ಬೆಂಗಳೂರು, ಜೂ.20, www.bengaluruwire.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಬೆಂಗಳೂರಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ, ಪೂರ್ಣಗೊಂಡ ಯೋಜನೆಗಳನ್ನು ಉದ್ಘಾಟಿಸಿದರು.
ಮೊದಲಿಗೆ ಭಾರತೀಯ ವಿಜ್ಞಾನ ಸಂಸ್ಥೆ (IISC)ಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಮೆದುಳು ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ಹಾಗೂ 425 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಆನಂತರ ನಾಗರಬಾವಿಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕ್ಯಾಂಪಸ್ ಉದ್ಘಾಟಿಸಿದರು. ಹಾಗೂ ಯೂನಿವರ್ಸಿಟಿಯಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಯನ್ನು ಅನಾವರಣಗೊಳಿಸಿದರು. ಉನ್ನತೀಕರಿಸಿದ ರಾಜ್ಯದ ಒಟ್ಟು 150 ಐಟಿಐ ಸಂಸ್ಥೆಗಳ ಲೋಕಾರ್ಪಣೆ ಮಾಡಿದರು.
ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ 33 ಸಾವಿರ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಕೊಂಕಣ ರೈಲು ಮಾರ್ಗದ ಶೇ.100% ವಿದ್ಯುದೀಕರಣ, ನೂತನ ಸರ್.ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ – ಪೆನುಕೊಂಡ ಜೋಡಿ ರೈಲು ಮಾರ್ಗಗಳ ಉದ್ಘಾಟನೆ ಹಾಗೂ ಹೊಸ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು.
ಅಲ್ಲದೆ ಬೆಂಗಳೂರು ಉಪ ನಗರ ರೈಲು ಯೋಜನೆಗೆ ಹಾಗೂ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ನಂತರ ಉಕ್ರೇನ್ ನಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನ ಗೌಡರ್ ಅವರ ತಂದೆ ಶೇಖರಪ್ಪ ಗ್ಯಾನಗೌಡರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ಮಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಸತಿ ಹಾಗೂ ಮೂಲಸೌಲಭ್ಯ ಸಚಿವರಾದ ವಿ.ಸೋಮಣ್ಣ ಮತ್ತಿತರರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.