ಬೆಂಗಳೂರು, ಜು.10 www.bengaluruwire.com : ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಎರಡು ಸ್ಥಳಗಳ ಮೇಲೆ ನಗರ ಅಪರಾಧ ವಿಭಾಗ (CCB) ಪೊಲೀಸರು ದಾಳಿ ನಡೆಸಿ 24 ಮಂದಿ ಜೂಜುಕೋರರನ್ನು ಬಂಧಿಸಿ, ಅವರಿಂದ 2.51 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಹಾದ್ರಿ ಲೇಔಟ್ ಕಮಾಂಡರ್ ಗ್ಲೋರಿ ಅಪಾರ್ಟ್ ಮೆಂಟ್ ಹತ್ತಿರವಿರುವ ಮನೆಯೊಂದರಲ್ಲಿ 11 ಮಂದಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿ 13 ಮಂದಿ ಜೂಜುಕೋರರನ್ನು ದಸ್ತಗಿರಿ ಮಾಡಿ ಅವರಿಂದ 1.50 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತೊಂದೆಡೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆ ಮುಖ್ಯರಸ್ತೆಯ ಶ್ರೀಮ್ ಲಾಡ್ಜ್ ರೂಮ್ ನಲ್ಲಿ 11 ಜೂಜುಕೋರರು ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಡದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ. ಅವರಿಂದ 1.01 ಲಕ್ಷ ರೂ. ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಮುಂದಿನ ಕ್ರಮಕ್ಕಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಪೊಲೀಸರು ದೂರು ದಾಖಲಿಸಿದ್ದಾರೆ.