ನವದೆಹಲಿ, ಮೇ.19 (www.bengaluruwire.com) :
ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ, ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ವಿಶ್ವದರ್ಜೆಯ ಜವಳಿ ಪಾರ್ಕ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ಸಚಿವರು ಈ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕವು, ದೇಶದ ಒಟ್ಟು ಕಚ್ಛಾ ರೇಷ್ಮೆ ಉತ್ಪಾದನೆಯಲ್ಲಿ ಶೇ.65, ಉಣ್ಣೆ ಉತ್ಪಾದನೆಯಲ್ಲಿ ಶೇ.12, ಹತ್ತಿಯಲ್ಲಿ ಶೇ.6 ರಷ್ಟು ಪಾಲು ಹೊಂದಿದೆ. ರಾಜ್ಯದಲ್ಲಿ 40,000 ಕೈ ಮಗ್ಗ ಹಾಗೂ 1.20 ಲಕ್ಷ ವಿದ್ಯುತ್ ಮಗ್ಗಗಳಿವೆ. ವಸ್ತ್ರೋದ್ಯಮದಲ್ಲಿ ರಾಜ್ಯವು ಮುಂಚೂಣಿಯಲ್ಲಿದ್ದು, ಭಾರತದ ಗಾರ್ಮೆಂಟ್ ರಾಜಧಾನಿ ಎಂಬ ಖ್ಯಾತಿ ಹೊಂದಿದೆ.
ಈ ಉದ್ಯಮವನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ‘ನೂತನ ಟೆಕ್ಸ್ ಟೈಲ್ ಮತ್ತು ಗಾರ್ಮೆಂಟ್ ನೀತಿ 2019-24’ ಜಾರಿ ಮಾಡಿದೆ. ಮುಂದಿನ 5 ವರ್ಷಗಳಲ್ಲಿ 10,000 ಕೋಟಿ ರೂ. ಹೂಡಿಕೆಯೊಂದಿಗೆ 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಈ ನೀತಿ ಹೊಂದಿದೆ ಎಂದು ಸಚಿವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯು ರೇಷ್ಮೆ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿ ಹೊಂದಿರುವ ಜಿಲ್ಲೆಯು, ರೇಷ್ಮೆ ಕೃಷಿ ಕಾಲೇಜನ್ನೂ ಒಳಗೊಂಡಿದೆ. ಜೊತೆಗೆ ವಸ್ತ್ರೋದ್ಯಮದ ಕೌಶಲ್ಯ ಹೊಂದಿದವರೂ ಇಲ್ಲಿದ್ದಾರೆ. ಈ ಎಲ್ಲ ಕಾರಣಗಳಿಂದ ಜಿಲ್ಲೆಯ ಮಂಚೇನಹಳ್ಳಿಯು ಜವಳಿ ಪಾರ್ಕ್ ಸ್ಥಾಪಿಸಲು ಸೂಕ್ತವಾದ ತಾಣವಾಗಿದೆ. ಈ ಕುರಿತು ಕ್ರಮ ವಹಿಸಬೇಕೆಂದು ಸಚಿವರು ಕೋರಿದ್ದಾರೆ.
ಹತ್ತಿ ಹಾಗೂ ರೇಷ್ಮೆಯಿಂದ ನೂಲು, ನೂಲಿನಿಂದ ವಸ್ತ್ರೋದ್ಯಮ ಹಾಗೂ ಫ್ಯಾಶನ್ ಕ್ಷೇತ್ರದ ಬೆಳವಣಿಗೆ ಹಾಗೂ ಈ ಮೂಲಕ ರಫ್ತು ವಹಿವಾಟು ನಡೆಸುವ ಮಟ್ಟಿಗೆ ಕೈಗಾರಿಕಾ ವಲಯವನ್ನು ಬೆಳೆಸಲು ಈ ಪಾರ್ಕ್ ಸ್ಥಾಪನೆ ನಾಂದಿ ಹಾಡಲಿದೆ. ಕೃಷಿ ಭೂಮಿಯಿಂದ ಆರಂಭವಾಗಿ ಮಾರುಕಟ್ಟೆಯವರೆಗೆ ಮೌಲ್ಯವರ್ಧನೆಯ ಎಲ್ಲಾ ಹಂತಗಳನ್ನು ಒಂದೆಡೆ ತರುವ ಜವಳಿ ಪಾರ್ಕ್ ಇದಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಚಿಕ್ಕಾಬಳ್ಳಾಪುರ ಸ್ಮಾರ್ಟ್ ಸ್ಯಾಟ್ಲೈಟ್ ಟೌನ್ ಮಾಡಲು ಮನವಿ :
ಬೆಂಗಳೂರು ಮಹಾನಗರದ ಉಪನಗರವಾಗಿ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಡಿಸಲು ‘ಸ್ಮಾರ್ಟ್ ಸ್ಯಾಟ್ಲೈಟ್ ಟೌನ್’ ಪ್ರಾಯೋಗಿಕ ಯೋಜನೆಯನ್ನು ಜಾರಿ ಮಾಡಲು ಸಚಿವ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ.
ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿದ ಸಚಿವ ಡಾ.ಕೆ.ಸುಧಾಕರ್, ಈ ಕುರಿತು ಚರ್ಚೆ ನಡೆಸಿದರು. ಚಿಕ್ಕಬಳ್ಳಾಪುರ ಬೆಂಗಳೂರು ನಗರಕ್ಕೆ ಸಮೀಪದಲ್ಲಿದ್ದು, ಇದನ್ನು ಸ್ಯಾಟ್ಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸಬಹುದು. ಇದಕ್ಕಾಗಿ ಪ್ರಾಯೋಗಿಕ ಯೋಜನೆ ಮಾಡಬಹುದು ಎಂದು ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಸಚಿವರಿಗೆ ತಿಳಿಸಿದರು.
ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ ಸಂಪೂರ್ಣ ನೆರವು ನೀಡುವುದಾಗಿ ತಿಳಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಅಮೃತ್-2 ಯೋಜನೆಯಡಿ, ಮೂಲಸೌಕರ್ಯ ನೀಡುವುದಾಗಿ ಹೇಳಿದ್ದಾರೆ. ಸ್ಮಾರ್ಟ್ ಬೀದಿದೀಪ, ನೆಲದಾಳದ ಎಲೆಕ್ಟ್ರಿಕ್ ಕೇಬಲ್, ಸಾರ್ವಜನಿಕ ಸ್ಥಳಗಳಲ್ಲಿ ಉದ್ಯಾನಗಳ ನಿರ್ಮಾಣ, ಪ್ರತಿ ಮನೆಗೆ ಕೊಳವೆ ಅನಿಲ ಸಂಪರ್ಕ, ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಚಿಕ್ಕಬಳ್ಳಾಪುರಕ್ಕೆ ನೀಡುವುದಾಗಿ ಕೇಂದ್ರ ಸಚಿವರು ಆಶ್ವಾಸನೆ ನೀಡಿದರು ಸ್ಮಾರ್ಟ್ ಸಿಟಿಗಳಂತೆ ಚಿಕ್ಕಬಳ್ಳಾಪುರದಲ್ಲೂ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನಿರ್ಮಿಸುವಂತೆ ಕೇಂದ್ರ ಸಚಿವರು ಸಲಹೆ ನೀಡಿದರು.
ಇದೇ ವೇಳೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸಚಿವ ಡಾ.ಕೆ.ಸುಧಾಕರ್ ಭೇಟಿ ಮಾಡಿ ಮಾತುಕತೆ ನಡೆಸಿದರು.