ನವದೆಹಲಿ, ಜು.22 www.bengaluruwire.com : 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಶಸ್ತಿ ಇಂದು ಪ್ರಕಟಗೊಂಡಿದೆ. ತಮಿಳು ಚಿತ್ರ ಸೂರರೈ ಪೊಟ್ರು ಐದು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರ, ಕಥಾವಸ್ತು ಹಾಗೂ ಹಿನ್ನಲೆ ಸಂಗೀತ, ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯು ಆ ಚಿತ್ರದ ಪಾಲಾಗಿದೆ.
ಈ ಬಾರಿ 2020ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ನಟ ವಿಭಾಗದಲ್ಲಿ ಇಬ್ಬರು ಸ್ಟಾರ್ ನಟರು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಸೂರರೈ ಪೊಟ್ರು ಚಿತ್ರಕ್ಕಾಗಿ ತಮಿಳು ನಟ ಸೂರ್ಯ ಹಾಗೂ ತಾನ್ಹಾಜಿ ಚಿತ್ರದ ಅಭಿನಯಕ್ಕಾಗಿ ಅಜಯ್ ದೇವಗನ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇನ್ನು ಸೂರರೈ ಪೊಟ್ರು ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಅಪರ್ಣ ಬಾಲಮುರಳಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರಕ್ಕಾಗಿ ಅಜಯ್ ದೇವಗನ್ ನಿರ್ಮಾಣದ ತಾನ್ಹಾಜಿ ಚಿತ್ರವು ಪ್ರಶಸ್ತಿ ಗಿಟ್ಟಿಸಿಕೊಂಡಿದೆ.
ಕನ್ನಡ ಭಾಷೆಯ ಮೂರು ಚಲನಚಿತ್ರಗಳು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಕನ್ನಡದ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಧ್ವನಿಹೊಂದಿದ ಚಿತ್ರವಾಗಿ ಡೊಳ್ಳು ಚಿತ್ರ ಆಯ್ಕೆಯಾಗಿದೆ. ಅದೇ ರೀತಿ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿಯ ಚಿತ್ರವಾಗಿ ನಾದದ ನವನೀತ ಡಾ.ಪಿ.ಟಿ.ವೆಂಕಟೇಶ್ ಕುಮಾರ್ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆ ನಿರ್ಮಾಣದ ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದಾರೆ. ಈ ಚಿತ್ರವು ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ. ಇನ್ನು ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರಕ್ಕಾಗಿ ಕನ್ನಡದ ತಲೆದಂಡ ಚಿತ್ರವು ಆಯ್ಕೆಯಾಗಿದೆ. ಅತ್ಯುತ್ತಮ ತುಳುಚಿತ್ರದ ಪ್ರಶಸ್ತಿಯು ಸಂತೋಷ್ ಮಾದ ನಿರ್ದೇಶನದ ಜೀತಿಗೆ ಚಿತ್ರದ ಪಾಲಾಗಿದೆ.
2020ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಫಲಿತಾಂಶವನ್ನು ಘೋಷಿಸುವ ಮುನ್ನ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪ್ರಶಸ್ತಿಗಳ ಪಟ್ಟಿಯನ್ನು 10 ಜನ ಜ್ಯೂರಿ ಸದಸ್ಯರ ನೇತೃತ್ವ ವಹಿಸಿದ್ದ ಚಿತ್ರ ನಿರ್ಮಾಣಕಾರರಾದ ವಿಪುಲ್ ಷಾ ಹಸ್ತಾಂತರಿಸಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಜ್ಯೂರಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ 2020ನೇ ವರ್ಷವು ಕೋವಿಡ್ ಸೋಂಕಿನ ಕಾರಣದಿಂದ ಚಲನಚಿತ್ರ ಕ್ಷೇತ್ರಕ್ಕೆ ಸಾಕಷ್ಟು ತೊಂದರೆಯಾಗಿತ್ತು. ರಾಷ್ಟ್ರ ಚಲನಚಿತ್ರ ಪ್ರಶಸ್ತಿ ನಾಮನಿರ್ದೇಶನಕ್ಕೆ ಸಾಕಷ್ಟು ಅತ್ಯುತ್ತಮ ಚಿತ್ರಗಳು ಬಂದಿದ್ದವು ಎಂದು ಸಚಿವ ಠಾಕೂರ್ ಹೇಳಿದರು.
ಮದ್ಯಪ್ರದೇಶ ರಾಜ್ಯವು ಚಲಚಿತ್ರ ಸ್ನೇಹಿ ರಾಜ್ಯವಾಗಿ ಹೊರಹೊಮ್ಮಿದೆ. ಎಕೆ ಅಯ್ಯಪ್ಪನುಮ್ ಕೋಶಿಯಮ್ ಮಲೆಯಾಳಮ್ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಆ ಚಿತ್ರದ ನಿರ್ದೇಶಕ ಕೆ.ಆರ್.ಸಚ್ಚಿದಾನಂದನ್ ಅವರು ಪಾತ್ರರಾಗಿದ್ದಾರೆ. ಉತ್ತಮ ಸಾಮಾಜಿಕ ಕಳಕಳಿ ಹೊಂದಿದ ಚಿತ್ರಕ್ಕಾಗಿ ಬಂಗಾಳಿ ಬಾಷೆಯ ತ್ರೀ ಸಿಸ್ಟರ್ಸ್ ಹಾಗೂ ಹಿಂದಿಯ ಜಸ್ಟೀಸ್ ಡಿಲೇಯ್ಡ್ ಬಟ್ ಡಿಲಿವರ್ಡ್ ಎರಡು ಚಿತ್ರಗಳು ಜಂಟಿಯಾಗಿ ಪ್ರಶಸ್ತಿಗೆ ಭಾಜವಾಗಿವೆ.