ಬೆಂಗಳೂರು, ಮೇ.25 (www.bengaluruwire.com) ಕರ್ನಾಟಕ ಹಾಲು ಮಹಾ ಮಂಡಳ (KMF) ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೇ 24ರಂದು ಒಂದೇ ದಿನ ಬರೋಬ್ಬರಿ 91.07 ಲಕ್ಷ ಕೆಜಿಯಷ್ಟು ಹಾಲು ಶೇಖರಣೆ ಮಾಡುವುದರೊಂದಿಗೆ ಹೊಸ ಮೈಲುಗಲ್ಲು ಸೃಷ್ಟಿಸಿದೆ.
ಕೆಎಂಎಫ್ ತನ್ನ ವ್ಯಾಪ್ತಿಯಲ್ಲಿನ 15 ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 91.07 ಲಕ್ಷ ಕೆಜಿಯಷ್ಟು ಹಾಲು ಶೇಖರಣೆ ಮಾಡುವ ಮೂಲಕ ಖಾಸಗಿ ಹಾಲು ಉತ್ಪಾದಕ ಕಂಪನಿಗಳ ಎದುರು ಗುಣಮಟ್ಟದ ಹಾಲು ಸಂಗ್ರಹದಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಕೆಎಂಎಫ್ ಇತಿಹಾಸದಲ್ಲಿಯೇ ಒಂದು ದಿನದಲ್ಲಿ ದಾಖಲೆ ಪ್ರಮಾಣದಲ್ಲಿ 91.07 ಲಕ್ಷ ಕೆಜಿಯಷ್ಟು ಹಾಲನ್ನು ಶೇಖರಣೆ ಮಾಡಿದ್ದೇವೆ. ಹಾಲು ಉತ್ಪಾದಕರಿಗೆ ಇತರ ಸೌಲಭ್ಯಗಳ ಜೊತೆಗೆ ಅತಿ ಮುಖ್ಯವಾಗಿ ಗರಿಷ್ಠ ಪ್ರಮಾಣದಲ್ಲಿ ರಿಯಾಯಿತಿ ದರದಲ್ಲಿ ಸಮತೋಲಿತ ಪಶು ಆಹಾರ ಪೂರೈಕೆ ಮಾಡುತ್ತಿರುವ ಕಾರಣದಿಂದ ಈ ದಾಖಲೆ ಸೃಷ್ಟಿಸಲು ಸಾಧ್ಯವಾಗಿದೆ. ಸರಾಸರಿಯಾಗಿ ಪ್ರತಿದಿನ 100 ಲಕ್ಷ ಕೆಜಿಯಷ್ಟು ಹಾಲು ಶೇಖರಣೆ ಮಾಡುವಷ್ಟರ ಮಟ್ಟಿಗೆ ಹಾಲು ಉತ್ಪಾದನಾ ಹೆಚ್ಚಳದ ವೇಗವನ್ನು ವೃದ್ಧಿಸಿಕೊಳ್ಳುವ ಗುರಿಯನ್ನು ಕೆಎಂಎಫ್ ಹೊಂದಿದೆ. ಈ ಹೊಸ ಮೈಲುಗಲ್ಲು ಸ್ಥಾಪಿಸಲು ಕಾರಣರಾದ ಹಾಲು ಉತ್ಪಾದಕರು, ಹಾಲು ಉತ್ಪಾದಕ ಸಹಕಾರ ಸಂಘಗಳು, ಜಿಲ್ಲಾ ಹಾಲು ಒಕ್ಕೂಟಗಳು, ಹಾಲು ವಿತರಕರು, ಗ್ರಾಹಕರು ಸೇರಿದಂತೆ ಎಲ್ಲರಿಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಿಂದೆ ಕರೋನಾ ಸೋಂಕು ವ್ಯಾಪಕವಾಗಿ ರಾಜ್ಯ ಎಲ್ಲೆಡೆ ವ್ಯಾಪಾರ ವ್ಯವಹಾರಗಳು ಕುಂಠಿತವಾಗಿರುವ ಹೊತ್ತಿನಲ್ಲಿಯೇ ಕೆಎಂಎಫ್ 14 ಜುಲೈ 2020ರಂದು 88.30 ಲಕ್ಷ ಕೆಜಿಯಷ್ಟು ಹಾಲನ್ನು ಒಂದು ದಿನದಲ್ಲಿ ಶೇಖರಿಸಿ ಮೊದಲ ಬಾರಿಗೆ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು. ಬಳಿಕ 11 ಜೂನ್ 2021ರಂದು 90.62 ಲಕ್ಷ ಕೆಜಿಯಷ್ಟು ಗರಿಷ್ಠ ಪ್ರಮಾಣದಲ್ಲಿ ಹಾಲು ಶೇಖರಣೆ ಮಾಡಿತ್ತು. ತದನಂತರ ಹಾಲು ಉತ್ಪಾದನೆ, ಸಾಗಣೆ, ಸಂಗ್ರಹಣೆ ಮತ್ತು ಶೇಖರಣೆ ವಿಷಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಾಲು ಶೇಖರಣೆ ಪ್ರಮಾಣವನ್ನು ವೃದ್ಧಿಸಿಕೊಳ್ಳುತ್ತಾ ಬಂದಿದೆ.