ಬೆಂಗಳೂರು, ಜೂ.25 www.bengaluruwire.com : ಕರೋನಾ ಸೋಂಕಿನಿಂದ ಆರ್ಥಿಕ ಸಂಪನ್ಮೂಲ ಸಂಗ್ರಹದಲ್ಲಿ ತತ್ತರಿಸಿ ಹೋಗಿದ್ದ ರಾಜ್ಯ ಸರ್ಕಾರವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೈ ಹಿಡಿದಿದೆ. ಇದೇ ಪ್ರಥಮ ಬಾರಿಗೆ ಇಲಾಖೆಯ ಇತಿಹಾಸದಲ್ಲಿ, ಬರೋಬ್ಬರಿ 14,246 ಕೋಟಿ ರೂ. ದಾಖಲೆ ರೀತಿಯಲ್ಲಿ ಆದಾಯ ಸಂಗ್ರಹವಾಗಿದೆ.
2021-21ನೇ ಸಾಲಿಗಾಗಿ ರಾಜ್ಯ ಸರ್ಕಾರವು 12,655 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಆದಾಯ ಸಂಗ್ರಹಿಸುವ ಗುರಿ ನೀಡಿತ್ತು. ಅದರ ಎದುರಾಗಿ ಇಲಾಖೆಯಲ್ಲಿ ಈ ಆರ್ಥಿಕ ವರ್ಷದಲ್ಲಿ ವ್ಯವಹಾರಗಳು ಚುರುಕುಗೊಂಡು 14,246 ಕೋಟಿ ರೂ. ಸಂಗ್ರಹವಾಗಿ ಗುರಿ ಮೀರಿದ ಸಾಧನೆ ಮಾಡಿದಂತಾಗಿದೆ.
2020-21ರ ಆರಂಭದಲ್ಲಿ ಕರೋನಾ ಸೋಂಕಿನ ಮೊದಲ ಅಲೆ ವ್ಯಾಪಕವಾದಾಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆದಾಯ ನೆಲಕಚ್ಚಿತ್ತು. 2021-22ನೇ ಆರ್ಥಿಕ ವರ್ಷದ ಆಗಸ್ಟ್ ಬಳಿಕ ಇಲಾಖೆಯಲ್ಲಿ ಆಸ್ತಿ, ಒಪ್ಪಂದ ಮತ್ತಿತರ ದಾಖಲೆಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರದಲ್ಲಿ ಗಮನಾರ್ಹವಾಗಿ ಏರಿಕೆಯಾಗುತ್ತಾ ಬಂದಿದೆ. ಆಗಸ್ಟ್ 2021ರಲ್ಲಿ 1,056.73 ಕೋಟಿ ರೂ. ಗುರಿಯ ಬದಲಿಗೆ 1,269.98 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. 2022ರ ಫೆಬ್ರವರಿ ವೇಳೆಗೆ ಇಲಾಖೆಯಲ್ಲಿ ವಿವಿಧ ಆಸ್ತಿ, ಜಮೀನು ಮತ್ತಿತರ ದಾಖಲೆಗಳ ನೋಂದಣಿ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಂಡಿತ್ತು. 1,248.59 ಕೋಟಿ ರೂ. ಗುರಿಯ ಬದಲಿಗೆ 1,309.14 ಕೋಟಿ ರೂ. ಹಣ ಸರ್ಕಾರದ ಖಜಾನೆ ಸೇರಿತ್ತು. 2021-22ರ ವರ್ಷಾಂತ್ಯವಾದ ಮಾರ್ಚ್ ನಲ್ಲಂತೂ 1,505 ಕೋಟಿ ರೂ. ಬದಲಿಗೆ 1,977 ಕೋಟಿ ರೂ. ನಷ್ಟು ಹಣ ಆದಾಯ ರೂಪದಲ್ಲಿ ಹರಿದು ಬಂದಿತ್ತು.
ಇಲಾಖೆಯ ಆದಾಯ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿತ್ತು ಈ ಡಿಸ್ಕೌಂಟ್ :
ಕರೋನಾ ಸೋಂಕಿನಿಂದ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರು ಆರ್ಥಿಕ ಸಮಸ್ಯೆಯಿಂದ ತತ್ತರಿಸಿದ್ದು, ಆಸ್ತಿ ನೋಂದಣಿ ಮತ್ತು ಆರ್ಥಿಕ ವ್ಯವಹಾರಕ್ಕೆ ಚೇತರಿಸಿಕೊಳ್ಳಲು, ರಾಜ್ಯಾದ್ಯಂತ ಇರುವ ಕೃಷಿಭೂಮಿ, ಕೃಷಿಯೇತರ ಭೂಮಿ, ಕಟ್ಟಡ, ಮನೆ, ಅಪಾರ್ಟ್ ಮೆಂಟ್, ಫ್ಲ್ಯಾಟ್, ವಿಲ್ಲಾ, ಭೂಪರಿವರ್ತಿತ ಜಮೀನುಗಳು ಸೇರಿದಂತೆ ವಿವಿಧ ಸ್ಥಿರಾಸ್ತಿಗಳ ಖರೀದಿ ಮತ್ತು ಮಾರಾಟ ಮಾಡುವಾಗ, ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಘೋಷಿಸಿತ್ತು. ಜನವರಿ 1ರಿಂದ ಮಾರ್ಚ್ 31ರ ಒಳಗೆ ಖರೀದಿ ಮತ್ತು ಮಾರಾಟ ಮಾಡುವ ಆಸ್ತಿಗಳಿಗೆ ಈ ರಿಯಾಯಿತಿ ಅನ್ವಯವಾಗುತ್ತಿತ್ತು. ಆದ್ದರಿಂದ ನೋಂದಣಿ ಮತ್ತು ಮುಂದ್ರಾಂಕ ಶುಲ್ಕ ಸಂಗ್ರಹದಲ್ಲಿ ಏರಿಕೆ ಕಂಡು ಬರಲು ಸಾಧ್ಯವಾಯಿತು.
2022-23ನೇ ಆರ್ಥಿಕ ವರ್ಷದ ಎರಡು ತಿಂಗಳಲ್ಲಿ ಭರ್ಜರಿ ಕಲೆಕ್ಷನ್ :
ಇದರಿಂದ ಪ್ರೇರಿತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನಃ ಏಪ್ರಿಲ್ 21ರಿಂದ ಮೂರು ತಿಂಗಳವರೆಗೆ ಅಂದರೆ ಆಗಸ್ಟ್ 20ನೇ ತಾರೀಖಿನ ವರೆಗೆ ಈ ರಿಯಾಯಿತಿಯನ್ನು ಮುಂದುವರೆಸಿ ಆದೇಶಿಸಿದ್ದಾರೆ. ಹೀಗಾಗಿ 2022-23ನೇ ಸಾಲಿನ ಆರ್ಥಿಕ ವರ್ಷದ ಆರಂಭದಲ್ಲೂ ಕೂಡ ಇದೇ ಟ್ರೆಂಡ್ ಮುಂದುವರೆದಿದೆ. ಹೀಗಾಗಿ ಸ್ಟಾಂಪ್ ಎಂಡ್ ರಿಜಿಸ್ಟ್ರೇಷನ್ ಇಲಾಖೆಯ ಆದಾಯ ಏಪ್ರಿಲ್- ಮೇ ತಿಂಗಳಿನಲ್ಲಿ 2,405 ಕೋಟಿ ರೂ. ಸಂಗ್ರಹವಾಗಿದೆ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 1.81 ಲಕ್ಷ ದಾಖಲೆಗಳು ನೋಂದಣಿಯಾಗಿ 1,089 ಕೋಟಿ ರೂ. ಆದಾಯ ಲಭ್ಯವಾಗಿದೆ. ಕಳೆದ ವರ್ಷಕ್ಕಿಂತ 29 ಸಾವಿರ ದಾಖಲೆಗಳು ಹೆಚ್ಚಾಗಿ ರಿಜಿಸ್ಟರ್ ಆಗಿ ಇಲಾಖೆಗೆ ಏಪ್ರಿಲ್ ತಿಂಗಳ ಒಂದರಲ್ಲೇ ಹಿಂದಿನ ವರ್ಷದ ಇದೇ ಅವಧಿಯಲ್ಲಿ 238 ಕೋಟಿ ರೂ. ಆದಾಯ ಹೆಚ್ಚುವರಿಯಾಗಿ ಸಂಗ್ರಹವಾಗಿದೆ. ಇನ್ನು ಮೇ ತಿಂಗಳಿನ ಒಂದರಲ್ಲೇ 1.96 ಲಕ್ಷ ದಾಖಲೆಗಳು ರಿಜಿಸ್ಟರ್ ಆಗಿ 1,129 ಕೋಟಿ ರೂ. ಆದಾಯ, ಕಂದಾಯ ಇಲಾಖೆಯ ಖಜಾನೆ ಸೇರಿದೆ. ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತೆ ಗರಿಗೆದರಿರುವುದಕ್ಕೆ ಇದೇ ಸಾಕ್ಷಿ ಎನ್ನಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಒಟ್ಟು 15,000 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ಇಲಾಖೆ ಹೊಂದಿದೆ.
ಇಲಾಖೆಯ ಕಚೇರಿ ಸಮಯ ಬದಲಾವಣೆಗೆ ಅಧಿಕಾರಿ- ಸಿಬ್ಬಂದಿ ವರ್ಗ ಒತ್ತಾಯ :
ಸಾರ್ವಜನಿಕರ ಹಿತದೃಷ್ಠಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವ್ಯಾಪ್ತಿಯ ಉಪ ನೋಂದಣಿ ಕಚೇರಿಗಳ ಕೆಲಸದ ವೇಳೆಯನ್ನು ಈ ವರ್ಷದ ಆರಂಭದಲ್ಲೇ ಬೆಳಿಗ್ಗೆ 9.30ರಿಂದ 5 ಗಂಟೆಯ ಬದಲಿಗೆ, ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯವರೆಗೂ ವಿಸ್ತರಿಸಿ ಆದೇಶಿಸಲಾಗಿತ್ತು. ಆನಂತರ ಈ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ. ಇದರಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕರೋನಾ ಸೋಂಕು ಕಡಿಮೆಯಾಗಿದ್ದು, ಇತರ ಸರ್ಕಾರಿ ಕಚೇರಿಯ ವೇಳೆಯಂತೆ ತಮ್ಮ ಇಲಾಖೆಯ ಕಚೇರಿ ಅವಧಿಯನ್ನು ಮೊದಲಿನಂತೆ ಮಾರ್ಪಡಿಸಲು ಕೋರಿದ್ದಾರೆ. ಆದರೂ ಈವರೆಗೂ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ ಎಂದು ನೋಂದಣಿ ಇಲಾಖೆಯ ಅಧಿಕಾರಿಗಳು ಬೆಂಗಳೂರು ವೈರ್ ಜೊತೆ ಅಳಲು ತೋಡಿಕೊಂಡಿದ್ದಾರೆ.
ಕಳೆದ 11 ವರ್ಷದಲ್ಲಿ ಮೂರು ಬಾರಿ ಮಾತ್ರ ಅತಿಹೆಚ್ಚು ಆದಾಯ ಸಂಗ್ರಹ :
ಮುದ್ರಣ ಮತ್ತು ನೋಂದಣಿ ಇಲಾಖೆಯ 2011-12ನೇ ಸಾಲಿನಿಂದ 2021-22ನೇ ಸಾಲಿನ ವರೆಗಿನ ಈ 11 ವರ್ಷದ ಇಲಾಖೆಯ ಆದಾಯ ಗುರಿ ಮತ್ತು ವಾಸ್ತವ ಸಂಗ್ರಹದ ಮೊತ್ತವನ್ನು ಗಮನಿಸಿದಾಗ ಕೇವಲ ನಾಲ್ಕು ಆರ್ಥಿಕ ವರ್ಷದಲ್ಲಿ ಮಾತ್ರ ಗುರಿಯನ್ನು ಮೀರಿ ಉತ್ತಮ ಸಾಧನೆ ಮಾಡಲಾಗಿದೆ (2011-12ರಲ್ಲಿ 4,250 ಕೋಟಿ ರೂ. ಗುರಿಯನ್ನು ಮೀರಿ 4,971.53 ಕೋಟಿ ರೂ. ಸಂಗ್ರಹವಾಗಿತ್ತು. 2018-19ರಲ್ಲಿ 10,400 ಕೋಟಿ ರೂ. ಗುರಿಯ ಬದಲಿಗೆ 10,845 ಕೋಟಿ ರೂ. ಹೆಚ್ಚುವರಿಯಾಗಿ ಆದಾಯ ಹರಿದು ಬಂದಿತ್ತು. ಇನ್ನು ಈ ಎರಡು ಆರ್ಥಿಕ ವರ್ಷ ಹೊರತುಪಡಿಸಿದರೆ ಈ ಒಂದು ದಶಕದಲ್ಲೇ 2021-22ರ ಸಾಲಿನಲ್ಲಿ 12,655 ಕೋಟಿ ರೂ. ಗುರಿಯ ಬದಲಿಗೆ 14,246 ಕೋಟಿ ರೂ. ಅತಿಹೆಚ್ಚು ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗಿ ಹೊಸ ದಾಖಲೆ ನಿರ್ಮಾಣವಾಗಿದೆ.
ವಿವಿಧ ಐದು ಆರ್ಥಿಕ ವರ್ಷದಲ್ಲಿ ಗುರಿಗಿಂತ ಕಳಪೆ ಸಾಧಿಸಿದ್ದ ಇಲಾಖೆ :
ಆರ್ಥಿಕ ವರ್ಷ | ಗುರಿ ( ಕೋಟಿ ರೂ.ಗಳಲ್ಲಿ) | ವಾಸ್ತವ ಸಂಗ್ರವಾದ ಆದಾಯ (ಕೋಟಿ ರೂ.ಗಳಲ್ಲಿ) |
2013-14ನೇ | 6,500 | 6,226.22 |
2014-15ನೇ ಆರ್ಥಿಕ ವರ್ಷ | 7,450 | 7,070.24 |
2016-17ನೇ ಆರ್ಥಿಕ ವರ್ಷ | 9,100 | 7,830.77 |
2019-20ನೇ ಆರ್ಥಿಕ ವರ್ಷ | 11,828 | 11,451.05 |
2020-21ನೇ ಆರ್ಥಿಕ ವರ್ಷ | 12,655 | 10,705.16 |
ಈ ಮೇಲಿನ ಐದು ವರ್ಷಗಳಲ್ಲಿ ಇಲಾಖೆ ನಿಗಧಿಪಡಿಸಿದ್ದ ಗುರಿಗಿಂತ ಕಳಪೆ ಸಾಧನೆಯಾಗಿದ್ದು 2020-21ನೇ ಆರ್ಥಿಕ ವರ್ಷದಲ್ಲಿ. ಇದಕ್ಕೆ ಕರೋನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ನಾಡಿನಾದ್ಯಂತ ಆರ್ಥಿಕ ಚಟುವಟಿಕೆಗಳು ಕುಸಿದಿದ್ದಲ್ಲದೆ, ದೇಶಾದ್ಯಂತ ಪದೇ ಪದೇ ಲಾಕ್ ಡೌನ್ ಆಗಿದ್ದು, ರಾಜ್ಯ ಸರ್ಕಾರದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ಮೇಲೆ ವ್ಯಾಪಕ ಪರಿಣಾಮ ಬೀರಿತ್ತು.
ಒಟ್ಟಾರೆ ಕರೋನಾ ಸೋಂಕಿನ ಹಾವಳಿ ಬಳಿಕ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರ ಚೇತರಿಕೆಯ ಹಾದಿ ಹಿಡಿದಿರುವುದು ಉತ್ತಮ ಬೆಳವಣಿಗೆಯಾಗಿದೆ.