ಬೆಂಗಳೂರು, ಜೂ.19, www.bengaluruwire.com :
ಮಣ್ಣು ಉಳಿಸಿ ಭಾಗವಾಗಿ ದೇಶ ವಿದೇಶಗಳಲ್ಲಿ ಬೈಕ್ ಯಾತ್ರೆ ನಡೆಸುತ್ತಿರುವ ಈಶ ಫೌಂಡೇಷನ್ ಸಂಸ್ಥಾಪಕರಾದ ಸದ್ಗುರು ವಾಸುದೇವ್ ಬೆಂಗಳೂರಿಗೆ ಆಗಮಿಸಿ, ಮಣ್ಣು ಉಳಿಸುವ (Save Soil) ಅಭಿಯಾನದ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಭಾನುವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಡಂಬಡಿಕೆ ಮಾಡಿಕೊಂಡರು.
ಮೂವತ್ತು ದಿನದಲ್ಲಿ ದೇಶ ವಿದೇಶಗಳಲ್ಲಿ ಬರೋಬ್ಬರಿ 30 ಸಾವಿರ ಕಿ.ಮೀ ದೂರ ಬೈಕ್ ನಲ್ಲಿ ಯಾತ್ರೆ ಮಾಡಿ ಮಣ್ಣಿನ ಮಹತ್ವವನ್ನು ಎಲ್ಲೆಡೆ ಸಾರುವ ಕಾರ್ಯವನ್ನು ನಡೆಸಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ನಗರದಲ್ಲಿ ಇಂದು ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮಣ್ಣು ಉಳಿಸುವ ಕುರಿತು ಸದ್ಗುರು ಸರಕಾರದ ಸಹಕಾರ ಕೋರಿದರು. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಡಂಬಡಿಕೆಗೆ ಸಹಿ ಹಾಕಿದರು.
ಭಾರತದ ಮಣ್ಣಿನಲ್ಲಿ ಜೈವಿಕ ಅಂಶ ಕೇವಲ ಶೇ.0.68 ಮಾತ್ರ :
ಈಶ ಫೌಂಡೇಷನ್ ಸದ್ಗುರು ಮಾತನಾಡಿ, 40ಕ್ಕೂ ಹೆಚ್ಚು ದೇಶಗಳಿಗೆ, 9 ರಾಜ್ಯಗಳಿಗೆ ಭೇಟಿ ನೀಡಿ ಮಣ್ಣಿನ ಮಹತ್ವ ಪ್ರಚಾರ ಪಡಿಸಲಾಗಿದೆ. ಇನ್ನು ಈಶ ಫೌಂಡೇಶನ್ 192 ದೇಶಗಳಲ್ಲಿ ಮಣ್ಣುಗಳ ಅಧ್ಯಯನ ಮಾಡಿದೆ. ಇದರಲ್ಲಿ ಬೆರಳಣಿಕೆಯ ದೇಶಗಳು ಮಾತ್ರ ಮಣ್ಣಿನಲ್ಲಿ ಶೇ.3ರಷ್ಟು ಜೈವಿಕ ಅಂಶ ಹೊಂದಿವೆ. ನಮ್ಮ ದೇಶದಲ್ಲಿ ಇದರ ಪ್ರಮಾಣ ಶೇ.0.68ರಷ್ಟಿದೆ. ಮೂರರಷ್ಟು ಇರಬೇಕಿದ್ದ ಮಣ್ಣಿನ ಜೈವಿಕ ಅಂಶ ಹಲವು ದೇಶದಲ್ಲಿ ಶೇ.1ರಷ್ಟು ಇಲ್ಲ.
ಯಾವ ದೇಶದ ಮಣ್ಣಿನಲ್ಲಿ ಜೈವಿಕ ಅಂಶ ಶೇ.1ಕ್ಕಿಂತ ಕಡಿಮೆ ಇದೆಯೋ ಅಲ್ಲಿ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಪ್ರತಿಯೊಬ್ಬರೂ ಮನೆ ಮುಂದೆ ಸಸಿ ನೆಡಿ. ಅಲ್ಲಿ ಜೈವಿಕ ಮಣ್ಣು ಹೆಚ್ಚಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಸದ್ಗುರು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಭವಿಷ್ಯದಲ್ಲಿ ಆಹಾರ ಉತ್ಪಾದನೆ ಮೇಲೆ ದುಷ್ಪರಿಣಾಮ :
ಭವಿಷ್ಯದಲ್ಲಿ ಆಹಾರ ಉತ್ಪಾದನೆ ಮೇಲೆ ಈ ಪರಿಸ್ಥಿತಿಯಿಂದ ದೊಡ್ಡ ಪರಿಣಾಮ ಬೀರಲಿದೆ. ಪ್ರತಿಯೊಬ್ಬರೂ ಮಣ್ಣಿನ ರಕ್ಷಣೆಗೆ ಮುಂದಾಗಬೇಕಿದೆ. ಆಧುನಿಕತೆ ಬೆಳೆಯುತ್ತಿದ್ದಂತೆ ಮಾನವೀಯತೆ ಮರೆಯಾಗುತ್ತಿದೆ. ಯುದ್ಧ, ಪ್ರಕೃತಿ ವಿಕೋಪಗಳಿಗೆ ಭೂಮಿ ಸಾಕ್ಷಿಯಾಗುತ್ತಿದೆ.
ಮುಂದೆ ನಾಗರೀಕ ಯುದ್ಧ ನಡೆದರೆ, ಯುಕ್ರೇನ್ ನಂತಹ ದೇಶಗಳಿಗೆ ಹಸಿದ ಮಕ್ಕಳಿಗೆ ಆಹಾರ ನೀಡಲಾಗದ ಪರಿಸ್ಥಿತಿ ಬರುತ್ತದೆ. ಆಹಾರವೇ ಸಿಗುವುದಿಲ್ಲವೆಂದರೆ ಎಲ್ಲದೂ ನಾಶವಾಗುತ್ತೆ. ನಾಗರೀಕತೆ, ಮಾನವೀಯತೆ ಮರೆಯಾಗಿ ಕ್ರೂರತೆ ಸ್ಥಾಪನೆಯಾಗುತ್ತದೆ. ಈಗಾಗಲೇ ಪ್ರಪಂಚಾದ್ಯಂತ 27 ಸಾವಿರ ಸಸ್ಯ ಸಂಕುಲ ನಾಶವಾಗುತ್ತಿದೆ ಎಂದು ಪರಿಸ್ಥಿತಿಯ ಭೀಕರತೆ ತೆರೆದಿಟ್ಟರು.
70 ವರ್ಷದಲ್ಲಿ ಪ್ರಕೃತಿಗೆ ಸಾಕಷ್ಟು ಹಾನಿಯಾಗಿದೆ :
ನಮ್ಮ ಭೂಮಿಯನ್ಮು ನಾವು ಉಳಿಸಬೇಕಿದೆ.
ಕಳೆದ 70 ವರ್ಷದಲ್ಲಿ ನಾವು ಪ್ರಕೃತಿಗೆ ಸಾಕಷ್ಟು ಹಾನಿ ಮಾಡಿದ್ದೀವಿ. ಇನ್ನು ಮುಂದೆ ನಮ್ಮ ತಾಯಿಯಂಥ ಭೂಮಿಯ ಮಣ್ಣು ಉಳಿಸುವ ಕೆಲಸ ಮಾಡಬೇಕಿದೆ ಎಂದು ಸದ್ಗುರು ವಾಸುದೇವ್ ಅಭಿಪ್ರಾಯಪಟ್ಟರು.
ಕಾವೇರಿ ಕಾಲಿಂಗ್ ವೇಳೆ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಸಹಕಾರ ಮರೆಯಲಾಗುವುದಿಲ್ಲ. ಇದೀಗ ಮಣ್ಣು ಉಳಿಸಿ ಅಭಿಯಾನಕ್ಕೆ ಎಲ್ಲೆಡೆಯಿಂದ ಬೆಂಬಲ ಸಿಗುತ್ತಿದೆ. ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ. ಇದು ಸಂತೋಷದ ವಿಚಾರ ಎಂದರು.
ರಾಜ್ಯದಲ್ಲಿ ಅರಣ್ಯ ನಾಶ ತಡೆದು, ಜೈವಿಕ ಮಣ್ಣಿನ ಅಂಶ ಉಳಿಸುವಲ್ಲಿ ರಾಜ್ಯ ಸರ್ಕಾರ ಬದ್ದ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಆಹಾರ ಉತ್ಪಾದನೆಗೆ ಲಭ್ಯವಿರುವ ಮಣ್ಣನ್ನು ನಾವು ಲಭ್ಯ ಮಾಡಿಕೊಳ್ಳದೆ ಸಾಕಷ್ಟು ಮಾರ್ಪಾಡು ಮಾಡಿಕೊಳ್ಳುತ್ತಿದ್ದೇವೆ. ಸದ್ಗುರು ಕೈಗೊಂಡಿರುವ ಮಣ್ಣು ಉಳಿಸಿ ಅಭಿಮಾನ ಅರ್ಥಪೂರ್ಣವಾಗಿದೆ. ಈ ಅಭಿಮಾನಕ್ಕೆ ಭಾಗಿಯಾಗಿ ನೈಸರ್ಗಿಕ ಸಂಪನ್ಮೂಲವನ್ನು ಉಳಿಸಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಸದ್ಗುರು ಅಭಿಮಾನಿಗಳು, ಪರಿಸರ ಪ್ರೇಮಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಮಣ್ಣು ಉಳಿಸಿ ಅಭಿಯಾನದ ಬೈಕ್ ಯಾತ್ರೆ ಬೆಂಗಳೂರಿನಿಂದ ಮೈಸೂರಿನತ್ತ ಸದ್ಗುರು ಪಯಣ ಬೆಳಸಲಿದ್ದಾರೆ. ಯಾತ್ರೆ ಉದ್ದಕ್ಕೂ ಇದು ಕೇವಲ ಇದು ಮಣ್ಣಲ್ಲೋ ಮಂಕುತಿಮ್ಮ ಎಂದು ಮತ್ತೆ ಮತ್ತೆ ತಿಳಿಹೇಳುವ ಹೇಳುವ ಕಾಯಕ ಸದ್ಗುರು ಮುಂದುವರೆಸಲಿದ್ದಾರೆ.
ಬೃಹತ್ ಸಮಾವೇಶದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಿಕ್ಷಣ ಸಚಿವ ನಾಗೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.