ಬೆಂಗಳೂರು, ಮೇ.24 (www.bengaluruwire.com) : ಹೊಸ ಮೀಟರ್ ಗೆಂದು ಅರ್ಜಿ ಸಲ್ಲಿಸಿದರೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (Bescom) ವಿದ್ಯುತ್ ಮೀಟರ್ ಸಕಾಲಕ್ಕೆ ಬರದೆ ಸಾಮಾನ್ಯ ಜನರು ಪರದಾಡುವಂತಾಗಿದೆ. ಟೆಂಡರ್ ನೀಡಿದ ಗುತ್ತಿಗೆ ಕಂಪನಿಗಳು ಸೂಕ್ತ ಕಾಲಾವಧಿಯಲ್ಲಿ ಮೀಟರ್ ಪೂರೈಸದ ಕಾರಣಕ್ಕೆ ಬೆಸ್ಕಾಂ ಮೀಟರ್ ವಿತರಣಾ ಕೇಂದ್ರಗಳಲ್ಲೂ ಹಾಗೂ ಸ್ಟಾಕ್ ನಲ್ಲಿ ವಿದ್ಯುತ್ ಮೀಟರ್ ಕೊರತೆ ಕಂಡುಬಂದಿದೆ.
ಜನಸ್ನೇಹಿ ಯೋಜನೆಯಂತೆ ವಿದ್ಯುತ್ ಮೀಟರ್ ಗೆ ಅರ್ಜಿ ಹಾಕಿದ ಮೂರು ಕಾರ್ಯನಿರ್ವಹಣಾ ದಿನಗಳಲ್ಲಿ ವಿದ್ಯುತ್ ಮೀಟರ್ ಪೂರೈಸಬೇಕು. ಆದರೆ ವಾಸ್ತವದಲ್ಲಿ 25 ದಿನದಿಂದ 30 ದಿನ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 8 ಜಿಲ್ಲೆಗಳಲ್ಲಿ ಒಟ್ಟು 4 ವಲಯಗಳಿದ್ದು 145 ಉಪವಿಭಾಗಗಳಿವೆ. ಈ ಉಪವಿಭಾಗಗಳಲ್ಲಿ ಪ್ರತಿದಿನ ಒಂದೊಂದು ಉಪವಿಭಾಗಗಳಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕಾಗಿ 50 ರಿಂದ 100 ಅರ್ಜಿಗಳು ದಾಖಲಾದರೂ ಒಟ್ಟಾರೆ 7,250 ರಿಂದ 14,500 ವಿದ್ಯುತ್ ಮೀಟರ್ ಗೆ ಪ್ರತಿದಿನ ಬೇಡಿಕೆಯಿದೆ.
ಬೆಸ್ಕಾಂಗೆ ಜೀನಸ್ (Genus), ಎಚ್ ಪಿಎಲ್ (HPL) ಹಾಗೂ ಎಲ್ ಎನ್ ಜಿ (L+G) ಸಂಸ್ಥೆಗಳಿಂದ ಹೆಚ್ಚಿನ ಸಾಮರ್ಥ್ಯದ ಲೋಡ್ (CT Operated Meeter) ಮೀಟರ್, ಸಿಂಗಲ್ ಫೇಸ್ ಹಾಗೂ ತ್ರಿಫೇಸ್ ಮೀಟರ್ ಪೂರೈಸುತ್ತವೆ. ಆದರೆ ಬೇಡಿಕೆಯಷ್ಟು ವಿದ್ಯುತ್ ಮೀಟರ್ ಪೂರೈಕೆಯಾಗುತ್ತಿಲ್ಲ.
ಬೆಸ್ಕಾಂ ಬಳಿ ಪ್ರಸ್ತುತ ಮೀಟರ್ ಸಂಗ್ರಹ ಎಷ್ಟಿದೆ?
ಬೆಸ್ಕಾಂ ವ್ಯಾಪ್ತಿಯಲ್ಲಿ ಮೇ 20ರಂದು 124 ಸಿಟಿ ಆಪರೇಟೆಡ್ ಮೀಟರ್ (18 ಕಿಲೋ ವ್ಯಾಟ್ ಗಿಂತ ಹೆಚ್ಚಿನ ಲೋಡ್ ಹೊಂದಿದ ಸಂಪರ್ಕಕ್ಕೆ ಪೂರೈಸುವ ಮೀಟರ್), 12,917 ಸಿಂಗಲ್ ಫೇಸ್ ಹಾಗೂ 116 ತ್ರೀಫೇಸ್ ವಿದ್ಯುತ್ ಸ್ಟಾಕ್ ನಲ್ಲಿತ್ತು. ಆದರೆ ಅದೇ ದಿನ 32 ಸಿಟಿ ಆಪರೇಟೆಡ್ ಮೀಟರ್, 3,471 ಸಿಂಗಲ್ ಫೇಸ್ ಗಳಷ್ಟೇ ಬೆಸ್ಕಾಂ ಸಂಗ್ರಹಾಗಾರಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ. ಆದರೆ ಬೆಸ್ಕಾಂ ಔಟ್ ಲೆಟ್ ಗಳಿಂದ ಅದೇ ದಿನ ಮಾರಾಟವಾದ ವಿದ್ಯುತ್ ಮೀಟರ್ ಗಳನ್ನು ನೋಡೋದಾದ್ರೆ ಮೇ 20ರಂದು ಕೇವಲ 36 ಸಿಟಿ ಆಪರೇಟೆಡ್ ಮೀಟರ್, 908 ಸಿಂಗಲೇ ಫೇಸ್ ಮೀಟರ್ ಗಳನ್ನಷ್ಟೇ ಮಾರಾಟ ಮಾಡಲಾಗಿದೆ. ಒಂದೇ ಒಂದು ತ್ರಿಫೇಸ್ ಮೀಟರ್ ಗಳನ್ನು ಗ್ರಾಹಕರಿಗೆ ನೀಡಿಲ್ಲ. ಇದನ್ನ ಗಮನಿಸಿದ್ರೆ ಪರಿಸ್ಥಿತಿ ಎಂದು ಗಂಭೀರವಾಗಿದೆ ಎಂಬುದು ತಿಳಿದು ಬರುತ್ತಿದೆ.
ಮೀಟರ್ ಕೊರತೆ ಕಾರಣಕ್ಕೆ, ಜನಸ್ನೇಹಿ ಯೋಜನೆಯಲ್ಲಿ ಗ್ರಾಹಕರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ, ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ಐಡಿ ನಂಬರ್ ನೀಡಿದರೆ ಮೂರು ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ನೀಡಬೇಕಾಗುತ್ತದೆಂದು ಐಡಿ ನಂಬರ್ ಅನ್ನು ಕೂಡ ಬೆಸ್ಕಾಂ ನಲ್ಲಿ ಜನರೇಟ್ ಮಾಡುತ್ತಿಲ್ಲ. ಹಾಗಾಗಿ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಉಳಿದಿದೆ.
ಮೀಟರ್ ಪೂರೈಕೆಗೆ ರಷ್ಯಾ- ಉಕ್ರೇನ್ ಯುದ್ಧ ಅಡ್ಡಿ :
“ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ವಿದ್ಯುತ್ ಮೀಟರ್ ಉತ್ಪಾದನೆಗೆ ಬೇಕಾದ ಕಚ್ಛಾವಸ್ತು ಚೀನಾದಿಂದ ಭಾರತಕ್ಕೆ ಬರಲು ವಿಳಂಬವಾಗುತ್ತಿತ್ತು. ಹೀಗಾಗಿ ಬೆಸ್ಕಾಂ ಗೆ ವಿದ್ಯುತ್ ಮೀಟರ್ ಪೂರೈಸುವ ಕಂಪನಿಗಳ ಉತ್ಪಾದನೆ ಕಡಿಮೆಯಾಗಿತ್ತು. ಏಪ್ರಿಲ್- ಮೇ ನಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಕೆಲವೇ ದಿನಗಳಲ್ಲಿ ವಿದ್ಯುತ್ ಮೀಟರ್ ಪೂರೈಕೆಯಲ್ಲಿನ ಸಮಸ್ಯೆ ನೀಗಲಿದೆ. ಈ ಮಧ್ಯೆ ವಿದ್ಯುತ್ ಮೀಟರ್ ಪೂರೈಕೆಗೆ ಹೊಸದಾಗಿ ಟೆಂಡರ್ ಕರೆದಿದ್ದು ಕೆಲವೇ ದಿನಗಳಲ್ಲಿ ಟೆಂಡರ್ ಅಂತಿಮಗೊಳಿಸಿ ಯಶಸ್ವಿ ಗುತ್ತಿಗೆದಾರ ಕಂಪನಿಗೆ ಕಾರ್ಯಾದೇಶ ನೀಡುತ್ತೇವೆ. ಇನ್ನು ಮುಂದೆ ಪ್ರತಿ ವಿಭಾಗದಲ್ಲೂ ಮೀಟರ್ ವಿತರಣಾ ಕೇಂದ್ರವನ್ನು ತೆರೆಯಲು ನಿರ್ಧರಿಸಲಾಗಿದೆ. ಗ್ರಾಹಕರಿಗೆ ಸಮರ್ಪಕವಾಗಿ ಸೇವೆ ನೀಡುವುದು ಬೆಸ್ಕಾಂ ಉದ್ದೇಶವಾಗಿದೆ.” ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಜನಸ್ನೇಹಿ ವಿದ್ಯುತ್ ಯೋಜನೆಯಲ್ಲಿ ಸಿಂಗಲ್ ಫೇಸ್ ವಿದ್ಯುತ್ ಮೀಟರ್ ಗೆ 740 ರೂ. ಹಾಗೂ ತ್ರಿಫೇಸ್ ವಿದ್ಯುತ್ ಮೀಟರ್ ಗೆ 1,750 ರೂ. ದರ ನಿಗಧಿಪಡಿಸಲಾಗಿದೆ. ಸಿಂಗಲ್ ಫೇಸ್ ಮೀಟರ್ ಅಲ್ಪಸ್ವಲ್ಪ ಮಟ್ಟಿಗೆ ಇದೆಯಾದರೂ, ತ್ರೀಫೇಸ್ ವಿದ್ಯುತ್ ಮೀಟರ್ ಪೂರೈಕೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ.
ವಿಳಂಬವಾಗುತ್ತಿದೆ ಜನಸ್ನೇಹಿ ಸೇವೆ :
ಜನಸ್ನೇಹಿ ಶೀಘ್ರ ವಿದ್ಯುತ್ ಸೇವೆ ಹೇಳಿದಂತೆ ಶೀಘ್ರ ಸೇವೆ ಗ್ರಾಹಕರಿಗೆ ಲಭ್ಯವಾಗುತ್ತಿಲ್ಲ. 2018ರಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಜಾರಿಗೆ ಬಂದ ಜನಸ್ನೇಹಿ ಯೋಜನೆಯಲ್ಲಿ 18 ಕಿಲೋ ವ್ಯಾಟ್ ವರೆಗಿನ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಮೀಟರ್ ಗೆ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಗ್ರಾಹಕರು ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆಯಾದರೂ ವಿದ್ಯುತ್ ಗುತ್ತಿಗೆದಾರರಿಲ್ಲದೆ ಸಾಮಾನ್ಯ ಗ್ರಾಹಕರು ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯುವುದು ಹಾಗೂ ಮೀಟರ್ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ.
ದಾಖಲೆ ಅಪಲೋಡ್ ಗೆ ಸರ್ವರ್ ಸಮಸ್ಯೆ :
ಗ್ರಾಹಕರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ, ಸಹಾಯಕ ಎಂಜಿನಿಯರ್ (AE) ವಿದ್ಯುತ್ ಸಂಪರ್ಕ ಪಡೆಯುವ ಕಟ್ಟಡವಿರುವ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ವಿದ್ಯುತ್ ಸಂಪರ್ಕ ಪಡೆಯಲು ಬೆಸ್ಕಾಂಗೆ ಎಷ್ಟು ಹಣ ಕಟ್ಟಬೇಕು ಎಂದು ಅಂದಾಜು ವೆಚ್ಚ ನೀಡಿದ ಮೇಲಷ್ಟೆ ಗ್ರಾಹಕರು ಸೂಕ್ತ ದಾಖಲೆಗಳೊಂದಿಗೆ ನಿಗಧಿತ ಶುಲ್ಕ ಕಟ್ಟಿ ವಿದ್ಯುತ್ ಮೀಟರ್ ಪಡೆಯಬಹುದು. ಆದರೆ ಎಷ್ಟೋ ವೇಳೆ ಬೆಸ್ಕಾಂ ಸರ್ವರ್ ಗಳ ಸಮಸ್ಯೆಯಿಂದ ಸೂಕ್ತ ರೀತಿಯಲ್ಲಿ ದಾಖಲೆಗಳನ್ನು ಅಪಲೋಡ್ ಮಾಡಲು ಸಾಧ್ಯವಾಗದೆ ಅಲ್ಲೂ ವಿಳಂಬವಾಗುತ್ತಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
“ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಜನವರಿಯಿಂದಲೂ ವಿದ್ಯುತ್ ಮೀಟರ್ ಪೂರೈಕೆಯಲ್ಲಿ ಕೊರತೆಯಿದೆ. ಗ್ರಾಹಕರಿಗೆ ಹೊಸ ಸಂಪರ್ಕ ಪಡೆಯಲು ಹಾಗೂ ಕಡಿಮೆ ಲೋಡ್ ನಿಂದ ಹೆಚ್ಚು ಲೋಡ್ ಗೆ ಬದಲಾವಣೆ ಪಡೆದುಕೊಂಡ ಗ್ರಾಹಕರಿಗೆ ಹೊಸ ವಿದ್ಯುತ್ ಮೀಟರ್ ಪೂರೈಸುವುದೇ ದೊಡ್ಡ ಹರಸಾಹಸವಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಅಂದಾಜು 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿಲ್ಲ. ವಿದ್ಯುತ್ ಮೀಟರ್ ಕೊರತೆಯನ್ನು ಶೀಘ್ರವಾಗಿ ಬಗೆಹರಿಸಲು ಬೆಸ್ಕಾಂ ಕ್ರಮ ಕೈಗೊಳ್ಳಬೇಕು. ”
- ಎನ್.ಸುರೇಶ್, ಅಧ್ಯಕ್ಷರು, ಬೆಂಗಳೂರು ವಿದ್ಯುತ್ ಗುತ್ತಿಗೆದಾರರ ಸಂಘ
ಬೆಸ್ಕಾಂ ಗೆ ಪ್ರಸ್ತುತ ಪೂರೈಕೆಯಾಗುತ್ತಿರುವ ವಿದ್ಯುತ್ ಮೀಟರ್ ಗಳು ಸಾಕಷ್ಟು ಸೂಕ್ಷ್ಮವಾಗಿದ್ದು, ಅವುಗಳ ಕಾರ್ಯನಿರ್ವಹಣಾ ಸಾಮರ್ಥ್ಯವು ಕಡಿಮೆಯಿದೆ. ವಿದ್ಯುತ್ ಪೂರೈಕೆಯಲ್ಲಿ ವೋಲ್ಟೇಜ್ ಹೆಚ್ಚು- ಕಡಿಮೆಯಾದರೂ ಮೀಟರ್ ಸುಟ್ಟು ಹೋಗುವ ಪ್ರಕರಣಗಳು ಹೆಚ್ಚಾಗಿದೆ. ಹಿಂದೆಲ್ಲಾ ಬೆಸ್ಕಾಂ ಗೆ ಎಲ್ ಅಂಡ್ ಟಿ ಹಾಗೂ ಬಿಎಚ್ ಇಎಲ್ ಸಂಸ್ಥೆಯ ವಿದ್ಯುತ್ ಮೀಟರ್ ಗಳು ಪೂರೈಕೆಯಾಗುತ್ತಿದ್ದವು. ಒಂದೊಂದು ಮೀಟರ್ ಕಾರ್ಯ ಸಾಮರ್ಥ್ಯ ಉತ್ತಮವಾಗಿದ್ದು, 10 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತಿದ್ದವು. ಬೆಸ್ಕಾಂ ನಲ್ಲಿ ಹೆಚ್ಚಿನ ಕಮಿಷನ್ ಆಸೆಗೆ ಕಡಿಮೆ ಗುಣಮಟ್ಟದ ವಿದ್ಯುತ್ ಮೀಟರ್ ಪೂರೈಸುವ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುತ್ತಿದೆ ಎಂಬ ಆರೋಪಗಳಿವೆ.
ಮೈಸೂರಿನಲ್ಲಿಯೇ ಎಲ್ ಅಂಡ್ ಟಿ ಕಂಪನಿಯ ಮೀಟರ್ ಉತ್ಪಾದನೆಯ ಕಾರ್ಖಾನೆಯಿದೆ. ಅದೇ ರೀತಿ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಚ್ ಇಎಲ್ ಸಂಸ್ಥೆಯು ವಿದ್ಯುತ್ ಮೀಟರ್ ಉತ್ಪಾದಿಸುವ ಘಟಕವನ್ನು ಹೊಂದಿದೆ. ಆದರೂ ಹೊರ ರಾಜ್ಯದ ಮೀಟರ್ ಉತ್ಪಾದಿಸುವ ಸಂಸ್ಥೆಗಳಿಗೆ ಮಣೆ ಹಾಕುತ್ತಿರುವುದೇಕೆ ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ. ಬೆಸ್ಕಾಂ ಇನ್ನಾದರೂ ಗುಣಮಟ್ಟದ ಹಾಗೂ ಬೇಡಿಕೆಯಷ್ಟು ಮೀಟರ್ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಜನಸ್ನೇಹಿ ಯೋಜನೆಯನ್ನು ಹೆಸರಿಗೆ ತಕ್ಕಂತೆ ಅನುಷ್ಟಾನಗೊಳಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.