ಕೃಷ್ಣಗಿರಿ (ತಮಿಳುನಾಡು), ಜು.6 www.bengaluruwire.com : ತಮಿಳುನಾಡಿನ ಕೊಯಮತ್ತೂರಿನಲ್ಲಿ ಕರ್ನಾಟವೂ ಸೇರಿದಂತೆ ದಕ್ಷಿಣ ಭಾರತದ ಐದು ರಾಜ್ಯಗಳ ರೈತರ ಬೃಹತ್ ಸಮಾವೇಶ ನಡೆಸಲು ಮಂಗಳವಾರ ನಡೆದ ಕೃಷ್ಣಗಿರಿಯ ರೈತ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ರೈತಪರ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಸಾವಿರಾರು ರೈತರ ಸ್ಮರಣೆಯಲ್ಲಿ ಈ ಸಮಾವೇಶ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ರಾಜ್ಯಗಳ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಮುಂದಿನ ದಿನಗಳಲ್ಲಿ ಕೊಯಮತ್ತೂರಿನಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಎಲ್ಲಾ ಕೃಷಿ ಉತ್ಪನ್ನಗಳಿಗೆ ಖಾತರಿ ಕನಿಷ್ಠ ಬೆಂಬಲ ಬೆಲೆ ನಿಗದಿ ಕಾನೂನು ಜಾರಿಗೆ ತರಬೇಕು, ಕೃಷಿ ಉತ್ಪನ್ನ ಹಾಗೂ ಉಪಕರಣಗಳಿಗೆವಿಧಿಸಿರುವ ಜಿಎಸ್ ಟಿ ರದ್ದುಗೊಳಿಸಬೇಕು, ರೈತರ ಕೃಷಿ ಸಾಲ ನೀತಿ ಬದಲಾವಣೆಯಾಗಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು ಸೇರಿದಂತೆ ಹಲವು ಕ್ರಮಗಳನ್ನು ಆಡಳಿತ ನಡೆಸುತ್ತಿರುವ ಸರ್ಕಾರಗಳು ಕೈಗೊಳ್ಳಬೇಕು ಎಂದು ಸಮಾವೇಶದಲ್ಲಿ ರೈತ ಮುಖಂಡರು ಆಗ್ರಹಿಸಿದರು.
ಸಮಾವೇಶದಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯದ ರೈತಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಖಾಸಗಿ ಬಂಡವಾಳ ನೀತಿಯಿಂದ ಹಳ್ಳಿಗಳು ಆರ್ಥಿಕ ದಿವಾಳಿ ಆಗುತ್ತಿವೆ. ಗ್ಯಾಟ್ ಒಪ್ಪಂದ ಜಾರಿಯಾದ ನಂತರ ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚಲು ಕಾರಣವಾಗಿದೆ. ಕೃಷಿ ಸಂಸ್ಕೃತಿ ನಾಶವಾಗುತ್ತಿದೆ. ದೇಶದ ಸಂಸ್ಕೃತಿ ಉಳಿಸಲು ಹೋರಾಟ ನಡೆಸುವ ಕೇಂದ್ರದ ಬಿಜೆಪಿ ಸರ್ಕಾರದಿಂದ ರೈತರ ಬಲಿಯಾಗುತ್ತಿದೆ. ಇದನ್ನು ತಪ್ಪಿಸಲು ದೇಶಾದ್ಯಂತ ರೈತರು ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ತಮಿಳುನಾಡು ರಾಜ್ಯದ ರೈತ ಮುಖಂಡ ದೈವಸಿಗಮನಿ ಮಾತನಾಡಿ, ದೆಹಲಿ ರೈತ ಹೋರಾಟದ ಮಾದರಿಯಲ್ಲಿ ಐದು ರಾಜ್ಯಗಳ ಒಂದು ಲಕ್ಷ ರೈತರ ಸೇರ್ಪಡೆಯೊಂದಿಗೆ ಕೊಯಮತ್ತೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡೋಣ ಎಂದರು.
ಕಾರ್ಯಕ್ರಮದದ ಅಧ್ಯಕ್ಷತೆ ವಹಿಸಿದ್ದ ರಾಮನ ಗೌಂಡರ್ ಮಾತನಾಡಿ, ಬ್ಯಾಂಕುಗಳು ಕೃಷಿ ಸಾಲ ನೀಡಲು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.
ಕೇಂದ್ರ ಸರ್ಕಾರದ ಖಾಸಗಿ ನೀತಿ, ರೈತ ವಿರೋಧಿ ಕಾನೂನುಗಳ ಬಗ್ಗೆ ತೆಲಂಗಾಣ ರಾಜ್ಯದ ರೈತ ಮುಖಂಡ ನರಸಿಂಹ ನಾಯ್ಡು ಮಾತನಾಡಿದರು. ಸಮಾವೇಶಕ್ಕೆ ಮೊದಲು ಕೃಷ್ಣಗಿರಿಯಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು ಇದರಲ್ಲಿ ಸಹಸ್ರಾರು ರೈತರು ಭಾಗವಹಿಸಿದ್ದರು.