ಮೈಸೂರು, ಜೂ.21, www.bengaluruwire.com : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮೈಸೂರಿನ ಅರಮನೆ ಮುಂಭಾಗದಲ್ಲಿ ನಡೆದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಭಾಗವಹಿಸಿದ್ದರು. ತದನಂತರ ಆಹ್ವಾನದ ಮೇರೆಗೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಿಂದ ವಿಶೇಷ ಆತಿಥ್ಯ ಸ್ವೀಕರಿಸಿದರು.
ಅರಮನೆ ಕಡೆ ಸಾಗುವಾಗ ದಾರಿಯುದ್ದಕ್ಕೂ ಹಾಗೂ ಅರಮನೆ ಒಳಭಾಗದಲ್ಲಿಯೂ ಪ್ರಧಾನಿಯವರನ್ನು ಕಂಡು ಜನರು ಜೈಕಾರ ಹಾಕಿದರು. ಆಗ ಮೋದಿ ಕೈ ಬೀಸಿ ಹರ್ಷೋಧ್ಘಾರ ವ್ಯಕ್ತಪಡಿಸಿದರು. ಅರಮನೆ ಆನೆ ಬಾಗಿಲು ಮೂಲಕ ಮೋದಿಯವರು ಪ್ಯಾಲೇಸ್ ಒಳಗೆ ಪ್ರವೇಶಿಸುವಾಗ ರಾಜಮಾತೆ ಪ್ರಮೋದಾದೇವಿ ಒಡೆಯರ್ ಆತ್ಮೀಯವಾಗಿ ಹೂಗುಚ್ಛ ನೀಡಿ ಬರಮಾಡಿಕೊಂಡರು.
ಅರಮನೆಯಲ್ಲಿ ರಾಜ ಕುಟುಂಬದ ಜೊತೆ ಕೆಲ ಕಾಲ ಮಾತುಕತೆ ನಡೆಸಿದ ಮೋದಿಯವರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುತ್ರ ಆದ್ಯವೀರ್ ಗೆ ಸಿಹಿಮುತ್ತು ನೀಡಿ ಮುದ್ದಿಸಿದರು.
ಮೈಸೂರು ರಾಜವಂಶಸ್ಥರ ಮಾಲೀಕತ್ವದ ಫರ್ನ್ ಹಿಲ್ ಪ್ಯಾಲೇಸ್ ಹಾಗೂ ರಿಜೆನ್ಸಿ ವಿಲ್ಲಾದಿಂದ ಬಂದಿದ್ದ ಬಾಣಸಿಗರು ನರೇಂದ್ರ ಮೋದಿ ಅವರಿಗಾಗಿ ರುಚಿಯಾದ ತಿಂಡಿ ತಿನಿಸುಗಳನ್ನು ತಯಾರಿಸಿದರು.
ಪೊಂಗಲ್, ದೋಸೆ, ಇಡ್ಲಿ, ಉಪ್ಪಿಟ್ಟು, ಮದ್ದೂರು ವಡೆ, ಕಾಶಿ ಹಲ್ವಾ, ಮೈಸೂರು ಪಾಕ್ ವಿಶೇಷವಾಗಿ ಆ ಬಾಣಸಿಗರು ತಯಾರಿಸಿದ್ದರು. ಅರಮನೆಗೆ ಆಗಮಿಸಿದ ದೇಶದ ಪ್ರಧಾನಿಗೆ ರಾಜವಂಶಸ್ಥರು ದಕ್ಷಿಣ ಭಾರತದ ತಿಂಡಿಗಳನ್ನು ಅರಮನೆಯ ಬೆಲೆಬಾಳುವ ಬೆಳ್ಳಿ ಬಟ್ಟಲಲ್ಲಿ ಉಣಬಡಿಸಿದರು.
ಕೊನೆಗೆ ಮೋದಿ ಅವರ ಜೊತೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್, ತ್ರಿಷಿಕಾ ಕುಮಾರಿ, ಮಗ ಆದ್ಯವೀರ್ ಸೇರಿ ಗ್ರೂಪ್ ಪೋಟೊ ತೆಗಸಿಕೊಂಡರು. ಕೊನೆಗೆ ಹೊರಡುವಾಗ ಅಕ್ಷ ಕುಮಾರ ವಧೆ ಮಾಡುತ್ತಿರುವ ಅಪರೂಪದ ಪಂಚಮುಖಿ ಆಂಜನೇಯ ಪೋಟೋವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಮೋದದೇವಿ ಒಡೆಯರ್ ಉಡುಗೊರೆ ನೀಡಿದರು. ಪಂಚಮುಖಿ ಆಂಜನೇಯ ವರಹಾ, ಗರುಡ, ಆಂಜನೇಯ, ನರಸಿಂಹ ಹಾಗೂ ಹಯಗ್ರೀವ ಅವತಾರ ಹೊಂದಿತ್ತು.
ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮೈಸೂರಿನಲ್ಲಿನ ದಸರಾ ವಸ್ತುಪ್ರದರ್ಶನ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಕುರಿತಾದ ವಸ್ತುಪ್ರದರ್ಶನವನ್ನು ವೀಕ್ಷಣೆ ಮಾಡಿದರು.