ಶಿಕಾರಿಪುರ, ಜು.22 www.bengaluruwire.com : ರಾಜ್ಯದಲ್ಲಿ ಕಮಲ ಪಕ್ಷ ಖಾತೆ ತೆರೆಯಲು ಪ್ರಮುಖ ಪಾತ್ರವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಪುತ್ರ ವಿಜಯೇಂದ್ರ ಅವರಿಗೆ 1983ರಿಂದಲೂ ತಾವು ಸ್ಪರ್ಧಿಸುತ್ತಾ ಬಂದಿರುವ ಶಿಕಾರಿಪುರ ಕ್ಷೇತ್ರ (Shikaripura Assembly) ಬಿಟ್ಟುಕೊಡಲು ಮುಂದಾಗಿದ್ದಾರೆ. ಈ ಮೂಲಕ ಸಕ್ರಿಯ ಚುನಾವಣಾ ರಾಜಕೀಯದಿಂದ ನಿರ್ಗಮಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿದ ಮೇಲೆ ತಮ್ಮ ಪುತ್ರ ವಿಜಯೇಂದ್ರಗೆ ಬಿಜೆಪಿ ಪಕ್ಷದಲ್ಲಿ ಅಂತಹ ಮಹತ್ವದ ಸ್ಥಾನಮಾನಗಳೇ ಲಭಿಸಿಲ್ಲ. ಇದನ್ನೆಲ್ಲ ಗಮನಿಸಿ, ಸಾಕಷ್ಟು ಲೆಕ್ಕಾಚಾರ, ದೂರಾಲೋಚನೆಯಿಂದ ಬಿಎಸ್ ವೈ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ನಾನು ಕ್ಷೇತ್ರ ಬಿಟ್ಟುಕೊಡುವುದರಿಂದ ವಿಜಯೇಂದ್ರ ಇಲ್ಲಿ ಸ್ಪರ್ಧಿಸಲಿದ್ದಾರೆ. ಮೈಸೂರು ಭಾಗದಲ್ಲಿ ವಿಜಯೇಂದ್ರಗೆ ಸಾಕಷ್ಟು ಒತ್ತಡವಿದೆ. ಇಲ್ಲಿ ತಾವು ತಮ್ಮ ಸ್ಥಾನ ಬಿಟ್ಟುಕೊಡುವುದರಿಂದ ತೆರವಾಗುವುದರಿಂದ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದ್ದಾರೆ.
ಈ ಹಿಂದೆ 2018ರಲ್ಲಿ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಾಕಷ್ಟು ಪ್ರಯತ್ನಪಟ್ಟಿದ್ದರೂ, ಬಿಜೆಪಿ ಉನ್ನತ ಮಟ್ಟದ ತೀರ್ಮಾನ ಕೈಗೊಳ್ಳುವ ಹೈಕಮಾಂಡ್ ಅದಕ್ಕೆ ಅಡ್ಡಗಾಲು ಹಾಕಿತ್ತು. ಇದರಿಂದ ಬಿ.ಎಸ್.ವೈ ಸಹಜವಾಗಿಯೇ ನೊಂದು ಹೋಗಿದ್ದರು. ಆ ನಂತರ ಪಕ್ಷದ ಹೈಕಮಾಂಡ್ ಸಾಕಷ್ಟು ಅಳೆದು ತೂಗಿ ವಿಜಯೇಂದ್ರಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ನೀಡಿ ಕೈತೊಳೆದುಕೊಂಡಿತ್ತು. ರಾಜ್ಯದಲ್ಲಿ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿ.ಎಸ್.ಯಡಿಯೂರಪ್ಪ ಅಷ್ಟು ಸುಲಭವಾಗಿ ಈ ನಿರ್ಧಾರ ಕೈಗೊಂಡಿರುವ ಪ್ರಶ್ನೆಯಿಲ್ಲ. ಸಾಕಷ್ಟು ಪೂರ್ವ ತಯಾರಿ ನಡೆಸಿಯೇ ತಮ್ಮ ಪುತ್ರನಿ ವಿಜಯೇಂದ್ರನಿಗೆ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಡಲು ಆಷಾಢ ಶುಕ್ರವಾರ ನಡೆದ ಬಹಿರಂಗ ಕಾರ್ಯಕ್ರಮವೊಂದರಲ್ಲಿ ಈ ತೀರ್ಮಾನವನ್ನು ಬಹಿರಂಗಪಡಿಸಿದ್ದಾರೆ.
ಬಿ.ಎಸ್.ವೈ ಅವರ ನಿರ್ಧಾರದ ಬಗ್ಗೆ ಪುತ್ರ ವಿಜಯೇಂದ್ರ ಮಾಧ್ಯಮದೊಂದಿಗೆ ಮಾತನಾಡಿ “ತಂದೆಯ ಮಾರ್ಗದರ್ಶನ, ಪಕ್ಷದ ನಿರ್ಧಾರದಂತೆ ಮುಂದುವರೆಯುತ್ತೇನೆ. ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದು ನನ್ನ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಹಿಂದಿನಿಂದಲೂ ಅದನ್ನು ಮಾಡಿದ್ದೇನೆ, ಮುಂದೆಯೂ ಅದನ್ನು ಮಾಡುತ್ತೇನೆ. ಶಿಕಾರಿಪುರ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಒತ್ತಡ ಹೇರಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಮುಖಂಡರು ಈ ಬಗ್ಗೆ ಒತ್ತಾಯ ಮಾಡಿದ್ದರು. ಈ ಕ್ಷೇತ್ರದ ಮುಖಂಡರ ಒತ್ತಾಸೆಯಂತೆ ತಮ್ಮ ತಂದೆಯವರು ಇಂದು ತೀರ್ಮಾನ ಪ್ರಕಟಿಸಿದ್ದಾರೆ” ಎಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.