ಬೆಂಗಳೂರು, ಜು.4 www.bengaluruwire.com : ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಡಾ.ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರ ನೇತೃತ್ವದಲ್ಲಿ ಇಂದು ಎರಡನೇ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಆಡಳಿತಗಾರರಾದ ರಾಕೇಶ್ ಸಿಂಗ್ ರವರು ಮಾತನಾಡಿ, ನಗರದಲ್ಲಿ ಸಂಚಾರ ದಟ್ಟಣೆಯ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಮುಖ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅಲ್ಪಾವದಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ರೂಪಿಸಿಕೊಂಡು ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ ವಾರ (ಜೂ.28ರಂದು) ಗೊರಗುಂಟೆ ಪಾಳ್ಯ, ಹೆಬ್ಬಾಳ ಹಾಗೂ ಕೆ.ಆರ್.ಪುರ ಜಂಕ್ಷನ್ ಗಳನ್ನು ಜಂಟಿ ತಪಾಸಣೆ ನಡೆಸಿ ಅಲ್ಪಾವಧಿ ಯೋಜನೆಗಳನ್ನು ಜಾರಿಗೊಳಿಸಲು ಸೂಚಿಸಲಾಗಿತ್ತು. ಅದರಂತೆ ಗೊರಗುಂಟೆ ಪಾಳ್ಯ ಜಂಕ್ಷನ್ ನಲ್ಲಿ ಪೊಲೀಸ್ ಚೌಕಿ ತೆರವುಗೊಳಿಸಿ ಸುಗಮ ವಾಹನಗಳ ತಿರುವಿಗೆ ಅವಕಾಶ ಕಲ್ಪಿಸಲಾಗಿದೆ. ಹೆಬ್ಬಾಳ ಜಂಕ್ಷನ್ ನಲ್ಲಿ ಮೀಡಿಯನ್‌ಗೆ ಬ್ಯಾರಿಕೇಡ್ ಅಳವಡಿಸಿ ಸರ್ವೀಸ್ ರಸ್ತೆಯಿಂದ ಬರುವ ಬಸ್ ಗಳನ್ನು ಜಂಕ್ಷನ್ ಕೆಳಗಿರುವ ರ‍್ಯಾಂಪ್ ಮೂಲಕ ಹೋಗಲು ಅವಕಾಶ ನೀಡಲಾಗಿದೆ. ಅಲ್ಲದೆ ಬಸ್ ಗಳನ್ನು ರ‍್ಯಾಂಪ್ ಗಿಂದ ಮುಂಭಾಗದಲ್ಲೇ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೆ ವಾಹನಗಳ ಸಂಚಾರಕ್ಕೆ ಅನುವಾಗುವಂತೆ ಮಾರ್ಗಗಳ ಸೂಚನಾ ಫಲಕಗಳನ್ನು ಕೂಡಾ ಅಳವಡಿಸಲು ಸೂಚಿಸಿದರು. ಕೆ.ಆರ್.ಪುರ ಜಂಕ್ಷನ್ ನಲ್ಲಿ ಬಸ್ ನಿಲ್ದಾಣದ ಸ್ಥಳಕ್ಕೆ ಇಂದು ಡಾಂಬರೀಕರಣ ಮಾಡಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ 10 ಪ್ರಮುಖ ಜಂಕ್ಷನ್‌ಗಳ ಪೈಕಿ ಈಗಾಗಲೇ ಗೊರಗುಂಟೆ ಪಾಳ್ಯ ಜಂಕ್ಷನ್, ಹೆಬ್ಬಾಳ ಜಂಕ್ಷನ್ ಹಾಗೂ ಕೆ.ಆರ್.ಪುರ ಜಂಕ್ಷನ್ ಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ಇನ್ನುಳಿದಂತೆ ಕೆ.ಎಸ್ ಲೇಔಟ್ ಜಂಕ್ಷನ್, ಆರ್.ಆರ್-ಎಂ.ಆರ್ ಜಂಕ್ಷನ್, ಸಾರಕ್ಕಿ ಜಂಕ್ಷನ್, ಸಿಲ್ಕ್ ಬೋರ್ಡ್ ಜಂಕ್ಷನ್, ಇಬ್ಲೂರ್ ಜಂಕ್ಷನ್, ಜಯದೇವ ವೃತ್ತ ಹಾಗೂ ಕಾಡುಬೀಸನಹಳ್ಳಿ ಜಂಕ್ಷನ್ ಗಳಿಗೆ ಭೇಟಿ ನೀಡಿ ಅಲ್ಪಾವಧಿ ಹಾಗೂ ಧೀರ್ಘಾವದಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಂಚಾರ ದಟ್ಟಣೆಯಾಗುವುದನ್ನು ನಿಯಂತ್ರಿಸಲು ಕಾರ್ಯಪ್ರವೃತ್ತರಾಬೇಕಿದೆ ಎಂದರು.
ಈ ಸಂಬಂಧ ಇದೇ ಬುಧವಾರ (ಜು.6ರಂದು) ಇಬ್ಬಲೂರು, ಸೆಂಟ್ರಲ್ ಸಿಲ್ಕ್ ಬೋರ್ಡ್, ಸಾರಕ್ಕಿ ಹಾಗೂ ಜಯದೇವ ವೃತ್ತಕ್ಕೆ ಭೇಟಿ ನೀಡಲು ಪರಿಶೀಲಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಚಾರಿ ಪೊಲೀಸ್ ಇಲಾಖೆ ವತಿಂದ ಪ್ರಮುಖ ರಸ್ತೆಗಳಲ್ಲಿ ಗುರುತಿಸಿದ ನೀರು ನಿಲ್ಲುವ ಸ್ಥಳಗಳು ಹಾಗೂ ಹದಗೆಟ್ಟ ರಸ್ತೆಗಳ ದುರಸ್ತಿ ಕಾರ್ಯವು ಪ್ರಗತಿಯಲ್ಲಿದ್ದು, ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ನಗರದ ಎಂಟೂ ವಲಯಗಳಾದ್ಯಂತ ರಸ್ತೆಗುಂಡಿ ಮುಚ್ಚುವ ಕಾರ್ಯ ಸರಿಯಾಗಿ ಆಗಬೇಕು. ಈ ಸಂಬಂಧ ಎಲ್ಲಾ ವಲಯಗಳ ಮುಖ್ಯ ಅಭಿಯಂತರರುಗಳು ತಮ್ಮ ವಾರ್ಡ್ ಗಳಲ್ಲಿ ಗುರುತಿಸಿರುವ ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಗುಂಡಿಗಳನ್ನು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರ ನೇತೃತ್ವದಲ್ಲಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಆದೇಶಿಸಿದರು.
ನಗರದಲ್ಲಿ ಜಲಮಂಡಳಿ ವತಿಯಿಂದ ಕುಡಿಯುವ ನೀರು ಹಾಗೂ ಒಳ ಚರಂಡಿ ಕಾಮಗಾರಿ ಪೂರ್ಣಗೊಳಿಸಿರುವ ರಸ್ತೆಗಳನ್ನು ಪಟ್ಟಿಯನ್ನು ಇದೇ ಸಂದರ್ಭದಲ್ಲಿ ಪಡೆದರು. ಆ ರಸ್ತೆಗಳ ಪುನಶ್ಚೇತನ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇನ್ನು ಅವೆನ್ಯೂ ರಸ್ತೆ ಕಾಮಗಾರಿಯನ್ನು 1 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಜಯರಾಮ್, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕರು ಅಂಜುಂ ಪರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೆ ಗೌಡ, ಸ್ಮಾರ್ಟ್ ಸಿಟ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಬಿಬಿಎಂಪಿ ಐಟಿ ನಿರ್ದೇಶಕ ಸೂರ್ಯ ಸೇನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.