ವಿಜಯಪುರ, ಜು.9 www.bengaluruwire.com : ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ನಡುವೆ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಹಲವೆಡೆಗಳಲ್ಲಿ ಶನಿವಾರ ಬೆಳಗ್ಗೆ ಲಘು ಭೂಕಂಪನದ ಅನುಭವವಾಗಿದೆ.
ಬೆಳಗ್ಗೆ ನಿದ್ದೆ ಮಂಪರಿನಲ್ಲಿದ್ದ ಜನರಿಗೆ ಭೂಕಂಪಿಸಿದ ಅನುಭವವಾದ ಕಾರಣ, ಸಾರ್ವಜನಿಕರು ಭಯದಿಂದ ಮನೆಯಿಂದ ಹೊರಗೆ ಬಂದಿದ್ದರು. ಆದರೆ ಇದೊಂದು ಲಘು ಭೂಕಂಪನ ಆಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ವಿಜಯಪುರ ಜಿಲ್ಲೆಯ ಕನ್ನೂರು ಜಿಲ್ಲಾ ಪಂಚಾಯಿತಿ ವಾಯುವ್ಯ ಭಾಗದಿಂದ 2.3 ಕಿ.ಮೀ ದೂರದಲ್ಲಿ ಬೆಳಗ್ಗೆ 6.22ರ ಸಂದರ್ಭದಲ್ಲಿ ರಿಕ್ಟರ್ ಮಾಪಕದಲ್ಲಿ 4.4 ರ ತೀವ್ರತೆಯ ಭೂಕಂಪನವಾಗಿರುವುದು ದಾಖಲಾಗಿದೆ. ಮಧ್ಯಮ ಪ್ರಮಾಣದ ಭೂಕಂಪನ ಆಗಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್ ಎನ್ ಡಿಎಂಸಿಯ ನಿರ್ದೇಶಕ ಡಾ.ಮನೋಜ್ ರಾಜನ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಭೂಕಂಪನದ ಕೇಂದ್ರ ಸ್ಥಳದಿಂದ 30-40 ಕಿ.ಮೀ ಸುತ್ತಳತೆಯಲ್ಲಿ ಮಧ್ಯಮ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದಿಂದ ಭೂಮಿಯೊಳಗಿನ ಸಂರಚನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಭೂಕಂಪನವಾದ ಪ್ರದೇಶ ಸಿಸ್ಮಿಕ್ -3ನೇ ಹಂತದ ಪ್ರದೇಶಕ್ಕೆ ಸೇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.