ಬೆಂಗಳೂರು, ಜು.11 www.bengaluruwire.com : ಕಾಶಿಯಾತ್ರೆ ಕೈಗೊಳ್ಳುವ ಪ್ರಯಾಣಿಕರಿಗಾಗಿ ಪ್ರಧಾನಮಂತ್ರಿಗಳ ಭಾರತ್ ಗೌರವ್ ರೈಲು ಪರಿಕಲ್ಪನೆ ಹಿನ್ನಲೆಯಲ್ಲಿ, ರಾಜ್ಯದಲ್ಲಿಯೂ ಚಾಲನೆ ನೀಡಲಾಗಿದ್ದು, ಸೋಮವಾರ, ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ನಗರದ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿನ ಭಾರತ್ ಗೌರವ್ ರೈಲಿನ ಮೊದಲ ರೇಕ್ ಅನ್ನು ಪರಿಶೀಲಿಸಿದರು.
ನೈಋತ್ಯ ರೈಲ್ವೆಯ ವಾಣಿಜ್ಯ, ಪ್ರಯಾಣಿಕರ ಸೌಕರ್ಯಗಳು ಹಾಗು ಕ್ಯಾಟರಿಂಗ್ ಮುಖ್ಯ ವ್ಯವಸ್ಥಾಪಕ ಡಾ.ಅನುಪ್ ದಯಾನಂದ ಸಾಧು, ಮುಖ್ಯ ರೋಲಿಂಗ್ ಸ್ಟಾಕ್ ಎಂಜಿನಿಯರ್ ಆರ್.ವಿ.ಎನ್. ಶರ್ಮಾ ಜೊತೆ ರೈಲಿಗೆ ಬೇಕಾದ ಅಗತ್ಯ ಮಾರ್ಪಾಡುಗಳು ಮತ್ತು ಇತರ ಅವಶ್ಯಕತೆಗಳ ಬಗ್ಗೆ ಚರ್ಚಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಪ್ರಧಾನಮಂತ್ರಿಗಳ ಭಾರತ್ ಗೌರವ್ ರೈಲು ಉತ್ತಮ ಪರಿಕಲ್ಪನೆಯಾಗಿದೆ. ಜೀವನದಲ್ಲಿ ಒಮ್ಮೆಯಾದರು ಕಾಶಿಯಾತ್ರೆ ಕೈಗೊಳ್ಳಬೇಕೆಂಬುದು ಜನರ ಆಸೆ ಆಗುತ್ತದೆ. ಇದನ್ನು ಪೂರೈಸಬೇಕೆನ್ನುವ ಜನರ ಆಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ಭಾರತ್ ಗೌರವ್ ರೈಲಿನ ವೈಶಿಷ್ಟ್ಯವೇನು ?
ಈ ಯೋಜನೆಗಾಗಿ ರಾಜ್ಯ ಸರ್ಕಾರವು 15 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಭಾರತ್ ಗೌರವ್ ರೈಲು ಬೆಂಗಳೂರಿನಿಂದ ವಾರಣಾಸಿಗೆ ಅಯೋಧ್ಯೆ ಮತ್ತು ಪ್ರಯಾಗರಾಜ್‌ನಲ್ಲಿ ನಿಲುಗಡೆಯೊಂದಿಗೆ ಚಲಿಸುತ್ತದೆ. ಕೇವಲ 7 ದಿನಗಳಲ್ಲಿ 4,161 ಕಿಮೀಗಳನ್ನು ಕ್ರಮಿಸುತ್ತದೆ. ರೈಲು ಒಟ್ಟು 14 ಕೋಚ್‌ಗಳಿಂದ ಕೂಡಿದೆ. ಎಸಿ-3 ಟೈರ್ 11 ಕೋಚ್‌ಗಳು ಇದರಲ್ಲಿ ಇರಲಿದೆ. ರೈಲಿನಲ್ಲಿರುವ ಯಾತ್ರಾರ್ಥಿಗಳಿಗೆ ಪ್ರಯಾಣದ ಸಮಯದಲ್ಲಿ ಭಜನೆ ಮಾಡಲು ಅನುಕೂಲವಾಗುವಂತೆ ಒಂದು ಕೋಚ್ ಅನ್ನು ದೇವಾಲಯವಾಗಿ ಪರಿವರ್ತಿಸಲಾಗುತ್ತದೆ ಎಂದು ರೈಲಿನ ವೈಶಿಷ್ಟ್ಯತೆಗಳ ಬಗ್ಗೆ ಸಚಿವರು ವಿವರಿಸಿದರು
ಕಾಶಿಯಾತ್ರೆ ಶುಲ್ಕ 15 ಸಾವಿರ ರೂ. :
ಪ್ರವಾಸದ ಒಟ್ಟು ಶುಲ್ಕ 15,000 ರೂ. ಆಗಲಿದೆ. ಅದರಲ್ಲಿ 5,000 ರೂ. ಸಬ್ಸಿಡಿಯನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವ್ಯಕ್ತಿಗಳಿಗೆ ನೀಡಲಾಗುತ್ತದೆ. ರೈಲಿನ ಎಲ್ಲಾ 11 ಬೋಗಿಗಳಲ್ಲಿ ಕರ್ನಾಟಕದ ದೇವಾಲಯಗಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರತಿ ವರ್ಷ 30,000 ಜನರಿಗೆ ಈ ಪ್ರಯೋಜನವನ್ನು ನೀಡಲು ಸರ್ಕಾರ ಯೋಜಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
40- 45 ದಿನಗಳಲ್ಲಿ ಮೈಸೂರು ಕಾರ್ಯಾಗಾರದಲ್ಲಿ ರೈಲು ರೇಕ್ ಸಿದ್ಧ :
40 ರಿಂದ 45 ದಿನಗಳಲ್ಲಿ ಮೈಸೂರು ಕಾರ್ಯಾಗಾರದಲ್ಲಿ ರೇಕ್ ಕೂಲಂಕಷವಾಗಿ ಪರಿಶೀಲಿಸಿ ಸಿದ್ಧಗೊಳಿಸಲಾಗುವುದು. ಭಾರತ್ ಗೌರವ್ ರೈಲನ್ನು ಬಳಕೆಯ ಹಕ್ಕಿನೊಂದಿಗೆ ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಗುವುದು. ಇದರಿಂದ ರೈಲ್ವೆಗೆ ವಾರ್ಷಿಕ 20 ಕೋಟಿ ರೂ. ಆದಾಯ ಬರಲಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಯಾತ್ರೆ ಕೈಗೊಳ್ಳುವ ಪ್ರಯಾಣಿಕರಿಗೆ ಅಗತ್ಯವಿರುವ ಆಹಾರ, ಅಡುಗೆ ಮತ್ತು ಇತರ ಮೂಲಭೂತ ಅವಶ್ಯಕತೆಗಳಂತಹ ಎಲ್ಲಾ ಬ್ಯಾಕ್ ಎಂಡ್ ವ್ಯವಸ್ಥೆಗಳನ್ನು ಮಾಡುತ್ತದೆ ಎಂದು ಡಾ.ಅನುಪ್ ದಯಾನಂದ್ ಸಾಧು ಅವರು ಮಾಹಿತಿ ನೀಡಿದರು.
ಭಾರತ್ ಗೌರವ್ ರೈಲುಗಳು ಥೀಮ್ ಆಧಾರಿತ ಸರ್ಕ್ಯೂಟ್ ರೈಲುಗಳಾಗಿವೆ. ಅದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳವನ್ನು ಭಾರತ ಮತ್ತು ಪ್ರಪಂಚದ ಜನರಿಗೆ ಪ್ರದರ್ಶಿಸುತ್ತದೆ. ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟ್ ನಲ್ಲಿ ಭಾರತ್ ಗೌರವ್ ಯೋಜನೆ ಜಾರಿಗೆ ಬಂದಿದ್ದು, ಪ್ರತಿ ರಾಜ್ಯವು ತಮ್ಮದೇ ಪರಿಕಲ್ಪನೆ ಆಧಾರಿತ ಪ್ರವಾಸ ಮತ್ತು ಯಾತ್ರೆಗಳನ್ನು ಆಯೋಜಿಸುತ್ತಿವೆ.