ಬಾಲಸೋರ್, ಜೂ.24 www.bengaluruwire.com : ಭಾರತೀಯ ನೌಕಾಪಡೆ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜಂಟಿಯಾಗಿ ಇಂದು ಭೂಮೇಲ್ಮೈ ನಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ (VL-SRSAM) ಯನ್ನು ಒಡಿಸಾದ ಚಾಂದಿಪುರದಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.
ಭಾರತೀಯ ನೌಕಾಪಡೆಯ ಹಡಗಿನಿಂದ ಸಮಗ್ರ ಪರೀಕ್ಷಾ ಸ್ಥಳದಲ್ಲಿ (Integrated Test Range – ITR), ಆಕಾಶದ ಮೂಲಕ ಕಡಿಮೆ ವ್ಯಾಪ್ತಿಯಿಂದ ಶತ್ರುಪಾಳೆಯದಿಂದ ಎದುರಾಗುವ ಅಪಾಯಗಳನ್ನು ನಿಗ್ರಹಿಸಲು ನೌಕಾಪಡೆಯ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ ಬಳಸಲು ರೀತಿಯಲ್ಲಿ ವಿಎಲ್-ಎಸ್ಆರ್ ಎಸ್ ಎಎಮ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ.
ವಿಮಾನದ ರೀತಿ ವೇಗದಲ್ಲಿ ಸಾಗುವ ವಸ್ತುವನ್ನು ಗುರಿಯಾಗಿರಿಸಿಕೊಂಡು ಈ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಗಿದ್ದು, ಈ ಪ್ರಯೋಗವು ಯಶಸ್ವಿಯಾಗಿದೆ ಎಂದು ಡಿಆರ್ ಡಿಒ ಮತ್ತು ಭಾರತೀಯ ನೌಕಪಡೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಎಲ್-ಎಸ್ಆರ್ ಎಸ್ ಎಎಮ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಡಿಆರ್ ಡಿಒ, ಭಾರತೀಯ ನೌಕಾಪಡೆ ಹಾಗೂ ಸಂಬಂಧಿತ ಕೈಗಾರಿಕೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ಭಾರತೀಯ ನೌಕಪಡೆಯ ಹಡಗುಗಳಿಗೆ ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯು, ಮತ್ತಷ್ಟು ಬಲ ತುಂಬಿರುವುದಾಗಿ ತಿಳಿಸಿದ್ದಾರೆ.
ರಕ್ಷಣಾ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರ್ಯದರ್ಶಿ ಹಾಗೂ ಡಿಆರ್ ಡಿಒ ಅಧ್ಯಕ್ಷರಾದ ಡಾ.ಜಿ.ಸತೀಶ್ ರೆಡ್ಡಿ, ಭಾರತೀಯ ನೌಕಾಪಡೆಯ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ ಸ್ವದೇಶಿ ನಿರ್ಮಿತ ಕ್ಷಿಪಣಿ ಸೇರ್ಪಡೆಯಾಗಲು ಸಮರ್ಥವಿರುವುದನ್ನು ಸಾಬೀತು ಮಾಡಿರುವ ಹಿನ್ನಲೆಯಲ್ಲಿ ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯಲ್ಲಿ ತೊಡಗಿದ್ದ ತಂಡವನ್ನು ಅಭಿನಂದಿಸಿದ್ದಾರೆ. ಅಲ್ಲದೆ ವಿಎಲ್-ಎಸ್ಆರ್ ಎಸ್ ಎಎಮ್ ಕ್ಷಿಪಣಿ ನೌಕಾಪಡೆಯ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ (Aatmanirbhar Bharat) ಪರಿಕಲ್ಪನೆಗೆ ಈ ಕಾರ್ಯ ಮೈಲುಗಲ್ಲಾಗಿದೆ ಎಂದು ತಿಳಿಸಿದ್ದಾರೆ.