ಬೆಂಗಳೂರು, ಜು.5 www.bengaluruwire.com : ರಾಜಧಾನಿಯೂ ಸೇರಿದಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM)ಯ ವ್ಯಾಪ್ತಿಯಲ್ಲಿನ ಎಂಟು ಜಿಲ್ಲೆಗಳಲ್ಲಿ 2019-20 ರಿಂದ ಮೂರು ವರ್ಷ ಎರಡು ತಿಂಗಳಲ್ಲಿ ಬರೋಬ್ಬರಿ 11,072 ವಿದ್ಯುತ್ ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ.
ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು 3.2 ವರ್ಷದಲ್ಲಿ 8,10,176 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದಾಗ 11,072 ಪ್ರಕರಣಗಳಲ್ಲಿ ವಿದ್ಯುತ್ ಕಳ್ಳತನ ಮಾಡಿರುವುದನ್ನು ಪತ್ತೆ ಹಚ್ಚಿದೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಮನೆ, ವಾಣಿಜ್ಯ ಕಟ್ಟಡ, ಕಾರ್ಖಾನೆ ಮತ್ತಿತರ ಕಟ್ಟಡಗಳ ಮಾಲೀಕರಿಗೆ 88.56 ಕೋಟಿ ರೂ. ದಂಡ ವಿಧಿಸಿದ್ದಾರೆ.
ಆದರೆ ಈತನಕ ಬೆಸ್ಕಾಂ ಜಾಗೃತ ಅಧಿಕಾರಿಗಳು ಕೇವಲ 37.47 ಕೋಟಿ ರೂ. ಮೊತ್ತದ ದಂಡವನ್ನು ಸಂಗ್ರಹಿಸಿದ್ದಾರೆ. ಬರೋಬ್ಬರಿ 51.09 ಕೋಟಿ ರೂ. ದಂಡದ ಮೊತ್ತವನ್ನು ಸಂಗ್ರಹಿಸುವಲ್ಲಿ ವಿಫಲವಾಗಿದೆ.
2019-20ನೇ ಸಾಲಿನಿಂದ ಮೂರು ವರ್ಷ ಎರಡು ತಿಂಗಳ ಕಾಲಾವಧಿಯಲ್ಲಿ, 2021-22ನೇ ಆರ್ಥಿಕ ವರ್ಷದಲ್ಲಿ 3.61 ಲಕ್ಷ ಪ್ರಕರಣಗಳಲ್ಲಿ ಪರಿಶೀಲನೆ ನಡೆಸಿರುವುದೇ ಅತಿ ಹೆಚ್ಚು. ಈ ವರ್ಷದಲ್ಲಿ ಅಷ್ಟು ಪರಿಶೀಲನೆ ನಡೆಸಿದ್ದರೂ, ಕೇವಲ 4,730 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣಗಳಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದವರಿಗೆ 41.66 ಕೋಟಿ ರೂ. ದಂಡ ವಿಧಿಸಿದ್ದರೂ, ಕೇವಲ 13.92 ಕೋಟಿ ರೂ. ದಂಡದ ಮೊತ್ತವನ್ನು ಮಾತ್ರ ದಂಡ ರೂಪದಲ್ಲಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಬೆಸ್ಕಾಂ ತಾಂತ್ರಿಕ ನಿರ್ದೇಶಕರ ಎಚ್ಚರಿಕೆ ಏನು?
“ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ಬೆಸ್ಕಾಂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಮೊದಲ ಬಾರಿ ವಿದ್ಯುತ್ ಕಳ್ಳತನ ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಅಕ್ರಮ ವಿದ್ಯುತ್ ಸಂಪರ್ಕ ಪಡೆಯುವುದನ್ನು ಮುಂದುವರೆಸಿದರೆ ಭಾರತೀಯ ವಿದ್ಯುತ್ ಕಾಯ್ದೆ2003ರ ಸೆಕ್ಷನ್ 135ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾನೂನಿನಲ್ಲಿ ಮೂರು ವರ್ಷಗಳ ತನಕ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ. ಸಾರ್ವಜನಿಕರಿಗೆ ವಿದ್ಯುತ್ ಕಳ್ಳತನದ ಬಗ್ಗೆ ಮಾಹಿತಿ ದೊರೆತರೆ ಬೆಸ್ಕಾಂ ಸಹಾಯವಾಣಿ 1912ಗೆ ಕರೆಮಾಡಿ ತಿಳಿಸಬಹುದು.”
– ಡಿ.ನಾಗಾರ್ಜುನ, ಬೆಸ್ಕಾಂ ತಾಂತ್ರಿಕ ನಿರ್ದೇಶಕರು
ಗ್ರಾಹಕಶಕ್ತಿ ಸಂಘಟನೆಯ ಮ್ಯಾನೇಜಿಂಗ್ ಟ್ರಸ್ಟಿ ಏನಂತಾರೆ?
“ವಿದ್ಯುತ್ ಕಳ್ಳತನ ಬಹಳ ಗಂಭೀರ ವಿಚಾರ. ಹೆಚ್ಚಿನ ವಿದ್ಯುತ್ ಗ್ರಾಹಕರಿಗೆ ಇದೊಂದು ಶಿಕ್ಷಾರ್ಹ ಅಪರಾಧ ಎಂಬ ತಿಳುವಳಿಕೆಯಿಲ್ಲ. ಈ ನಿಟ್ಟಿನಲ್ಲಿ ಬೆಸ್ಕಾಂ ಜಾಗೃತಿ ಮೂಡಿಸಬೇಕು. 2019ರಲ್ಲಿ ಜಯನಗರ, ಇಂದಿರಾನಗರ, ಮಲ್ಲೇಶ್ವರ ಹಾಗೂ ರಾಜಾಜಿನಗರ ಪ್ರದೇಶದಲ್ಲಿ ಬೆಸ್ಕಾಂ ಜಾಗೃತದಳ ಕಾರ್ಯಾಚರಣೆ ನಡೆಸಿ ವಿದ್ಯುತ್ ಕಳ್ಳತನ ಮಾಡಿದವರಿಗೆ 17.46 ಕೋಟಿ ರೂ. ದಂಡ ವಿಧಿಸಿ, 7.92 ಕೋಟಿ ರೂ. ವಸೂಲಿ ಮಾಡಿತ್ತು. ಇದು ಕೇವಲ ಶಿಕ್ಷಿತ ಸಮುದಾಯ ಇರುವ ಪ್ರದೇಶದ ಉದಾಹರಣೆ. ಬೇರೆ ಕಡೆ ಪರಿಸ್ಥಿತಿ ನೀವೇ ಊಹಿಸಿ. ವಿದ್ಯುತ್ ಕಳ್ಳತನ ಪರಿಶೀಲನೆ, ವಿಚಾರಣೆ, ದಂಡ ವಸೂಲಿ ವಿಚಾರದಲ್ಲಿ ಮತ್ತಷ್ಟು ಪಾರದರ್ಶಕತೆಯ ಅವಶ್ಯಕತೆಯಿದೆ.”
– ಸೋಮಶೇಖರ್.ವಿ.ಕೆ, ಮ್ಯಾನೇಜಿಂಗ್ ಟ್ರಸ್ಟಿ, ಗ್ರಾಹಕ ಶಕ್ತಿ