ಬೆಂಗಳೂರು, ಜು.16 www.bengaluruwire.com : ಬಿಜೆಪಿ ನೇತೃತ್ವದ ಸರ್ಕಾರ ಬೆಳಗ್ಗೆ ಹೊರಡಿಸಿರೋ ಆದೇಶ ರಾತ್ರಿಯಾದ್ರೆ ಇರಲ್ಲ. ಇಂತಹ ಗಳಿಗೆಗೊಂದು ಗಂಟೆಗೊಂದು ಆದೇಶ ಹೊರಡಿಸಿ ಪೇಚೆಗೆ ಸಿಲುಕುತ್ತಿದೆ. ಆ ಪಟ್ಟಿಗೆ ಈಗ ಹೊಸ ಸೇರ್ಪಡೆಯಂದ್ರೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ, ವಿಡಿಯೋ ತೆಗೆಯಬಾರದು ಎಂದು ಶುಕ್ರವಾರ ಬೆಳಗ್ಗೆಯಷ್ಟೇ ಹೊರಡಿಸಿದ್ದ ಆದೇಶವನ್ನು ನಾಗರೀಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿಯೇ ಆ ಆದೇಶವನ್ನು ರದ್ದುಗೊಳಿಸಿದೆ.
ಸರ್ಕಾರದ ಕಚೇರಿಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಸಚಿವಾಲಯದ ಕಚೇರಿಗಳನ್ನು ಹೊರತುಪಡಿಸಿ ಬೇರೆಲ್ಲಾ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅದೇ ರೀತಿ ಆಯಾ ಕಚೇರಿಗಳ ಮುಖ್ಯಸ್ಥರು ಆ ಕಚೇರಿಯಲ್ಲಿನ ವಿವಿಧ ಕೊಠಡಿಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳನ್ನು ಗಮನಿಸಲು ಕೇಂದ್ರೀಕೃತ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗಿತ್ತು. ಈ ವಿಚಾರದಲ್ಲಿ ಮತ್ತಷ್ಟು ಸುಧಾರಣೆ ತರಬೇಕೆಂಬ ಬಗ್ಗೆ ವ್ಯಾಪಕವಾದ ಒತ್ತಾಯ ಇರುವಾಗಲೇ ಕರ್ನಾಟಕ ರಾಜ್ಯ ನೌಕರರ ಸಂಘದ ಮನವಿ ಮೇರೆಗೆ ಸರ್ಕಾರ ಜು.15ರಂದು ಬೆಳಗ್ಗೆ ಈ ಆದೇಶ ಹೊರಡಿಸಿತ್ತು. ಇದು ಮಾಧ್ಯಮಗಳು, ಸಾರ್ವಜನಿಕರು ಸೇರಿದಂತೆ ಸಾಮಾಜಿಕ ವಲಯಗಳಲ್ಲಿ ಸಾಕಷ್ಟು ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗಿತ್ತು.
ಇದಲ್ಲದೆ ‘ಈ ಸರ್ಕಾರದ ಒಂದಲ್ಲಾ ಒಂದು ಭ್ರಷ್ಟಾಚಾರಗಳು ಹೊರಬರುತ್ತಲೇ ಇರುವಾಗ, ಶೇ.40 ಕಿಕ್ ಬ್ಯಾಕ್ ಪಡೆಯುವ ಸರ್ಕಾರ ಎಂಬ ಆರೋಪಕ್ಕೆ ಗುರಿಯಾಗಿರುವಾಗ, ಸರ್ಕಾರವೇ ಭ್ರಷ್ಟಾಚಾರ ನಡೆಯಲು ಅವಕಾಶ ಮಾಡಿಕೊಡಲು ಸರ್ಕಾರಿ ಕಚೇರಿಗಳಲ್ಲಿ ಫೊಟೊ, ವಿಡಿಯೋ ತೆಗೆಯುವುದನ್ನು ನಿರ್ಬಂಧಿಸುವ ಆದೇಶ ಹೇರಿದೆ’ ಎಂದು ವ್ಯಾಪಕ ಟೀಕೆ, ಆರೋಪಗಳು ಸಾಮಾಜಿಕ ಜಾಲತಾಣಗಳು, ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS)ದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಈ ಕುರಿತಂತೆ ದನಿ ಎತ್ತಿದ್ದರು.
ಈ ಹಿನ್ನಲೆಯಲ್ಲಿ ಆದೇಶವನ್ನು ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮಧ್ಯರಾತ್ರಿಯೇ ಈ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಜನವಿರೋಧಿ ಆದೇಶದ ವಿರುದ್ಧ ದಿಟ್ಟತನದಿಂದ ದನಿಯತ್ತಿದ್ದಕ್ಕೆ ಸಿಕ್ಕ ಜಯ :
ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೊಟೊ, ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಿರುವುದನ್ನು ಹಿಂಪಡೆದಿರುವ ಬಗ್ಗೆ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಬೆಂಗಳೂರು ವೈರ್ ಜೊತೆ ಮಾತನಾಡಿ, ‘ಸರ್ಕಾರ ನಿನ್ನೆ ಬೆಳಗ್ಗೆ ಹೊರಡಿಸಿದ್ದ ಜನವಿರೋಧಿ ಆದೇಶವನ್ನು ತಡರಾತ್ರಿ ಹಿಂಪಡೆದಿದೆ. ಇದು ಕೆಆರ್ ಎಸ್ ಹೋರಾಟಕ್ಕೆ ಸಂದ ಜಯ. ನಮ್ಮ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಿ, ಅಲ್ಲಿನ ಹುಳುಕುಗಳನ್ನು ಬಯಲಿಗೆ ಎಳೆಯುತ್ತಿದ್ದರು. ಇದರಿಂದ ಹೆದರಿದ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಆದರೆ ಈ ಬಗ್ಗೆ ನಮ್ಮ ಪಕ್ಷ ದಿಟ್ಟವಾಗಿ ದನಿಯೆತ್ತಿತ್ತು. ಅಲ್ಲದೆ ಮಾಧ್ಯಮಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷಾತೀತವಾಗಿ ಖಂಡಿಸಿದ್ದಾರೆ. ಇದು ಎಲ್ಲರಿಗೂ ಸಿಕ್ಕ ಜಯ. ಇದಕ್ಕಾಗಿ ಎಲ್ಲರಿಗೂ ಪಕ್ಷದ ವತಿಯಿಂದ ಧನ್ಯವಾದ’ ಎಂದು ಅವರು ಹೇಳಿದ್ದಾರೆ.
ರಾಜ್ಯದ ಶಕ್ತಿಕೇಂದ್ರ ವಿಧೌನಸೌಧ ಹಾಗೂ ವಿಕಾಸಸೌಧದಲ್ಲಿನ ಸಚಿವರು ಮತ್ತು ಅಧಿಕಾರಿಗಳ ಕಚೇರಿಗೆ ಮಾಧ್ಯಮದ ಪ್ರತಿನಿಧಿಗಳು ಭೇಟಿ ನೀಡುವುದನ್ನು ಈ ಹಿಂದೆ ಜುಲೈ 2021ರಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ಆನಂತ್ರ ಈ ವಿಚಾರದ ಬಗ್ಗೆ ತೀವ್ರ ಟೀಕೆ, ವಿರೋಧ ವ್ಯಕ್ತವಾದಾಗ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಆದೇಶವನ್ನು ಹಿಂದಕ್ಕೆ ಪಡೆದಿದ್ದರು.