ಬೆಂಗಳೂರು, ಜು.17 www.bengaluruwire.com : ಅನಧಿಕೃತವಾಗಿ ಹುಕ್ಕಾ ಬಾರ್ ತೆರೆದು ಯುವಕರನ್ನು ದಾರಿತಪ್ಪಿಸುತ್ತಿದ್ದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಸಾಷ್ ಸ್ಕೈ ಹುಕ್ಕಾಬಾರ್ ಮೇಲೆ ಬೆಂಗಳೂರು ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ದಾಳಿ ನಡೆಸಿದ ವೇಳೆ 60 ಸಾವಿರ ಮೌಲ್ಯದ ಹುಕ್ಕಾ ತಯಾರಿಸಲು ಬಳಸುತ್ತಿದ್ದ ಪರಿಕರಗಳು, ಹುಕ್ಕಾ ಫ್ಲೇವರ್ ಗಳು ಹಾಗೂ 11 ಸಾವಿರ ನಗದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದಲ್ಲದೆ ಹುಕ್ಕಾಬಾರ್ ಮಾಲೀಕರು ಹಾಗೂ ಕ್ಯಾಶಿಯರ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳು ನಿಯಮಗಳನ್ನು ಉಲ್ಲಂಘಿಸಿ ಹುಕ್ಕಾವನ್ನು ಸರಬರಾಜು ಮಾಡಿ ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿಸಲು ದುಷ್ಪೇರಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ದಾಳಿ :
ರಾಮಮೂರ್ತಿನಗರದಲ್ಲಿ ಹುಡುಗಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ರಾಮಮೂರ್ತಿನಗರದ ಟಿಸಿ ಪಾಳ್ಯದ ಹೆವನ್ ಯೂನಿಸೆಕ್ಸ್ ಹಾಗೂ ಸ್ಪಾ ಮೇಲೆ ದಾಳಿ ನಡೆಸಿರುವ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು 6 ಮಹಿಳೆಯರನ್ನು ಸಂರಕ್ಷಿಸಿ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದಾರೆ.
ಅಲ್ಲದೆ ಬಿಬಿಎಂಪಿಗೆ ಹೆವನ್ ಯೂನಿಸೆಕ್ಸ್ ಹಾಗೂ ಸ್ಪಾ ಗೆ ನೀಡಿರುವ ಲೈಸೆನ್ಸ್ ರದ್ದು ಮಾಡಲು ತಿಳಿಸಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಪ್ರಗತಿಯಲ್ಲಿದೆ.