ಬೆಂಗಳೂರು, ಜೂ.26 www.bengaluruwire.com : ರಾಜಧಾನಿ ಬೆಂಗಳೂರು ಮಾದಕ ವಸ್ತು ಕಳ್ಳಸಾಗಣೆ ಮತ್ತು ಸೇವನೆಯ ದೊಡ್ಡ ಅಡ್ಡ ಆಗ್ತಿದ್ಯಾ ಎಂಬ ಆತಂಕ ಎದುರಾಗಿದೆ. ಬೆಂಗಳೂರು ನಗರ ಪೊಲೀಸರು ನೀಡಿರುವ ಅಧಿಕೃತ ಮಾಹಿತಿ ಪ್ರಕಾರ 2021 ಹಾಗೂ 2022ರ ಜೂನ್ 26ರ ತನಕ ಸಿಲಿಕಾನ್ ಸಿಟಿಯಲ್ಲಿ 5,710 ಕೆಜಿ ತೂಕದ ವಿವಿಧ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿವಿಧ ಪ್ರಕರಣಗಳಲ್ಲಿ ನಗರ ಪೊಲೀಸರು 6,271 ಪ್ರಕರಣಗಳನ್ನು ದಾಖಲಿಸಿ 8,015 ಮಂದಿಯನ್ನು ಬಂಧಿಸಿದ್ದಾರೆ. ಹೀಗೆ ಬಂಧಿಸಿರುವವರಲ್ಲಿ 186 ವಿದೇಶಿ ಪ್ರಜೆಗಳು ಸೇರಿದ್ದಾರೆ ಎಂಬುದು ಮತ್ತೊಂದು ಕಳವಳಕಾರಿ ವಿಷಯ. ಮಾದಕವಸ್ತು ಕಳ್ಳಸಾಗಣಿಕೆದಾರರಿಂದ ವಶಪಡಿಸಿಕೊಳ್ಳಲಾದ ಈ ಡ್ರಗ್ಸ್ ಗಳ ಮೌಲ್ಯ 115 ಕೋಟಿ ರೂ. ಗಳಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ವಿಶ್ವ ಮಾದಕವಸ್ತುಗಳ ಸೇವನೆ ಮತ್ತು ಕಳ್ಳಾಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಈ ಮಾತಾನಾಡಿದ ಅವರು, 2021-22ನೇ ಸಾಲಿನಲ್ಲಿ ಗಾಂಜಾ, ಅಫೀಮು, ಎಂಡಿಎಂ, ಎಕ್ಸ್ ಟೆಸಿ ಮಾತ್ರೆ, ಎಲ್ಎಸ್ ಡಿ ಸ್ಟ್ರಿಪ್ಸ್ ಸೇರಿದಂತೆ ವಿವಿಧ ರೀತಿಯ ಮಾದಕವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದ 4,555 ಪ್ರಕರಣಗಳಲ್ಲಿ 5,753 ಮಂದಿಯನ್ನು ಬಂಧಿಸಿ ಅವರಿಂದ 60 ಕೋಟಿ ರೂ. ಬೆಲೆಬಾಳುವ 3,705 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.
ಅದೇ ರೀತಿ 2022ರ ಜೂನ್ 26ರ ತನಕ 1,716 ಪ್ರಕರಣಗಳಲ್ಲಿ 2,262 ಆರೋಪಿಗಳನ್ನು ಬಂಧಿಸಿ ಅವರಿಂದ 55 ಕೋಟಿ ರೂ. ಮೌಲ್ಯದ 2,005 ಕೆಜಿ ತೂಕದ ಡ್ರಗ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 2021 ಹಾಗೂ 2022ರ ಇಸವಿಯಲ್ಲಿ ಈತನಕ ದಾಖಲೆ ಪ್ರಮಾಣದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿ ಸ್ಥಳೀಯ ಹಾಗೂ ವಿದೇಶಿ ಪ್ರಜೆಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ರೀತಿ ಇವುಗಳನ್ನು ಸೇವಿಸುತ್ತಿದ್ದ ಗ್ರಾಹಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
4,353 ಕೆಜಿ ಡ್ರಗ್ಸ್ ನಾಶ ಮಾಡಲು ಕ್ರಮ :
25 ಆಗಸ್ಟ್ 2021ರಿಂದ 2022ರ ಇಸವಿಯ ಜೂನ್ 26ರ ತನಕ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ 41.80 ಕೋಟಿ ರೂ. ಮೌಲ್ಯದ 4,353 ಕೆಜಿ ತೂಕದ ಎಂಡಿಎಂಎ, ಎಕ್ಸ್ ಟೆಸಿ ಮಾತ್ರೆಗಳು ಹಾಗೂ 2,995 ಎಲ್ಎಸ್ ಡಿ ಸ್ಟ್ರಿಪ್ಸ್ ಸೇರಿದಂತೆ ವಿವಿಧ ರೀತಿಯ ಮಾದಕವಸ್ತುಗಳನ್ನು ನಾಶಪಡಿಸಲಾಗುವುದು. ಇದಕ್ಕಾಗಿ ನ್ಯಾಯಾಲಯದಿಂದ ಆದೇಶ ಪಡೆಯಲಾಗಿದೆ ಎಂದು ಸುದ್ದಿಗಾರರಿಗೆ ವಿವರಿಸಿದರು.
ವಿವಿಧ ರಾಜ್ಯಗಳಿಂದ ರಾಜಧಾನಿಗೆ ಮಾದಕದ್ರವ್ಯ ಕಳ್ಳಸಾಗಾಣೆ :
ಬೆಂಗಳೂರಿಗೆ ಮಾದಕದ್ರವ್ಯಗಳಲ್ಲಿ ಹೆಚ್ಚಾಗಿ ತೆಲಂಗಾಣ, ಒಡಿಶಾ, ಆಂದ್ರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಮ್ ರಾಜ್ಯಗಳಿಂದ ಗಾಂಜಾ ಕಳ್ಳಸಾಗಾಣಿಕೆಯಾಗುತ್ತದೆ. ದೆಹಲಿ, ಪಂಜಾಬ್, ಮಹಾರಾಷ್ಟ್ರ, ಕೇರಳ ಹಾಗೂ ಗೋವಾ ರಾಜ್ಯಗಳಿಂದ ಎಂಡಿಎಂಎ ಹಾಗೂ ಎಕ್ಸ್ ಟೆಸಿ ಮಾತ್ರೆಗಳು ಸರಬರಾಜಾಗುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ. ಕರ್ನಾಟಕ ರಾಜ್ಯದ ಗಡಿ ಭಾಗಗಳಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಮಾದಕವಸ್ತು ಕಳ್ಳಸಾಗಾಣಿಕೆ ಮತ್ತು ಅದರಲ್ಲಿ ತೊಡಗಿರುವವರ ಮಾಹಿತಿಯನ್ನು ಆಗಾಗ ನಗರ ಪೊಲೀಸರು ವಿನಿಮಯ ಮಾಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಇಷ್ಟೊಂದು ಪ್ರಮಾಣದಲ್ಲಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿದೇಶಿ ಪ್ರಜೆಗಳ ಮಾಹಿತಿಯನ್ನು ಮನೆ ಮಾಲೀಕರು ನೀಡದಿದ್ದಲ್ಲಿ ಕಠಿಣ ಕ್ರಮ :
ನಗರದಲ್ಲಿ ವಿದೇಶಿ ಪ್ರಜೆಗಳಿಗೆ ಬಾಡಿಗೆ ಮನೆ ನೀಡುವ ಮುನ್ನ ಅವರ ಪಾಸ್ ಪೋರ್ಟ್, ವಿಸಾ ಸೇರಿದಂತೆ ಸರ್ಕಾರ ನೀಡಿರುವ ದಾಖಲೆಗಳನ್ನು ಪರಿಶೀಲಿಸಿ, ನಂತರ ಅವರೊಂದಿಗೆ ಕರಾರುಪತ್ರ ಮಾಡಿಕೊಳ್ಳಬೇಕು. ಈ ವಿದೇಶಿ ಪ್ರಜೆಗಳ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮನೆ ಮಾಲೀಕರು ತಪ್ಪದೇ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಅಂತಹ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.