ಬೆಂಗಳೂರು, ಜು.20 www.bengaluruwire.com : ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ಯ ಮಾನವ ಸಹಿತ ಗಗನಯಾನ ಕೇಂದ್ರ (Human Space Flight Center) ನಗರದ ನೆಹರು ತಾರಾಲಯದಲ್ಲಿ ಮಾನವ ಸಹಿತ ಗಗನಯಾನ ವಸ್ತುಪ್ರದರ್ಶನ, ಉಪನ್ಯಾಸ ಹಾಗೂ ಕಾರ್ಯಾಗಾರವನ್ನು ಆಯೋಜಿಸಿದೆ.
ನೆಹರು ತಾರಾಲಯದ ಸಹಯೋಗದಲ್ಲಿ ಜು.22ರಿಂದ ಮೂರು ದಿನಗಳ ಕಾಲ ಹ್ಯೂಮನ್ ಸ್ಪೇಸ್ ಫ್ಲೈಟ್ ಎಕ್ಸ್ ಪೋ (Human Space Flight Expo) ಕಾರ್ಯಕ್ರಮವನ್ನು ಆಯೋಜಿಸಿದೆ. ಇಸ್ರೋದ ಮಹತ್ವದ ಮಾನವ ಸಹಿತ ಗಗನಯಾನ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿ ನೆರವೇರಬೇಕಿತ್ತು. ಆದರೆ ಕರೋನಾ ಸೋಂಕು ಹಾಗೂ ಮತ್ತಿತರ ಕಾರಣಗಳಿಂದಾಗಿ ಗಗನಯಾನ ಯೋಜನೆ ವಿಳಂಬವಾಗಿದೆ.
ಈ ಎಕ್ಸ್ ಪೋದಲ್ಲಿ ಗಗನಯಾನ ನೌಕೆಯ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಇದು ಕಾರ್ಯಕ್ರಮಕ್ಕೆ ಭೇಟಿ ನೀಡುವವರನ್ನು ಸೂಜಿಗಲ್ಲಿನಂತೆ ಸೆಳೆಯಲಿದೆ. ಉಳಿದಂತೆ ಇಸ್ರೋ ಸಂಶೋಧನೆ ಮತ್ತು ಕಾರ್ಯಚಟುವಿಟಿಕೆ, ಉಪಗ್ರಹ ನಿರ್ಮಾಣ ಕುರಿತಂತೆ ತಿಳಿಸುವ ಮಾದರಿ ಸ್ಯಾಟಲೈಟ್ ಗಳು ಮತ್ತು ಮಾನವಸಹಿತ ಗಗನಯಾನದಲ್ಲಿ ಬಳಕೆಯಾಗುವ ಇಸ್ರೋ ತಂತ್ರಜ್ಞಾನ ಕುರಿತಂತೆ ವಸ್ತು ಪ್ರದರ್ಶನವಿರಲಿದೆ.
ಗುರುವಾರ ಸಂಜೆ 4 ಗಂಟೆಗೆ ಈ ಎಕ್ಸ್ –ಪೋವನ್ನು ರಾಜ್ಯದ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇಸ್ರೋ ಅಧ್ಯಕ್ಷ ಸೋಮನಾಥ್ ಉಪಸ್ಥಿತರಿರುವರು.
ಗಗನಯಾನ ಕುರಿತಂತೆ ಡೂಮ್ ಶೋ :
ಇದೇ ಮೊದಲ ಬಾರಿಗೆ ಮಾನವ ಸಹಿತ ಗಗನಯಾನ ಕಾರ್ಯಕ್ರಮ ಮತ್ತು ಇಸ್ರೋ ಕಾರ್ಯಗಳ ಬಗ್ಗೆ ತಿಳಿಸುವ ಡೂಮ್ ಶೋ ವಿಡಿಯೋ ಪ್ರದರ್ಶನವಿರಲಿದೆ. ಅದೇ ರೀತಿ ಪ್ರತಿಷ್ಠಿತ ವಿಜ್ಞಾನಿಗಳು, ತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದೆ. ಶಾಲಾ ಮಕ್ಕಳು, ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತಂತೆ ಆಟಗಳು, ಕಾರ್ಯಚಟುವಟಿಕೆಗಳು ಹಾಗೂ ಸ್ಪರ್ಧೆಗಳನ್ನು ಸ್ಪೇಸ್ ಫ್ಲೈಟ್ ಎಕ್ಸ್ ಪೋನಲ್ಲಿ ಆಯೋಜಿಸಲಾಗಿದೆ.
ಹ್ಯೂಮನ್ ಸ್ಪೇಸ್ ಫ್ಲೈಟ್ ಎಕ್ಸ್-ಪೋ 22 ಮತ್ತು 23ರಂದು ಬೆಳಗ್ಗೆ 9.30ರಿಂದ 4.30ರ ತನಕ ವೀಕ್ಷಕರು ಭೇಟಿ ನೀಡಲು ಅವಕಾಶ ಕಲ್ಪಿಸಿದೆ. ಅದೇ ರೀತಿ ಜು.24ರಂದು ಬೆಳಗ್ಗೆ 9.30ರಿಂದ ಸಂಜೆ 3 ಗಂಟೆಯ ತನಕ ನೆಹರು ತಾರಾಲಯದ ಆವರಣದಲ್ಲಿನ ಈ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಭರದಿಂದ ಸಾಗುತ್ತಿದೆ ಗಗನಯಾನ ನೌಕೆ ನಿರ್ಮಾಣ :
ಈ ವರ್ಷದ ಅಂತ್ಯದ ಒಳಗಾಗಿ ಪರೀಕ್ಷಾರ್ಥವಾಗಿ ಮಾನವರಹಿತವಾಗಿ ಗಗನಯಾನ ನೌಕೆಯನ್ನು ಜಿಎಸ್ಎಲ್ ವಿ ಮಾರ್ಕ್-3 ರಾಕೇಟ್ ಮುಖಾಂತರ ಹಾರಿಬಿಡಲಾಗುತ್ತದೆ. ಮುಂದಿನ ವರ್ಷದ ಮಧ್ಯ ಭಾಗದ ವೇಳೆಗೆ ಮಾನವ ಸಹಿತ ಗಗನಯಾನ ಕಾರ್ಯಕ್ರಮವನ್ನು ನಡೆಸಲು ಇಸ್ರೋ ಭರದಿಂದ ತಯಾರಿ ನಡೆಸುತ್ತಿದೆ. ಈಗಾಗಲೇ ಮಾನವ ಸಹಿತ ಗಗನಯಾನ ಕೈಗೊಳ್ಳುವ ನೌಕೆಯ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಈ ಗಗನ ನೌಕೆಯಲ್ಲಿ 150ಕ್ಕೂ ಹೆಚ್ಚು ರೀತಿಯ ಉಪಕರಣ ಹಾಗೂ ಬಿಡಿ ಭಾಗಗಳನ್ನು ಹೊಂದಿದ್ದು, ಎಚ್ಎಎಲ್ ಸೇರಿದಂತೆ ದೇಶೀಯ ಕೈಗಾರಿಕೆಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿವೆ ಎಂದು ಇಸ್ರೋ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.
ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ :
ನೆಹರು ತಾರಾಲಯವು ಇದೇ ಮೊದಲ ಬಾರಿಗೆ ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಚಂದ್ರ ದಿನಚಾರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ಚಂದ್ರನ ಕುರಿತಂತೆ ಉಪನ್ಯಾಸ, ಕಾರ್ಯಾಗಾರವನ್ನು ಏರ್ಪಡಿಸಿತ್ತು. ಮಕ್ಕಳು ಬಹಳ ಉತ್ಸಾಹದಿಂದಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಿದ ಕಾರ್ಯಾಗಾರದಲ್ಲಿ ರಾಯಚೂರು, ಧಾರವಾಡ, ಬಳ್ಳಾರಿ, ಮಂಗಳೂರು, ಕಾರವಾರ ಹಾಗೂ ಬಾಗಲಕೋಟೆಯಲ್ಲಿನ ಶಾಲಾ ಮಕ್ಕಳು, ನೆಹರು ತಾರಾಲಯ ಒದಗಿಸಿದ ಮೂನ್ ಕಿಟ್ ಮೂಲಕ ಚಂದ್ರನ ಕುರಿತಂತೆ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡರು ಎಂದು ನೆಹರು ಪ್ಲಾನಿಟೋರಿಯಂ ನಿರ್ದೇಶಕ ಪ್ರಮೋದ್ ಗಲಗಲಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
1969ರ ಜು.20ರಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳಾದ ನೀಲ್ ಆರ್ಮ್ಸ್ ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಮೊತ್ತ ಮೊದಲ ಬಾರಿಗೆ ಚಂದ್ರನ ಮೇಲೆ ಹೆಜ್ಜೆಯಿರಿಸಿದರು. ಆ ಮೂಲಕ ಚಂದ್ರನ ಮೇಲೆ ಪ್ರಥಮ ಬಾರಿಗೆ ಮಾನವ ಪಾದಾರ್ಪಣೆ ಮಾಡಿದಂತಾಗಿತ್ತು. ಇದರ ಜ್ಞಾಪಕಾರ್ಥ ವಿಶ್ವಸಂಸ್ಥೆಯು ಜು.20ರಂದು ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ ಆಚರಿಸಲು ಮೂನ್ ವಿಲೇಜ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರಸ್ತಾವನೆ ಸಲ್ಲಿಸಿದ್ದವು. ಈ ಹಿನ್ನಲೆಯಲ್ಲಿ ಈ ವರ್ಷದಿಂದ ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಚಂದ್ರ ದಿನಾಚರಣೆ ಆಚರಿಸಲಾಗುತ್ತಿದೆ.