ವಾಷಿಂಗ್ಟನ್, ಜು.12 www.bengaluruwire.com : ಬ್ರಹ್ಮಾಂಡದ ಮೊದಲ ಚಿತ್ರ ಇಂದು ಬಿಡುಗಡೆಯಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಶ್ವೇತಭವನದಲ್ಲಿ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ʻಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (James Webb Space Telescope)ʼನಲ್ಲಿ ತೆಗೆದ ಮೊದಲ ಚಿತ್ರವನ್ನು ಪೂರ್ವವೀಕ್ಷಣೆ ಮಾಡಿ ನಂತರ ಅದನ್ನು ಅನಾವರಣ ಮಾಡಿದರು.
ಈ ಚಿತ್ರವು SMACS 0723 ಎಂಬ ಹೆಸರಿನ ನಕ್ಷತ್ರಪುಂಜ ಸಮೂಹದ ಚಿತ್ರವನ್ನು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಮೊದಲಿಗೆ ಸೆರೆಹಿಡಿದಿದೆ. ಮಸುಕಾದ ಗ್ಯಾಲಾಕ್ಸಿಗಳಿಂದ ಹಿಡಿದು ಸಾವಿರಾರು ಗ್ಯಾಲಾಕ್ಸಿಗಳಿರುವ ಚಿತ್ರವನ್ನು ವೆಬ್ ಸ್ಪೇಸ್ ಟೆಲಿಸ್ಕೋಪ್ ಸೆರೆಹಿಡಿದಿದೆ. ಈ ನಕ್ಷತ್ರಪುಂಜ ಸಮೂಹದ ಚಿತ್ರವು ಆಕಾಶದ ಅತಿಸಣ್ಣ ಭಾಗವಾಗಿದೆ. ಒಬ್ಬ ನೆಲದ ನಿಂತ ಮನುಷ್ಯ ಕೈಯಲ್ಲಿ ಹಿಡಿದ ಒಂದು ಮರಳಿನ ಕಣದಷ್ಟು ಭಾಗದ ಚಿತ್ರ ಇದಾಗಿದೆ ಎಂದು ನಾಸಾ ಹೇಳಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA, ಕೆನಡಾದ ಬಾಹ್ಯಾಕಾಶ ಸಂಸ್ಥೆ (CSA) ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ದೂರದರ್ಶಕದಿಂದ ತೆಗೆದ ಬ್ರಹ್ಮಾಂಡದ ಮೊದಲ ಪೂರ್ಣವಾದ ಬಣ್ಣದ ಚಿತ್ರಗಳನ್ನು ಮತ್ತು ಸ್ಪೆಕ್ಟ್ರೋಸ್ಕೋಪಿಕ್ ಡೇಟಾವನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ಈ ಚಿತ್ರವನ್ನು ಜೋ ಬೈಡನ್ ಬಿಡುಗಡೆಗೊಳಿಸಿದ್ದಾರೆ. ಈ ಚಿತ್ರವು ಸಾವಿರಾರು ಗೆಲಾಕ್ಸಿಗಳು ಮತ್ತು ಇದುವರೆಗೆ ಕಾಣದ ನಕ್ಷತ್ರಪುಂಜಗಳನ್ನು ತೋರಿಸುವ ಸಾಮರ್ಥ್ಯ ಹೊಂದಿದೆ.
ಈ ಚಿತ್ರವನ್ನು ಬಿಡುಗಡೆ ಮಾಡಿದ ಯುಎಸ್ ಅಧ್ಯಕ್ಷ ಜೋ ಬಿಡೆನ್, ‘ಇದೊಂದು ಐತಿಹಾಸಿಕ ದಿನ. ಈ ಸಂದರ್ಭವು ಅಮೆರಿಕಾ ಮತ್ತು ಎಲ್ಲಾ ಮನುಕುಲಕ್ಕೆ ಪ್ರಮುಖ
ಕ್ಷಣವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಈ ಚಿತ್ರಗಳ ಪೂರ್ವವೀಕ್ಷಣೆ ಸಂದರ್ಭದಲ್ಲಿ US ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ‘ಇದು ನಮಗೆಲ್ಲರಿಗೂ ಬಹಳ ರೋಮಾಂಚನಕಾರಿ ಕ್ಷಣವಾಗಿದೆ. ಇಂದು ವಿಶ್ವಕ್ಕೆ ರೋಮಾಂಚನಕಾರಿ ಹೊಸ ಅಧ್ಯಾಯವಾಗಿದೆ’ ಎಂದು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.
ಜೇಮ್ಸ್ ವೆಬ್ ಟೆಲಿಸ್ಕೋಪ್‌ನಿಂದ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದ ನಂತರ NASA ನಿರ್ವಾಹಕ ಬಿಲ್ ನೆಲ್ಸನ್ ಮಾತನಾಡಿ, ‘ನಾವು 13 ಶತಕೋಟಿ ವರ್ಷಗಳಿಗಿಂತಲೂ ಹೆಚ್ಚು ಕಾಲ ಹಿಂತಿರುಗಿ ನೋಡುತ್ತಿದ್ದೇವೆ. ಈ ಚಿಕ್ಕ ಚುಕ್ಕೆಗಳಲ್ಲಿ ಒಂದನ್ನು ನೀವು ನೋಡುತ್ತಿರುವ ಬೆಳಕು 13 ಶತಕೋಟಿ ವರ್ಷಗಳಿಂದ ಪ್ರಯಾಣಿಸುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.
ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಅಧಿಕೃತ ಟ್ವಿಟರ್ ನಲ್ಲಿ ಮೊದಲ ಬಾರಿಗೆ ವಿಶ್ವದ ಅತಿ ನಿಖರ, ತೀಕ್ಷ್ಣವಾದ ಅತಿಗೆಂಪು (Infrared) ಚಿತ್ರವನ್ನು ತೆಗೆಯಲು ಜೇಮ್ಸ್ ವೆಬ್ ಟೆಲಿಸ್ಕೋಪ್ ಗೆ ಕೇವಲ ಒಂದು ದಿನದ ಕೆಲಸವಾಗಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದೆ. ಅಲ್ಲದೆ ಈ ಟೆಲಿಸ್ಕೋಪ್ ನಿಂದ ತೆಗೆದ ಮೊದಲ ಚಿತ್ರವನ್ನು ಹಂಚಿಕೊಂಡಿದೆ.