ಮಂಗಳೂರು, ಮೇ 31 www.bengaluruwire.com :
ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಶಿಕ್ಷಣ ಸಚಿವರು ವರದಿ ನೀಡಲಿದ್ದಾರೆ. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ವರದಿ ನೀಡಲು ಶಿಕ್ಷಣ ಸಚಿವರಿಗೆ ತಿಳಿಸಲಾಗಿದೆ. ಪ್ರಕರಣದ ಎಲ್ಲ ಆಯಾಮಗಳ ಪರಿಶೀಲನೆಯ ನಂತರ ವರದಿ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಸ್ವಾಮೀಜಿಗಳನ್ನು ಸಚಿವರು ಭೇಟಿ ಮಾಡಿರುವುದಾಗಿ ತಿಳಿಸಿ, ಸತ್ಯಾಂಶವನ್ನು
ದಾಖಲೆ ಸಮೇತ ನೀಡುವುದಾಗಿ ಸಚಿವರು ತಿಳಿಸಿದ್ದು, ವರದಿ ಬಂದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಉತ್ತರಪ್ರದೇಶದ ಜ್ಞಾನವಾಪಿ ಮಸೀದಿಯಂತೆ ಮಳಲಿ ಮಸೀದಿಯ ಸರ್ವೇ ಕಾರ್ಯ ಆಗಬೇಕು ಎಂಬ ಕೂಗು ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪ್ರಕರಣವು ನ್ಯಾಯಾಲಯದಲ್ಲಿದ್ದು,ಜೂನ್ 3ಕ್ಕೆ ವಿಚಾರಣೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಉಚಿತವಲ್ಲ ಎಂದರು.
ರಾಜ್ಯಕ್ಕೆ 8,633 ಕೋಟಿ ರೂ. ಜಿಎಸ್ ಟಿ ಪರಿಹಾರ :
ಇನ್ನೊಂದೆಡೆ ಕೇಂದ್ರ ಸರ್ಕಾರವು ರಾಜ್ಯಕ್ಕೆ 2022 ರ ಮೇ 31 ರ ವರೆಗಿನ 8633 ಕೋಟಿ ರೂ ಜಿ ಎಸ್ ಟಿ ಪರಿಹಾರ ಮಂಜೂರು ಮಾಡಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ 86912 ಕೋಟಿ ರೂ ಜಿ ಎಸ್ ಟಿ ಪರಿಹಾರ ನೀಡಿದ್ದು, ಸುಭಿಕ್ಷ ಆರ್ಥಿಕತೆಯತ್ತ ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ.