ಬೆಂಗಳೂರು, ಮೇ.26 (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ವರ್ಷಂಪ್ರತಿ ನಡೆಯುವ ಸಾವಿರಾರು ಕೋಟಿ ರೂ ಕಾಮಗಾರಿಗಳ ಬಗ್ಗೆ ನಿಗಾ ವಹಿಸಲೆಂದು ಯೋಜನಾ ವಿಶೇಷ ಆಯುಕ್ತರ ಅಧೀನದಲ್ಲಿದ್ದ ಆಯುಕ್ತರ ತಾಂತ್ರಿಕ ಮತ್ತು ಜಾಗೃತ ಕೋಶ (TVCC)ವನ್ನು ಈ ಹಿಂದೆಯಿದ್ದಂತೆ ಮುಖ್ಯ ಆಯುಕ್ತರ ಅಧೀನದಡಿ ತರಲಾಗಿದೆ. ಆ ಮೂಲಕ ನಕಲಿ ಬಿಲ್ ಪಾವತಿ, ಗುಣಮಟ್ಟವಿಲ್ಲದ ಕಾಮಗಾರಿಗಳಿಗೆ ಅಂಕುಶ ಹಾಕಲು ಹೊಸ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೊರಟಿದ್ದಾರೆ.
ಈ ಕುರಿತಂತೆ ಮುಖ್ಯ ಆಯುಕ್ತರು ಮೇ.18ರಂದು ಸುತ್ತೋಲೆ ಹೊರಡಿಸಿದ್ದಾರೆ. ಈ ಹೊಸ ಸುತ್ತೋಲೆಯಿಂದಾಗಿ ರಸ್ತೆ, ಒಳಚರಂಡಿ, ದೊಡ್ಡ ದೊಡ್ಡ ಯೋಜನೆಗಳು, ಬೃಹತ್ ನೀರುಗಾಲುವೆ ಕೆಲಸಗಳು ಸೇರಿದಂತೆ ಸಾವಿರಾರು ಅಭಿವೃದ್ಧಿ ಕಾಮಗಾರಿಗಳ ತಾಂತ್ರಿಕ ಅಂದಾಜು, ಗುಣಮಟ್ಟ ಪರಿಶೀಲನೆ, ಆಯ್ದ ಬಿಲ್ ಗಳ ಪರಿಶೀಲನೆಯನ್ನು ಯೋನಾ ವಿಶೇಷ ಆಯುಕ್ತರ ಮೇಲುಸ್ತುವಾರಿಯಿಂದ ಪುನಃ ಮುಖ್ಯ ಆಯುಕ್ತರ ಅಧೀನದಲ್ಲಿ ಟಿವಿಸಿಸಿ ಸೆಲ್ ಕಾರ್ಯನಿರ್ವಹಿಸಬೇಕಾಗಿದೆ.
ಯಾಕೆ ಈ ಬದಲಾವಣೆ ಮಾಡಲಾಗಿದೆ ?
ಯೋಜನೆ ವಿಶೇಷ ಆಯುಕ್ತರ ವಿಭಾಗದಡಿ ಪಾಲಿಕೆಯಲ್ಲಿನ 12 ವಿವಿಧ ಕಾಮಗಾರಿ ವಿಭಾಗಗಳಡಿ ಬರುವ ಎಂಜನಿಯರ್ ಗಳು ಕಾಮಗಾರಿಗೆ ಟೆಂಡರ್ ಕರೆಯುವುದು, ಗುತ್ತಿಗೆ ಸಂಸ್ಥೆಗಳಿಂದ ಕಾಮಗಾರಿ ಮಾಡಿಸುವುದು, ಗುತ್ತಿಗೆ ಸಂಸ್ಥೆಯು ಸಲ್ಲಿಸಿದ ಕಾಮಗಾರಿ ಬಿಲ್ ಗಳ ಪ್ರಕ್ರಿಯೆ ನಡೆಸುವುದು ಮೊದಲಾದ ಕಾರ್ಯಗಳ ಮೇಲುಸ್ತುವಾರಿ ನಡೆಸುತ್ತಿತ್ತು. ಅದೇ ಹೊತ್ತಿನಲ್ಲಿ ವಿಶೇಷ ಆಯುಕ್ತರ ಅಧೀನದಲ್ಲಿದ್ದ ಟಿವಿಸಿಸಿ ಕೋಶದ ಅಧಿಕಾರಿಗಳು ಆಯ್ದ ಕಾಮಗಾರಿಗಳ ಪರಿಶೀಲನೆ ನಡೆಸುವುದು, ಬಿಲ್ ಗಳ ಪರಿಶೀಲಿಸುವುದು, ಅನುಮಾನ ಕಂಡು ಬಂದ ಕಾಮಗಾರಿ ಸ್ಥಳಗಳಿಗೆ ಹಠಾತ್ ಭೇಟಿ ನೀಡುವುದು, ಕಳಪೆ ಕಾಮಗಾರಿಗಳ ದೂರು ಕೇಳಿ ಬಂದ ಪ್ರಕರಣಗಳನ್ನು ತನಿಖೆ ನಡೆಸುವುದು. ಹೀಗೆ ಟಿವಿಸಿಸಿ ನಡೆಸುತ್ತಿದ್ದ ಕೆಲಸಗಳ ಮೇಲೆ ಅದೇ 12 ವಿಭಾಗಗಳಲ್ಲಿದ್ದ ಅಧಿಕಾರಿಗಳು ಸಾಕಷ್ಟು ಪ್ರಭಾವ ಬೀರಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಗುತ್ತಿತ್ತು. ಇದರಿಂದ ಟಿವಿಸಿಸಿ ಕೋಶದ ಕಾರ್ಯನಿರ್ವಹಣೆ ಬಗ್ಗೆಯೇ ಎಲ್ಲರೂ ಅನುಮಾನ ಪಡುವಂತಾಗಿತ್ತು.
ಈ ಹಿಂದೆ ಟಿವಿಸಿಸಿಯಲ್ಲಿ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದವರು ಹಾಗೂ ಅವರ ಸಹದ್ಯೋಗಿಗಳು ರಾಜರಾಜೇಶ್ವರಿ ನಗರ ವಲಯದಲ್ಲಿ ನಡೆಸದ ಕಾಮಗಾರಿಗಳಿಗೂ ಬಿಲ್ ಪಾವತಿ ಮಾಡಿದ್ದರೆಂದು ಲೋಕಾಯುಕ್ತ ವರದಿಯಲ್ಲೂ ಉಲ್ಲೇಖವಾಗಿತ್ತು. ಇದು ಬಿಬಿಎಂಪಿಯ ಮುಖ್ಯ ಆಯುಕ್ತರು ಹಾಗೂ ಆಡಳಿತಾಗರರಿಗೂ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಹಾಗಾಗಿ 04 ಜುಲೈ 2006ರಲ್ಲಿನ ಆದೇಶದಂತೆ ಪಾಲಿಕೆ ಆಯುಕ್ತರ ಅಧೀನದಲ್ಲಿ ರಚನೆಯಾಗಿದ್ದ ಟಿವಿಸಿಸಿಯನ್ನು ಪುನಃ ಈಗ ಮುಖ್ಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಲು ಅನುವಾಗುವಂತೆ ಕಳೆದು ಕೊಂಡ ಅಧಿಕಾರವನ್ನು ಪುನಃ ನೀಡಿ ಟಿವಿಸಿಸಿಯನ್ನು ಸಶಕ್ತಗೊಳಿಸುವ ಕೆಲಸಕ್ಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೈ ಹಾಕಿದ್ದಾರೆ.
“ಇಷ್ಟು ದಿನ ಕಾಮಗಾರಿ ನಡೆಸುತ್ತಿದ್ದಿದ್ದು ಅದೇ ಯೋಜನಾ ವಿಭಾಗ. ಪುನಃ ಆ ಕಾಮಗಾರಿಗಳನ್ನು ಪರಿಶೀಲನೆ ನಡೆಸುವ ಕೋಶವೂ ಅದೇ ವಿಭಾಗದಲ್ಲಿತ್ತು. ಇದರಿಂದ ಟಿವಿಸಿಸಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ಸೂಕ್ತ ರೀತಿ ಕೆಲಸ ನಿರ್ವಹಿಸದಿರುವುದು ಸಾಧ್ಯವಿಲ್ಲ. ಹಾಗಾಗಿ ಈ ಹಿಂದೆ 04.07.2006ರ ಸುತ್ತಲೆಯಂತೆ ಟಿವಿಸಿಸಿಯು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯ ಆಯುಕ್ತರ ಅಧೀನದಲ್ಲಿ ನೇರವಾಗಿ ಕೆಲಸ ಮಾಡಲಿದೆ. ಅದೇ ರೀತಿ ಪ್ರತಿ ವರ್ಗದ ಕಾಮಗಾರಿಗಳ ಶೇ.10ರಷ್ಟು ಕೆಲಸಗಳ ಗುಣಮಟ್ಟವನ್ನು, ವಲಯದಲ್ಲಿ ನಡೆಸಿರುವ ಆಯ್ದ ಕಾಮಗಾರಿಗಳು ಮತ್ತು ಆಯ್ದ ಬಿಲ್ ಗಳ ಬಗ್ಗೆಯೂ ಪರಿಶೀಲನೆ ನಡೆಸಲಿದೆ. ಕಳಪೆ ಕಾಮಗಾರಿಗಳ ದೂರುಗಳ ಬಗ್ಗೆಯೂ ತನಿಖೆ ನಡೆಸಲಿದೆ. ಪಾಲಿಕೆ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟ, ನಕಲಿ ಬಿಲ್ ಹಾವಳಿ ತಪ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.”
– ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತರು
ಟಿವಿಸಿಸಿ ಅಧಿಕಾರ ಕುರಿತಂತೆ 4.07.2006 ಬಿಬಿಎಂಪಿ ಆಯುಕ್ತರ ಸುತ್ತೋಲೆಯಲ್ಲೇನಿದೆ?
- ಬಿಬಿಎಂಪಿಯ ಎಲ್ಲಾ ಕಾಮಗಾರಿಗಳ ಪರಿಶೀಲನೆ ಮತ್ತು ಖರೀದಿಸಿದ ವಸ್ತುಗಳ ಗುಣಮಟ್ಟಗಳ ಬಗ್ಗೆ ಹಠಾತ್ ಪರಿಶೀಲನೆ ಹಾಗೂ ಈ ಕೋಶಕ್ಕೆ ವಹಿಸುವ ಕಳಪೆ ಕಾಮಗಾರಿಗಳ ದೂರಿನ ಬಗ್ಗೆ ತನಿಖೆ ನಡೆಸುವುದು.
- ವಾರ್ಡ್ ಕಾಮಗಾರಿ, ಯೋಜನೆ ಹಾಗೂ ಕಟ್ಟಡ ನಿರ್ಮಾಣಗಳ ಗುಣಮಟ್ಟ ಮತ್ತು ಸಂಗ್ರಹಣೆ ಕುರಿತಂತೆ ಪರಿಶೀಲನೆ ನಡೆಸುವುದು.
- ಕಾಮಗಾರಿಗಳ ಅಂದಾಜು ವೆಚ್ಚ, ಬಿಲ್ ನಲ್ಲಿ ಸಲ್ಲಿಕೆಯಾಗಿರುವ ಕಾಮಗಾರಿಗಳನ್ನು ನಡೆಸಿರುವ ಮಾಹಿತಿ, ಅಳತೆ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸುವುದು. ಕಾಮಗಾರಿ ಅಂದಾಜಿನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು.
- ತಾಂತ್ರಿಕ ಪರಿಶೀಲನೆ ಮತ್ತು ಯೋಜನೆ ಸಿದ್ದಪಡಿಸುವಿಕೆಯಲ್ಲಿ ನೆರವು ನೀಡುವುದು.
- ಮಾಹಿತಿ ತಂತ್ರಜ್ಞಾನ ಹೆಚ್ಚುವರಿ ಸಲಹೆಗಾರರೊಂದಿಗೆ ಸಂಯೋಜನೆ ನಡೆಸುವುದು.
- ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳ ನಿಯಂತ್ರಣ ಮತ್ತು ಚಟುವಟಿಕೆಗಳ ಮೇಲುಸ್ತುವಾರಿ
- ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು, ಮುಗಿದಿರುವ ಕಾಮಗಾರಿಗಳ ತಾಂತ್ರಿಕ ಪರಿಶೋಧನೆ ಹಾಗೂ ಎಂಜಿನಿಯರಿಂಗ್ ವಿಧಾನದಂತೆ ಆ ಕಾಮಗಾರಿಗಳ ಅಂದಾಜು ವೆಚ್ಚ ಮಾಡಲಾಗಿದೆಯೇ ಎಂದು ಪರಿಶೀಲನೆ ನಡೆಸುವುದು.
- ಬಿಬಿಎಂಪಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಎಂಜಿನಿಯರಿಂಗ್ ಗುಣಮಟ್ಟವನ್ನು ಕಾಯ್ದುಕೊಂಡು, ಕಾಮಗಾರಿಗಳಲ್ಲಿ ಸುಧಾರಣೆ ತರಲು ಉತ್ತಮ ಅಭ್ಯಾಸಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪಾಲಿಕೆ ಆಯುಕ್ತರಿಗೆ ನೆರವಾಗುವುದು.
- ಕಾಲ ಕಾಲಕ್ಕೆ ಆಯುಕ್ತರು ವಹಿಸುವ ಜವಾಬ್ದಾರಿಗಳನ್ನು ನಿರ್ವಹಿಸುವುದು. * ಆಯುಕ್ತರಿಗೆ ನೇರವಾಗಿ ವರದಿ ಮಾಡುವುದು.
2006ರಲ್ಲಿ ಟಿವಿಸಿಸಿ ಕೋಶ ಸ್ಥಾಪನೆಯಾದಾಗ ಒಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್, ಮೂವರು ಸಹಾಯಕ ಎಂಜಿನಿಯರ್ ಗಳು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸದ್ಯ ಟಿವಿಸಿಸಿಯಲ್ಲಿ ಚೀಫ್ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ತಲಾ ನಾಲ್ವರು ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. 800 ಚದರ ಕಿ.ಮೀ. ವಿಸ್ತೀರ್ಣದ ಬಿಬಿಎಂಪಿಯಲ್ಲಿನ ಟಿವಿಸಿಸಿ ಕೋಶಕ್ಕೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಇನ್ನು ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಿಕೆ ಮುಖ್ಯ ಆಯುಕ್ತರು ಕ್ರಮ ಕೈಗೊಂಡು ಟಿವಿಸಿಸಿಯನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.