ನವದೆಹಲಿ, ಜು.24 www.bengaluruwire.com : ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತಹ ವಿಷಯ. ಇನ್ನು ಮುಂದೆ ರಾಷ್ಟ್ರಧ್ವಜವನ್ನು ರಾತ್ರಿಯೂ ಹಾರಿಸಬಹುದು. ಈ ಕುರಿತಂತೆ ಕೇಂದ್ರ ಸರ್ಕಾರ ಧ್ವಜ ಸಂಹಿತೆಯಲ್ಲಿ ಬದಲಾವಣೆ ಮಾಡಿದೆ.
ಇದಲ್ಲದೆ ಕೈಯಲ್ಲಿ ಹೆಣೆದ, ನೇಯ್ಗೆಯಿಂದಲ್ಲದೆ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಸ್ಟರ್, ಉಣ್ಣೆ ಹಾಗೂ ರೇಷ್ಮೆ ಧ್ವಜಗಳನ್ನು ಬಳಸಲು ಅವಕಾಶ ಕಲ್ಪಿಸಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ‘ಆಜಾದಿ ಕಾ ಅಮೃತ ಮಹೋತ್ಸವ’ ದ ಅಂಗವಾಗಿ ಆಗಸ್ಟ್ 13ರಿಂದ 15ನೇ ತಾರೀಖಿನವರೆಗೆ ನಡೆಯಲಿರುವ ‘ಹರ್ ಘರ್ ತಿರಂಗ’ (ಪ್ರತಿಯೊಬ್ಬರ ಮನೆಯಲ್ಲಿ ತ್ರಿವರ್ಣ ಧ್ವಜ) ಅಭಿಯಾನದ ಅಂಗವಾಗಿ ಸರ್ಕಾರವು ಧ್ವಜ ಸಂಹಿತೆಯಲ್ಲಿ ಈ ಬದಲಾವಣೆ ಮಾಡಿದೆ.
ಈ ಕುರಿತಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಲ್ಲಾ ಸಚಿವಾಲಯಗಳು ಹಾಗೂ ಇಲಾಖೆಗಳ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಭಾರತದ ಧ್ವಜ ಸಂಹಿತೆ 2000ಅನ್ನು 2022ರ ಇಸವಿಯ ಜು.20ರಂದು ಹೊರಡಿಸಿದ ಆದೇಶದ ಮೂಲಕ ತಿದ್ದುಪಡಿ ಮಾಡಲಾಗಿದೆ. ಈಗ ಭಾರತದ ಧ್ವಜ ಸಂಹಿತೆ 2002ರ ಭಾಗ 2ರ ಪ್ಯಾರಾ 2.2ರ ಷರತ್ತು (11) ಅನ್ನು ಇನ್ನು ಮುಂದೆ ಈ ರೀತಿ ಓದಬೇಕು : ಎಲ್ಲಿ ಧ್ವಜವನ್ನು ತೆರೆದ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ ಅಥವಾ ನಾಗರೀಕರ ಮನೆಯಲ್ಲಿ ಪ್ರದರ್ಶಿಸಲಾಗುತ್ತದೆ. ಅದನ್ನು ಹಗಲು ಮತ್ತು ರಾತ್ರಿಯೂ ಹಾರಿಸಬಹುದು. ಈ ಮೊದಲು ತ್ರಿವರ್ಣ ಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅನುಮತಿ ನೀಡಲಾಗುತ್ತಿತ್ತು. ಅಲ್ಲದೆ ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅವಕಾಶವಿರಲಿಲ್ಲ. ಆದರೆ ಈಗ ಆ ನಿಬಂಧನೆಗಳಿಗೆ ಕೇಂದ್ರ ಗೃಹ ಇಲಾಖೆಗೆ ತಿದ್ದುಪಡಿ ತಂದಿದೆ ಎಂದು ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರಧ್ವಜದ ಪ್ರದರ್ಶನ, ಹಾರಾಟ ಮತ್ತು ಬಳಕೆಯು ಭಾರತೀಯ ಧ್ವಜ ಸಂಹಿತೆ-2002 ಮತ್ತು ದೇಶದ ಘನತೆಗೆ ಅಪಚಾರವಾಗುವುದನ್ನು ನಿಯಂತ್ರಿಸುವ ಕಾಯ್ದೆ (Prevention of Insults to National Pride Act 1971) ಅಡಿಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಅಜಯ್ ಭಲ್ಲಾ ಹೇಳಿದ್ದಾರೆ.
ಸ್ವತಂತ್ರ ಮತ್ತು ವಾಸ್ತವ ಸುದ್ದಿಗಾಗಿ ಬೆಂಗಳೂರು ವೈರ್ ವೆಬ್ ಸೈಟ್ ಜಾಲತಾಣವನ್ನು Subscribe ಮಾಡಿಕೊಳ್ಳಿ. ಬೆಂಗಳೂರು ವೈರ್ ಇದೀಗ Twitter, Facebook, Whatsup Group, Youtube, Dailyhunt ನಲ್ಲೂ ಲಭ್ಯವಿದೆ. ಈ ಸಾಮಾಜಿಕ ಜಾಲತಾಣದಲ್ಲೂ ಬೆಂಗಳೂರು ವೈರ್ ಅನ್ನು ಫಾಲೋ ಮಾಡಿ, ಲೈಕ್ ಮಾಡಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ.