ಬೆಂಗಳೂರು, ಮೇ.18, (www.bengaluruwire.com) : ಒಂದು ಕಾಲದಲ್ಲಿ ಸಖತ್ ಬೇಡಿಕೆಯಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಪ್ರಧಾನ ಎಂಜಿನಿಯರ್ ಹುದ್ದೆ ತೆರವಾಗಿ 18 ದಿನಗಳು ಉರುಳಿದ್ದು, ಹೊಸ ಮುಖ್ಯಸ್ಥರು ಯಾರಾಗಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಹೊಸ ಎಂಜನಿಯರಿಂಗ್ ಚೀಫ್ ಹುದ್ದೆಗಾಗಿ ಅರ್ಹರಾದ ಮೂವರ ಹೆಸರನ್ನು ಬಿಬಿಎಂಪಿಯಿಂದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ ಕೊಟ್ಟಿದ್ದು, ಎಲ್ಲಾ ಪ್ರಕ್ರಿಯೆಗಳು ನಡೆದು ಕಡತವು ಮುಖ್ಯಮಂತ್ರಿಗಳ ಕಚೇರಿ ತಲುಪಿದೆ. ಇಂದು ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ಬಿ.ಎಸ್.ಪ್ರಭಾಕರ್ ಏಪ್ರಿಲ್ 30ರಂದು ಪ್ರಧಾನ ಎಂಜಿನಿಯರ್ ಹುದ್ದೆಯಿಂದ ನಿವೃತ್ತರಾಗಿದ್ದರು.
ಪಾಲಿಕೆಯ ಎಂಜಿನಿಯರಿಂಗ್ ಚೀಫ್ ಹುದ್ದೆಗೆ ಈ ಮೊದಲಿಗೆ ಯಲಹಂಕ ವಲಯದ ರಂಗನಾಥ್, ಸದ್ಯ ದಾಸರಹಳ್ಳಿ ವಲಯದ ಚೀಫ್ ಎಂಜಿನಿಯರ್ ಪಿ.ವಿಶ್ವನಾಥ್, ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್, ಪಶ್ಚಿಮ ವಲಯದ ಸಿಇ ದೊಡ್ಡಯ್ಯ, ಬೃಹತ್ ನೀರುಗಾಲುವೆ ಸಿಇ ಸುಗುಣ ಹಾಗೂ ಮೋಹನ್ ಕೃಷ್ಣ ಅವರ ಹೆಸರನ್ನು ಪರಿಗಣಿಸಲಾಗಿತ್ತು. ಆದರೆ ಅಂತಿಮವಾಗಿ ಸೇವಾ ಹಿರಿತನದಲ್ಲಿ ಕ್ರಮವಾಗಿ ರಂಗನಾಥ್, ಪಿ.ವಿಶ್ವನಾಥ್ ಹಾಗೂ ಬಿ.ಎಸ್.ಪ್ರಹ್ಲಾದ್ ಈ ಮೂವರನ್ನು ಅಂತಿಮಗೊಳಿಸಿ ಬಿಬಿಎಂಪಿಯ ಆಡಳಿತ ಶಾಖೆಯು ನಗರಾಭಿವೃದ್ಧಿ ಇಲಾಖೆಗೆ 20 ದಿನಗಳ ಹಿಂದೆಯೇ ತೆರವಾದ ಹುದ್ದೆಯನ್ನು ತುಂಬಲು ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಬಳಿಕ ಕಳೆದ ಒಂದು ವಾರದ ಹಿಂದಷ್ಟೇ ಇಲಾಖಾ ಬಡ್ತಿ ಸಮಿತಿ ಸಭೆ (Department Promotion Committee Meeting) ನಡೆದಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಕಡತವು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿಗೆ ರವಾನೆಯಾಗಿದೆ. ಅಂತಿಮವಾಗಿ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಈ ಮೂವರ ಪೈಕಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಲ್ಲಿ ಸಾಕಷ್ಟು ಪ್ರಭಾವಿಯಾಗಿರುವ ಬಿ.ಎಸ್.ಪ್ರಹ್ಲಾದ್ ಅವರ ಹೆಸರನ್ನು ನಗರಾಭಿವೃದ್ಧಿ ಇಲಾಖೆಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ತಿಳಿದುಬಂದಿದೆ.
ಯಲಹಂಕ ವಲಯ ಚೀಫ್ ಎಂಜಿನಿಯರ್ ಅವರಿಗೆ ಇನ್ನು ಮೂರು ವರ್ಷಗಳ ಸೇವೆ ಸಲ್ಲಿಸಲು ಅವಕಾಶವಿದೆ. ಆದರೆ ಇವರ ವಿರುದ್ಧ ಕೆಲ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಇನ್ನು ಪಿ.ವಿಶ್ವನಾಥ್ ವಿರುದ್ಧ ಯಾವುದೇ ವಿಚಾರಣೆಯಿಲ್ಲ. ಅಲ್ಲದೆ ಇವರ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ವಿಶ್ವನಾಥ್ ಅವರಿಗೆ ಇನ್ನು ಒಂದು ವರ್ಷ ಪಾಲಿಕೆಯಲ್ಲಿ ಸೇವಾವಧಿ ಬಾಕಿಯಿದೆ. ಸೇವಾ ಹಿರಿತನ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಪ್ರಹ್ಲಾದ್ ವಿರುದ್ಧ ಆದಾಯಕ್ಕಿಂತ ಹೆಚ್ಚು ವರಮಾನ ಹೊಂದಿದ್ದಾರೆಂಬ ಬಗ್ಗೆ ಪ್ರಕರಣ ದಾಖಲಾಗಿತ್ತು. ಬಳಿಕ ಭ್ರಷ್ಟಾಚಾರ ನಿಗ್ರಹ ದಳ (ACB) ಬಿ-ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಟಿಡಿಆರ್ ಹಂಚಿಕೆಯಲ್ಲಿನ ಭ್ರಷ್ಟಾಚಾರವೂ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಪ್ರಹ್ಲಾದ್ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಅಲ್ಲದೆ ಇವರಿಗೆ ಇನ್ನು 11 ವರ್ಷಗಳ ಸೇವಾವಧಿಯಿದೆ.
ಬಿಬಿಎಂಪಿಯ ಎಂಟು ವಲಯಗಳು, ಕೇಂದ್ರ ಯೋಜನೆ, ರಸ್ತೆ ಮೂಲಸೌಕರ್ಯ, ಕೆರೆ ವಿಭಾಗ ಹಾಗೂ ರಾಜಕಾಲುವೆ ಸೇರಿದಂತೆ 12 ಕಾಮಗಾರಿ ವಿಭಾಗಗಳು ಬಿಬಿಎಂಪಿಯಲ್ಲಿದ್ದು, ಈ ಎಲ್ಲ ವಿಭಾಗಗಳ ಕಾಮಗಾರಿಗಳ ಮಾಹಿತಿಯನ್ನು 2012-13 ರಲ್ಲಿ ಪಾಲಿಕೆ ಪ್ರಧಾನ ಎಂಜನಿಯರ್ ಆಗಿದ್ದ ಬಿ.ಟಿ.ರಮೇಶ್ ಅವಧಿಯ ತನಕ ಈ ಕಚೇರಿಯು ತಾಂತ್ರಿಕವಾಗಿ ಪರಿಶೀಲಿಸಿ ಕಡತಗಳನ್ನು ನಿರ್ವಹಣೆ ಮಾಡುತ್ತಿತ್ತು. ಆನಂತರ ಯಾವುದೇ ಕಾಮಗಾರಿಗಳ ಕಡತವು ಎಂಜಿನಿಯರಿಂಗ ಚೀಫ್ ಕಚೇರಿಗೆ ಬರುವುದೇ ನಿಂತು ಹೋಯಿತು. ಆ ಬಳಿಕ ಈ ಹುದ್ದೆ ಪಡೆಯಲು ನಡೆಯುತ್ತಿದ್ದ ಲಾಭಿಯು ಕಡಿಮೆಯಾಯಿತು. ಆದರೆ 2021ರಲ್ಲಿ ಟೆಂಡರ್ ಕಡತಗಳು ಹಾಗೂ ಅದರಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದ ಫೈಲ್ ಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮತ್ತೆ ಪ್ರಧಾನ ಎಂಜಿಯರ್ ಹೆಗಲೇರಿತ್ತು. ಆದರೂ 12 ಕಾಮಗಾರಿ ವಿಭಾಗಗಳ ಫೈಲ್ ಗಳು ಕಚೇರಿಗೆ ಬರದೆ ಆ ಪೋಸ್ಟ್ ಕೇವಲ ನಾಮಕಾವಸ್ಥೆಗಷ್ಟೆ ಸೀಮಿತವಾಗಿತ್ತು.
ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿ ಅಥವಾ ನಗರಾಭಿವೃದ್ಧಿ ಇಲಾಖೆ ಹೀಗೆ ವಿಧಾನಸೌಧ, ವಿಕಾಸಸೌಧದಲ್ಲಿ ಬಿಬಿಎಂಪಿ ಕುರಿತಂತೆ ನಡೆಯುವ ಸಭೆಗಳಲ್ಲಿ ಮಾತ್ರ ಪ್ರಧಾನ ಎಂಜನಿಯರ್ ಗಳು ಭಾಗವಹಿಸುವುದಕಷ್ಟೆ ಈ ಹುದ್ದೆ ಸೀಮಿತವಾಗಿದೆ. ಪ್ರಧಾನ ಎಂಜಿನಿಯರ್ ಆಗಿ ಬಡ್ತಿ ಹೊಂದಿ ನಿವೃತ್ತಿ ಹೊಂದುವ ತವಕದಲ್ಲಿರುವವರಿಗೆ ಮಾತ್ರ ಈ ಹುದ್ದೆ ಬಗ್ಗೆ ಆಸಕ್ತಿ ಎಂಬಂತಹ ಸ್ಥಿತಿ ನಿರ್ಮಾಣವಾಗಿ ಬಹಳ ಕಾಲವಾಗಿದೆ.