಬಾವುಟಗಳನ್ನು ತಯಾರಿಸಲು ಒಪ್ಪಂದ ಮಾಡಿಕೊಂಡಿತ್ತು. ಎಫ್ಎಫ್ಐ ಎಂಬುದು ಸರ್ಕಾರೇತರ ಸಂಸ್ಥೆಯಾಗಿದ್ದು, ದೇಶದಲ್ಲಿ ನಾಗರೀಕರು ಹೆಚ್ಚು ಹೆಚ್ಚಾಗಿ ತ್ರಿವರ್ಣ ಬಾವುಟ ಪ್ರದರ್ಶಿಸುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಉದ್ಯಮಿ ನವೀನ್ ಜಿಂದಾಲ್ ಎಫ್ಎಫ್ಐ ಸಹ ಸಂಸ್ಥಾಪಕರಾಗಿದ್ದಾರೆ.
90ಕ್ಕೂ ಹೆಚ್ಚು ನಗರಗಳಲ್ಲಿ ಈಗಾಗಲೇ ಸ್ಥಾಪನೆಯಾಗಿದೆ ಸ್ಮಾರಕ ಬಾವುಟ :
ಈ ಎಫ್ಎಫ್ ಐ ಸಂಸ್ಥೆಯು ದೇಶಾದ್ಯಂತ ಈಗಾಗಲೇ 90ಕ್ಕೂ ಹೆಚ್ಚು ನಗರಗಳಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಅತಿದೊಡ್ಡ ಬಾವುಟಗಳಿರುವ ರಾಷ್ಟ್ರಧ್ವಜವನ್ನು ಸ್ಥಾಪಿಸಿದೆ. ಈ ಸ್ಥಳಗಳೆಲ್ಲವೂ ಆಯಾ ಪ್ರದೇಶದ ಪ್ರಮುಖ ಲ್ಯಾಂಡ್ ಮಾರ್ಕ್ ಅನ್ನಿಸಿಕೊಂಡಿದೆ. 80ಕ್ಕೂ ಹೆಚ್ಚು ಕಡೆಗಳಲ್ಲಿ 108 ಅಡಿ ಉದ್ದದ ಕಂಬದಲ್ಲಿ ಹಾಗೂ 10ಕ್ಕೂ ಹೆಚ್ಚು ಕಡೆಗಳಲ್ಲಿ 207 ಅಡಿ ಉದ್ದದ ಕಂಬದಲ್ಲಿ ದೊಡ್ಡ ಬಾವುಟಗಳನ್ನು ಸ್ಥಾಪಿಸುವಲ್ಲಿ ಎಫ್ ಎಫ್ ಐ ಸಂಸ್ಥೆ ಯಶಸ್ವಿಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲೂ ಆಧುನಿಕ ಬಾವುಟ ಅಳವಡಿಕೆ?
ಐಐಟಿ ಸಂಶೋಧನೆಯ ಫಲದಿಂದ ಕೆಲವಾರು ತಿಂಗಳಿನಲ್ಲಿ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕ ಉದ್ಯಾನವನದಲ್ಲಿ 207 ಅಡಿ ಉದ್ದದ ಕಂಬದಲ್ಲಿ ಅತಿದೊಡ್ಡ ಬಾವುಟವಿದ್ದು, ಅತಿ ಕ್ಷಮತೆ ಹಾಗೂ ದೃಢತೆ ಹೊಂದಿದ ಬಾವುಟಕ್ಕೆ ಬದಲಾಯಿಸುವ ಕಾಲ ಸನ್ನಿಹಿತವಾದರೆ ಆಶ್ಚರ್ಯವಿಲ್ಲ. ಕೇಂದ್ರ ಸರ್ಕಾರ ಸಾಮಾನ್ಯ ಜನರು ಬೆಳಗ್ಗೆ ಅಥವಾ ರಾತ್ರಿ ವೇಳೆಯಲ್ಲೂ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಎಲ್ಲೆಡೆ ರಾಷ್ಟ್ರ ಬಾವುಟ ಹಾರಿಸಿದರು ಅಷ್ಟರ ಮಟ್ಟಿಗೆ ರಾಷ್ಟ್ರಭಕ್ತಿ ಹೆಚ್ಚಲು ಮತ್ತಷ್ಟು ಹುರುಪು ನೀಡಿದಂತಾಗುತ್ತದೆ.