ಬೆಂಗಳೂರು, ಜೂ.22 www.bengaluruwire.com : ರಾಜ್ಯದ 104 ಗ್ರಾಮ ಪಂಚಾಯ್ತಿಗಳಲ್ಲಿ ಅಳವಡಿಸಿರುವ ಕೇಂದ್ರಿಕೃತ ಆರಂಭಿಕ ವಿಪತ್ತು ಎಚ್ಚರಿಕಾ ವ್ಯವಸ್ಥೆ (DEWS) ಸೇರಿದಂತೆ ರಾಜ್ಯದಲ್ಲಿ ವಿಪತ್ತು ನಿರ್ವಹಣೆ ಕುರಿತಂತೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSNDMA) ಕೈಗೊಂಡಿರುವ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ವರ್ಲ್ಡ್ ಕಾಂಗ್ರೆಸ್ ಆನ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ 2021 (WCDM) ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.
ನವದೆಹಲಿಯಲ್ಲಿ ಬುಧವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಕೃಷ್ಣಾರೆಡ್ಡಿಯವರು ಕೆಎಸ್ ಡಿಎಂಎ ಆಯುಕ್ತ ಮನೋಜ್ ರಾಜನ್ ಕಂದಾಯ ಇಲಾಖೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಡಬ್ಲ್ಯುಸಿಡಿಎಮ್ ಜೈವಿಕ ವಿಪತ್ತುಗಳು, ಸಾಂಕ್ರಾಮಿಕ ರೋಗ ಸೇರಿದಂತೆ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳ ಅಪಾಯ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆ, ವಿಶ್ವವಿದ್ಯಾಲಯ, ವೈಯುಕ್ತಿಕ ವ್ಯಕ್ತಿ, ಸಾಋವಜನಿಕ ಸಂಸ್ಥೆಗಳು, ಸೇನಾಪಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ರ್ಲ್ಡ್ ಕಾಂಗ್ರೆಸ್ ಆನ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಪ್ರಶಸ್ತಿಗಾಗಿ ನಾಮನಿರ್ದೇಶಿತರಾಗುವ ವ್ಯಕ್ತಿ ಮತ್ತು ಸಂಸ್ಥೆಗಳ ಬಗ್ಗೆ ಕಠಿಣ ಪರಿಶೀಲನೆ ನಡೆಸಿದ ವಿಶೇಷ ಜ್ಯೂರಿಗಳು ಮಾನವನಿಗೆ ಅಪಾಯಕಾರಿಯಾಗುವ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ (GEDDMP)ಯಲ್ಲಿ ತುರ್ತು ಸಂದರ್ಭದಲ್ಲಿ ತುರ್ತು ಪ್ರತಿಕ್ರಿಯಾ ಸಿದ್ಧತೆ (ERP) ಹಾಗೂ ಒಂದು ಭೂಪ್ರದೇಶ ಕುರಿತ ಭೌಗೋಳಿಕ ಮಾಹಿತಿ ಕುರಿತಂತೆ ತಂತ್ರಜ್ಞಾನ ರೂಪಿಸಿ ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. ಇದರಿಂದ ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣೆಗಾಗಿ ಮಾಹಿತಿ ಪಡೆದು, ಯೋಜನೆ ರೂಪಿಸಲು ಸಹಾಯಕವಾಗಲಿದೆ. ಈ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಬ್ಲ್ಯುಸಿಡಿಎಮ್ ಜ್ಯೂರಿ 2021ರ ಸಾಲಿನ ವರ್ಲ್ಡ್ ಕಾಂಗ್ರೆಸ್ ಆನ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಪ್ರಶಸ್ತಿಗಾಗಿ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಆಯ್ಕೆ ಮಾಡಿದೆ.