ಬೆಂಗಳೂರು, ಜೂ.1 www.bengaluruwire.com :
ಶಾಲಾ ಮಕ್ಕಳಿಗೆ ಪಠ್ಯ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯ ಎಂದು ಹೆಸರಾಂತ ವನ್ಯಜೀವಿ ಛಾಯಾಗ್ರಾಹಕ ಸಂಜಯ್ ಗುಬ್ಬಿ ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ 14 ವರ್ಷದ ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ಅವರ ಐದು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು .
ಶಾಲೆಯಲ್ಲಿ ಗಣಿತ, ವಿಜ್ಞಾನದಷ್ಟೇ ಭಾಷಾ ಕಲಿಕೆಯೂ ಮುಖ್ಯ. ಶಾಲೆಯಲ್ಲಿ ಕಲಿಯುವಷ್ಟೇ ಶಾಲೆಯ ಹೊರಗೆ ಕಲಿಯಲು ವಿಪುಲ ಅವಕಾಶಗಳಿವೆ.
ಸದಾ ಆನ್ ಲೈನ್ ಆಟಗಳಲ್ಲಿ ತೊಡಗುವ ಬದಲು ಸಿರಿ ಸೊಬಗಿನ ಪ್ರಕೃತಿ, ಸಂಪದ್ಭರಿತ ನಿಸರ್ಗ ಹಾಗೂ ಆಕರ್ಷಕ ವನ್ಯಜೀವಿಗಳ ಸುಂದರ ಪರಿಸರದಲ್ಲಿ ಪ್ರೀತಿ ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಎಂದು ಅವರು ಹಿತ ನುಡಿದರು.
ಚಿಕ್ಕ ವಯಸ್ಸಿನಲ್ಲಿಯೇ ಅಮೋಘ ವರ್ಷ ಅವರ ಸಾಧನೆ ಅಮೋಘವಾದುದು. ಇತರೆ ಮಕ್ಕಳಿಗೆ ಪ್ರೇರಣೆ ಹಾಗೂ ಸ್ಪೂರ್ತಿದಾಯಕವಾಗಲಿದೆ ಎಂದರು.
ಹಿರಿಯ ಪತ್ರಕರ್ತ ಸಂಪಾದಕ ವಿಶ್ವೇಶ್ವರ ಭಟ್ ಅವರು ಮಾತನಾಡಿ ವನ್ಯಜೀವಿ ಛಾಯಾಗ್ರಹಣ ಸುಲಭವಲ್ಲ. ವನ್ಯಜೀವಿ ಛಾಯಾಗ್ರಾಹಕನಿಗೆ ಅತೀ ಹೆಚ್ಚು ತಾಳ್ಮೆಯೂ ಇರಬೇಕಾಗುತ್ತದೆ. ಅಪಾಯವನ್ನು ಎದುರಿಸುವ ಉಪಾಯವೂ ತಿಳಿದಿರಬೇಕಾಗುತ್ತದೆ ಎಂದು ಹೇಳಿ ಅಮೋಘ ವರ್ಷ ಅವರ ಕಲಾ ಕೌಶಲದಲ್ಲಿನ ಪ್ರೌಢಿಮೆ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ ಎಂದು ಬಣ್ಣಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್ ಹರ್ಷ ಮತ್ತು ಡಾ.ಚೈತ್ರಾ ದಂಪತಿಗಳ ಎರಡನೇ ಪುತ್ರ ಅಮೋಘ ವರ್ಷ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಕೊಡುಗೆ ಎಂದು ತಿಳಿಸಲು ತಮಗೆ ಹೆಮ್ಮೆ ಎನಿಸುತ್ತದೆ ಎಂದು ಶಾಲೆಯ ಪ್ರಾಂಶುಪಾಲ ಮಾಲತಿ ನಾರಾಯಣ್ ಅವರು ಹೇಳಿದರು.
ಅಮೋಘ ವರ್ಷ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಆನೆ, ಹುಲಿ, ಚಿರತೆ, ಕರಿ ಚಿರತೆ, ನರಿ, ಕಾಡೆಮ್ಮೆ, ಗೂಬೆ, ಫ್ಲೆಮಿಂಗೋ ಒಳಗೊಂಡಂತೆ ಪಕ್ಷಿ ಲೋಕದ ವೈವಿಧ್ಯಮಯ ಪಕ್ಷಿಗಳು ಐದು ದಿನಗಳ ವನ್ಯಜೀವಿಗಳ ಈ ಅದ್ಭುತ ಛಾಯಾಚಿತ್ರ ಪ್ರದರ್ಶನದಲ್ಲಿ ಕಾಣಬಹುದು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಮೋಘ ವರ್ಷ ತನ್ನ ತಂದೆ ಮತ್ತು ತಾಯಿಯ ಬೆಂಬಲವನ್ನು ಸ್ಮರಿಸಿದಲ್ಲದೆ, ವನ್ಯಜೀವಿ ಸಂರಕ್ಷಣೆಯ ತಮ್ಮ ಮಹದಾಸೆಯನ್ನು ಬಹಿರಂಗಪಡಿಸಿದರು.
ಜೂನ್ 5 ರ ವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ಈ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕರಿಗೆ ತೆರೆದಿರುತ್ತದೆ.