ಕೋಟ (ಉಡುಪಿ ಜಿಲ್ಲೆ), ಜೂ.18, www.bengaluruwire.com : ಕಡಲತೀರ ಭಾರ್ಗವ ಎಂದೇ ಪ್ರಖ್ಯಾತಿ ಹೊಂದಿದ್ದ ಹಿರಿಯ ಸಾಹಿತಿ ಡಾ.ಶಿವರಾಮ ಕಾರಂತರ ನೆನಪುಗಳನ್ನು ಕಣ್ತುಂಬಿಕೊಳ್ಳಬೇಕೆಂದರೆ ಅವರ ಹುಟ್ಟೂರಾದ ಉಡುಪಿ ಜಿಲ್ಲೆಯ ಕೋಟ ಗ್ರಾಮದಲ್ಲಿನ ಶಿವರಾಮ ಕಾರಂತ ಥೀಮ್ ಪಾರ್ಕ್ ನೀವು ಭೇಟಿ ನೀಡಲೇಬೇಕು.
ಶ್ರೇಷ್ಠ ಕಾದಂಬರಿಕಾರರಾಗಿ, ಕಲಾವಿದರಾಗಿ, ಅಲೆಮಾರಿಯಾಗಿ, ಪತ್ರಕರ್ತರಾಗಿ, ಪರಿಸರವಾದಿಯಾಗಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯ ಸಾಂಸ್ಕೃತಿಯ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿ ಪಡೆದ ಮಕ್ಕಳ ಪ್ರೀತಿಯ ಕಾರಂತಜ್ಜನ ವಿಚಾರ, ಇವರ ಜೀವನ, ಬರಹ, ವ್ಯಕ್ತಿತ್ವಗಳ ಅನಾವರಣಕ್ಕೆ ಸಾಕ್ಷಿಕಟ್ಟೆಯಂತಿದೆ ಕೋಟದಲ್ಲಿನ ಶಿವರಾಮ ಕಾರಂತ ಥೀಮ್ ಪಾರ್ಕ್.
2011ರಲ್ಲಿ ಉದ್ಘಾಟನೆಯಾಗಿದ್ದ ಥೀಮ್ ಪಾರ್ಕ್ :
ಕೋಟದ ರಾಷ್ಟ್ರೀಯ ಹೆದ್ದಾರಿಗಾಗಿ ಶಿವರಾಮ ಕಾರಂತರ ಮೂಲಮನೆ ನೆಲಸಮವಾದ ನಂತರ ಇಲ್ಲಿನ ರಸ್ತೆಯಿಂದ 300 ಮೀಟರ್ ದೂರದಲ್ಲಿರುವ ಶಿವರಾಮ ಕಾರಂತರ ನೆನಪಿಗಾಗಿ 2011 ರಲ್ಲಿ ಕೋಟದ ಕೋಳ್ಕೆರೆಯಲ್ಲಿ ಒಂದು ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಯಿತು. ಇಲ್ಲಿ ವಾರದ 7 ದಿನವೂ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಭೇಟಿಗೆ ಅವಕಾಶವಿರುತ್ತದೆ. ಇಲ್ಲಿ ಶಿವರಾಮ ಕಾರಂತರ ಇಡೀ ಜೀವನಕ್ಕೆ ಸಂಬಂಧಿಸಿದ ವಿಷಯ ಸಂಗ್ರಹವಿದೆ.
90ನೆಯ ಹರಯದಲ್ಲೂ ಯಕ್ಷಗಾನಕ್ಕಾಗಿ ಗೆಜ್ಜೆಕಟ್ಟಿ ನೃತ್ಯ :
ಸಾಹಿತಿಯಾಗಿ, ಕಲಾವಿದರಾಗಿ, ಸಾಮಾಜಿಕ ಚಿಂತಕರಾಗಿದ್ದ ಕಾರಂತರದ್ದು ಬಹುಮುಖ ಪ್ರತಿಭೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಇಂತಹ ಬಹುಮುಖ ಪ್ರತಿಭೆಯ ಕಾರಂತಜ್ಜರು ಜೀವನದ ಕೊನೆಯ ಹಂತದವರೆಗೂ ಉತ್ಸಾಹದ ಚಿಲುಮೆಯಿಂದಿದ್ದರು. ತಮ್ಮ 90ನೆಯ ವಯಸ್ಸಿನಲ್ಲಿ ಯಕ್ಷಗಾನಕ್ಕಾಗಿ ಗೆಜ್ಜೆಕಟ್ಟಿ ನೃತ್ಯ ಮಾಡಿದ ಫೊಟೊಗಳು ಥೀಮ್ ಪಾರ್ಕಿನ ಕಲಾ ಗ್ಯಾಲರಿಯಲ್ಲಿದೆ.
ಅ.10ಕ್ಕೆ ಕಾರಂತರು ಜನ್ಮತಾಳಿ 121 ವರ್ಷಗಳಾಗಲಿದೆ
ಥೀಮ್ ಪಾರ್ಕಿನ ನಿರ್ಮಾಣ, ಪರಿಕಲ್ಪನೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಶ್ರಮ ಸಾಕಷ್ಟಿದೆ. ಇದೇ ವರ್ಷದ ಅಕ್ಟೋಬರ್ 10ಕ್ಕೆ ಶಿವರಾಮ ಕಾರಂತರು ಹುಟ್ಟಿ 121 ವರ್ಷಾಗಳಾಗುತ್ತಿದೆ. ಥೀಮ್ ಪಾರ್ಕ್ ಕಟ್ಟಡ, ಇಲ್ಲಿನ ಕೆಲವು ಸೌಲಭ್ಯಗಳನ್ನು ಇದೀಗ ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
‘ಡಾ.ಶಿವರಾಮ ಕಾರಂತರ ಥೀಮ್ ಪಾರ್ಕ್ ಗೆ ಬರುವ ಸಾಹಿತ್ಯಾಸಕ್ತರು ಈ ಕೇಂದ್ರವನ್ನು ಗುರ್ತಿಸಲು ಅನುವಾಗುವಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಿಭಿನ್ನ ರೀತಿಯ ಸ್ವಾಗತ ಕಮಾನು ನಿರ್ಮಾಣ, ಥೀಮ್ ಪಾರ್ಕಿಗೆ ಬಂದು ಹೋಗುವವರ ಅನುಕೂಲಕ್ಕಾಗಿ 40 ಮೀಟರ್ ಅಗಲದ ರಸ್ತೆ, ವಾಹನ ನಿಲ್ದಾಣ ನಿರ್ಮಿಸಲಾಗುತ್ತದೆ. ಕೋಟತಟ್ಟು ಗ್ರಾಮ ಪಂಚಾಯ್ತಿ ವತಿಯಿಂದ ಅಚ್ಚುಕಟ್ಟಾಗಿ ಥೀಮ್ ಪಾರ್ಕ್ ನಿರ್ವಹಣೆ ಮಾಡುತ್ತಿದೆ.’
– ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಸಚಿವರು ಹಾಗೂ ವಿಧಾನಪರಿಷತ್ ಸಭಾ ನಾಯಕ
3ಡಿ ಸಂಗೀತ ಕಾರಂಜಿ & ವಿದ್ಯುತ್ ದೀಪಾಲಂಕಾರ :
ಥೀಮ್ ಪಾರ್ಕ್ ನಲ್ಲಿ ಸುಂದರ ಕೊಳದ ಮಧ್ಯದಲ್ಲಿ ಶಿವರಾಮ ಕಾರಂತರು ಕೋಲು ಹಿಡಿದು ನಿಂತಿರುವ 250 ಕೆಜಿ ತೂಕದ ಸುಂದರ ಕಂಚಿನ ಪ್ರತಿಮೆಯಿದೆ. ಇದೇ ಕೊಳದಲ್ಲಿ ಶಿವರಾಮ ಕಾರಂತರು ಬಾಲ್ಯದಲ್ಲಿ ಈಜುತ್ತಿದ್ದರು. ಇದರಲ್ಲಿ ಸಂಗೀತ ಕಾರಂಜಿ ವ್ಯವಸ್ಥೆಯಿದೆ. ಪ್ರತೀ ತಿಂಗಳ ಮೊದಲ ಶುಕ್ರವಾರದಂದು ಹಾಗೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳಂದು ಸಂದರ್ಶಕರು ಉಚಿತವಾಗಿ ಸಂಗೀತ ಕಾರಂಜಿ ಹಾಗೂ ವಿದ್ಯುತ್ ದೀಪಾಲಂಕಾರ ಪ್ರದರ್ಶನವನ್ನು ಇತ್ತೀಚೆಗೆ ಹೊರಾಂಗಣದಲ್ಲಿ ನಿರ್ಮಿಸಿದ ವೀಕ್ಷಕರ ಗ್ಯಾಲರಿಯಿಂದ ನೋಡಬಹುದು.
ಮೂಕಜ್ಜಿಯು ಕಾದು ಕುಳಿತಾದ್ದಾಳೆ ಇಲ್ಲಿ :
ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಅವರ ಮೂಕಜ್ಜಿಯ ಕನಸುಗಳು ಕಾದಂಬರಿಯ ಪ್ರಮುಖ ಪಾತ್ರವಾದ ಮೂಕಜ್ಜಿಯು ಮಕ್ಕಳಿಗೆ ಕಥೆ ಹೇಳುವ ಸಾಂದರ್ಭಿಕ ಶಿಲ್ಪವನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಾಗೂ ಕಾರಂತರ ಅವರ ಚೋಮನದುಡಿ ಕಾದಂಬರಿಯ ಪ್ರಮುಖ ಪಾತ್ರವಾದ ಚೋಮನು ಡೊಳ್ಳು ಬಾರಿಸುವ ಶಿಲ್ಪಗಳನ್ನು ಈ ಉದ್ಯಾನವನದಲ್ಲಿ ಕಾಣಬಹುದು.
ಕೋಟ ಗ್ರಾಮದ ಕೊನೆಯ ಎತ್ತಿನ ಗಾಡಿ ಶಿಲ್ಪ ಕೃತಿ :
ಉದ್ಯಾನವನದ ಇನ್ನೊಂದು ಭಾಗದಲ್ಲಿ ಕಾರಂತರನ್ನು ತನ್ನ ಎತ್ತಿನ ಗಾಡಿಯಲ್ಲಿ ಕರೆದುಕೊಂದು ಹೋಗುತಿದ್ದ ಕೂಸಣ್ಣ ಮತ್ತು ಅವನ ಎತ್ತಿನ ಗಾಡಿಯ ಪ್ರತಿಮೆ ಇದೆ. ಈ ಕೂಸಣ್ಣನ ಎತ್ತಿನಗಾಡಿ ಕೋಟ ಗ್ರಾಮದಲ್ಲಿನ ಕೊನೆಯ ಎತ್ತಿನಗಾಡಿಯಾಗಿತ್ತು. ಕೂಸಣ್ಣನ ಶಿಲ್ಪ ಮಾಡುವ ಸಂದರ್ಭ ಖುದ್ದು ಕೂಸಣ್ಣನನ್ನೆ ವೇಷಧರಿಸಿ ಕೂರಿಸಿ ಈ ಪ್ರತಿಮೆ ನಿರ್ಮಾಣ ಮಾಡಿದ್ದರು.
ಜಟಾಯು ಶಿಲ್ಪ ರಚನೆಗೆ ವೇಷ ಧರಿಸಿ ಕೂತಿದ್ದರು ಕಾರಂತರ ಶಿಷ್ಯ :
ಥೀಮ್ ಪಾರ್ಕ್ ಪ್ರವೇಶ ದ್ವಾರದಲ್ಲೇ ಎಡಬದಿ ಕನ್ನಡ ಪುಸ್ತಕ ಪ್ರಾಧಿಕಾರದ ಕೇಂದ್ರವಿದ್ದು ಕನ್ನಡದ ವಿವಿಧ ಲೇಖಕರ, ಪ್ರಕಾಶಕರ ಪುಸ್ತಕಗಳು ಇಲ್ಲಿ ಲಭಿಸುತ್ತದೆ. ಆ ಕಟ್ಟಡದ ಮೇಲ್ಭಾಗದಲ್ಲಿ ಕಾರಂತರ ರಚನೆಯ ಜಟಾಯು ಯಕ್ಷಗಾನ ಪ್ರಸಂಗದ ಜಟಾಯು ಪಾತ್ರದ ಸುಂದರ ಪ್ರತಿಮೆಯನ್ನು ರಚಿಸಲಾಗಿದೆ. ಇದರ ವಿಶೇಷವೆಂದರೆ, ಶಿವರಾಮ ಕಾರಂತರ ವಿಶೇಷ ಪ್ರೀತಿಗೆ ಪಾತ್ರನಾಗಿದ್ದ ಸಂಜೀವ್ ಪೂಜಾರಿಯೇ ಜಟಾಯು ಯಕ್ಷಗಾನದ ವೇಷ ಧರಿಸಿ, ಪ್ರತಿಮೆ ರಚನೆಗೆ ಸಹಕಾರ ನೀಡಿದ್ದರು. ಹಾಗಾಗಿ ಆ ಜಟಾಯು ಶಿಲ್ಪದಲ್ಲಿ ಜೀವಂತಿಕೆ ಮೇಳೈಸಿದೆ.
ಇಲ್ಲಿನ ಇನ್ನೊಂದು ಆಕರ್ಷಣೆಯೆಂದರೆ ಉಯ್ಯಾಲೆಯ ಮೇಲೆ ಕುಳಿತಿರುವ ರಾಧಾ-ಕೃಷ್ಣರ ಅವಳಿ ಶಿಲ್ಪಗಳು. ಜನಪ್ರಿಯ ಕಲಾವಿದರಾದ ಕೆ.ಕೆ.ಹೆಬ್ಬಾರರು ಶಿವರಾಮ ಕಾರಂತರು ಬರೆದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯ ಸಾರಾಂಶವನ್ನು ತಮ್ಮ ಕಲಾ ಮಾಧ್ಯದ ಮೂಲಕ ಅನಾವರಣಗೊಳಿಸಿದ್ದಾರೆ.
ಮೂಕಜ್ಜಿಯ ಕನಸುಗಳು ಪುಸ್ತಕ ಜಲಧಾರೆ ದರ್ಶನ :
ಶಿವರಾಮಕಾರಂತರು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವನ್ನು ಉದ್ಯಾನವನದ ಎಡಭಾಗದಲ್ಲಿ ಇರಿಸಲಾಗಿದೆ. ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ ‘ಮೂಕಜ್ಜಿಯ ಕನಸುಗಳು’ ಪುಸ್ತಕದ ಶಿಲ್ಪಗಳನ್ನು ಇಲ್ಲಿ ಅಚ್ಚುಕಟ್ಟಾಗಿ ಸಭಾ ಭವನ ಕಟ್ಟಡದ ಬದಿಯಲ್ಲಿ ನಿರ್ಮಿಸಲಾಗಿದೆ. ಪುಸ್ತಕದ ಒಳಗಿಂದ ಜ್ಞಾನಧಾರೆ ಹರಿಯುತ್ತಿರುವಂತೆ ನೀರಿನ ಸಣ್ಣ ಜಲಧಾರೆ ನಿರ್ಮಿಸಲಾಗಿದೆ.
ಕಾರಂತರ ಸಭಾ ಭವನ ಎಸಿ ಭವನವಾಗಿ ಮೇಲ್ದರ್ಜೆಗೆ
ಇನ್ನು ಥೀಮ್ ಪಾರ್ಕ್ ಮುಖ್ಯ ಕಟ್ಟಡದ ಕೆಳ ಅಂತಸ್ತಿನಲ್ಲಿ ಕನ್ನಡದ ಎಲ್ಲಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರತಿಮೆಗಳನ್ನು, ಶಿವರಾಮ ಕಾರಂತರ ಅಪರೂಪದ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೆ ಪಕ್ಕದಲ್ಲಿ ಈ ಮೊದಲು 800 ಜನ ಕೂರಬಹುದಾದ ಸಭಾ ಭವನವನ್ನು ಹವಾ ನಿಯಂತ್ರಿತ ವ್ಯವಸ್ಥೆಗಾಗಿ ಮೇಲ್ದರ್ಜೆಗೆ ಏರಿಸುವ ಅಭಿವೃದ್ಧಿ ಕೆಲಸ ಪ್ರಸ್ತುತ ನಡೆಯುತ್ತಿದೆ.
ಎಸಿ ವ್ಯವಸ್ಥೆಯಿಂದಾಗಿ ಆಸನಗಳ ಸಂಖ್ಯೆ 600ಕ್ಕೆ ಇಳಿಕೆ ಮಾಡಲಾಗಿದೆ. ಅರ್ಧ ಕುರ್ಚಿ ಮತ್ತು ಅರ್ಧ ಕಲ್ಲುಬೆಂಚು ಹಾಕಿ ಆಸನ ವ್ಯವಸ್ಥೆ ರೂಪಿಸಲಾಗುತ್ತಿದೆ. ಅದರ ಪಕ್ಕದಲ್ಲೇ ಮಕ್ಕಳಿಗಾಗಿ ಬಾಲವಾಡಿ, ಸಣ್ಣ ಸಮಾವೇಶದ ಕೊಠಡಿಯಿದೆ.
ಕೋಟ ಗ್ರಾಮ ಪಂಚಾಯ್ತಿಯ ಗ್ರಂಥಾಲಯ ಎಲ್ಲವೂ ಲಭ್ಯ :
ಕಾರಂತರ ಸ್ಮರಣೆಯ ಹೆಸರಿನಲ್ಲಿ ನಿರ್ಮಾಣವಾದ ಕಟ್ಟಡದ ಮೇಲ್ಭಾಗದಲ್ಲಿ ಕೋಟ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಹಾಗೂ ಡಿಜಿಟಲ್ ಲೈಬ್ರೆರಿಯಿದೆ. ಈ ಗ್ರಂಥಾಲಯವು ಕಾರಂತರ ಎಲ್ಲಾ ಕೃತಿಗಳ ಸಂಗ್ರಹದ ಜೊತೆಗೆ ಅವರ ವೈಯಕ್ತಿಕ ಸಂಗ್ರಹಣೆಯ ಪುಸ್ತಕಗಳನ್ನೂ ಹೊಂದಿದ್ದು, ಸ್ಥಳೀಯರು ಇಲ್ಲಿ ನೊಂದಾಯಿಸಿಕೊಂಡು ಇದರ ಸದಸ್ಯತ್ವವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಾಹಿತ್ಯ – ಸಾಂಸ್ಕೃತಿಕ ಚಟುವಟಿಕೆಗಳ ತಾಣ :
ಕಾರಂತರ ಸಭಾಂಗಣದಲ್ಲಿ ಹಲವಾರು ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಪ್ರತಿ ವರ್ಷ ಕಾರಂತರ ಜನ್ಮ ವಾರ್ಷಿಕೋತ್ಸವದಂದು ಆಡಿಟೋರಿಯಮ್‍ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸಾಧಕರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಉತ್ಸವ, ಯಕ್ಷಗಾನ ಪ್ರದರ್ಶನಗಳು, ವಿಚಾರ ಸಂಕಿರಣಗಳು, ರಂಗಭೂಮಿ ಚಟುವಟಿಕೆಗಳು ಮತ್ತು ಕವಿಗಳ ಸಭೆಯಂತಹ 10 ದಿನಗಳ ಸುಧೀರ್ಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹಾ ಆಯೋಜಿಸಲಾಗುತ್ತದೆ. ಮಕ್ಕಳಿಗಾಗಿ ವಾರಾಂತ್ಯದಲ್ಲಿ ಯಕ್ಷಗಾನ, ಸಂಗೀತ ಮತ್ತು ಭಾಗವತಿಕೆಯಂತಹ ವಿವಿಧ ಚಟುವಟಿಕೆಗಳನ್ನೂ ಸಹ ಇಲ್ಲಿ ಆಯೋಜಿಸಲಾಗಿದೆ. ಸದ್ಯ 100ಕ್ಕೂ ಹೆಚ್ಚು ಮಕ್ಕಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಸಾಹಿತ್ಯ ಕೃಷಿ ಕೈಗೊಂಡ ನಡೆದಾಡುವ ವಿಶ್ವಕೋಶ :
ಡಾ.ಶಿವರಾಮ ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ. 44 ಕಾದಂಬರಿ, 14 ನಾಟಕ, 3 ಕಥಾಸಂಕಲನ, 6 ಪ್ರಬಂಧಗಳು, 9 ಕಲಾ ಗ್ರಂಥಗಳು, 5 ಆತ್ಮಕಥೆ- ಜೀವನ ಚರಿತ್ರೆಗಳು, 25 ಮಕ್ಕಳ ಸಾಹಿತ್ಯ ಕೃತಿ ಸೇರಿದಂತೆ ಇತ್ಯಾದಿ 141 ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ.