ಬೆಂಗಳೂರು, ಮೇ.16 (www.bengaluruwire.com) : ಇಷ್ಟಾ ಬಂದಾಗ ಆಫೀಸ್ ಗೆ ಬರೋದು, ವೈಯುಕ್ತಿಕ ಕೆಲಸ ಇತ್ತು ಅಂತ ಬೇಗ ಮನೆಗೆ ಹೋಗೋದು ಅಥವಾ ಹೊರಗೆ ಹೋಗದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿಯಲ್ಲಿ ಈ ಹಿಂದೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಪುನಃ ಪಾಲಿಕೆಯಲ್ಲಿ ಜಾರಿಗೆ ತರಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಟ್ಟಪ್ಪಣೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕರೋನಾ ಸೋಂಕು ಕಾರಣಕ್ಕೆ ಬಯೋಮೆಟ್ರಿಕ್ ನಲ್ಲಿ ಬೆರಳಚ್ಚು ನೀಡಿದರೆ ಸೋಂಕು ಹರಡಬಹುದೆಂಬ ಕಾರಣಕ್ಕೆ 2020ರಿಂದಲೇ ನಿಲ್ಲಿಸಿದ್ದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಪುನಃ ಜಾರಿಗೆ ತರಲು ಪಾಲಿಕೆಯ ಆಡಳಿತ ವಿಭಾಗ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಸೂಚನೆ ನೀಡಿದೆ. ಕೇಂದ್ರ ಕಚೇರಿ, ವಲಯ ಕಚೇರಿ, ವಿಭಾಗೀಯ ಹಾಗೂ ಉಪವಿಭಾಗೀಯ ಕಚೇರಿಗಳಳ್ಲಿ ಕಟ್ಟುನಿಟ್ಟಾಗಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮುಖ್ಯ ಆಯುಕ್ತರ ಸೂಚನೆ ಹಿನ್ನಲೆಯಲ್ಲಿ ಪಾಲಿಕೆ ಆಡಳಿತ ವಿಭಾಗ ಈ ಸಂಬಂಧ ಕಚೇರಿ ಸುತ್ತೋಲೆಯನ್ನು ಹೊರಡಿಸಿದೆ.
ವಿಜಯ್ ಭಾಸ್ಕರ್ ಅವಧಿಯಲ್ಲಿ ಜಾರಿಗೆ ಬಂದಿತ್ತು ಬಯೋಮೆಟ್ರಿಕ್ ವ್ಯವಸ್ಥೆ :
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಆಧರಿಸಿ ವೇತನ ನೀಡುವ ವ್ಯವಸ್ಥೆ ಜಾರಿಗೆ ತರಲು ಈ ಹಿಂದೆ ವಿಜಯ್ ಭಾಸ್ಕರ್ ಆಡಳಿತಗಾರರಾಗಿದ್ದ ಸಂದರ್ಭದಲ್ಲಿ ಪ್ರಯತ್ನಸಿದ್ದರು. ಅದರ ಫಲವಾಗಿ ಪಾಲಿಕೆ ಕೇಂದ್ರ ಕಚೇರಿ, ವಲಯ ಕಚೇರಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.
ವಿಭಾಗೀಯ ಕಚೇರಿ ಮತ್ತು ಉಪವಿಭಾಗೀಯ ಕಚೇರಿಗಳಲ್ಲೂ ಬಯೋಮೆಟ್ರಿಕ್ ಯಂತ್ರವನ್ನುಅಳವಡಿಸಿದ್ದರೂ, ಅವುಗಳನ್ನು ಜಾರಿಗೆ ತರಲು ಮತ್ತು ಅದನ್ನು ಅನುಸರಿಸಲು ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿತ್ತು. ಅಲ್ಲದೆ ಬಯೋಮೆಟ್ರಿಕ್ ಅಳವಡಿಸಿದ ಕಡೆ ಕಚೇರಿಗೆ ಸರಿಯಾದ ವೇಳೆಯಲ್ಲಿ ಆಗಮಿಸಿ, ಕೆಲಸದ ಅವಧಿ ಮುಗಿದ ಬಳಿಕವಷ್ಟೇ ಮನೆಗೆ ತೆರಳಬೇಕಿತ್ತು. ಒಂದೊಮ್ಮೆ ಕಚೇರಿಗೆ ತಡವಾಗಿ ಆಗಮಿಸಿದರೆ ಸಾಫ್ಟ್ ವೇರ್ ನಲ್ಲಿ ಕಚೇರಿಗೆ ಬಂದ ಮತ್ತು ಹೋದ ಅವಧಿ ದಾಖಲಾಗುತ್ತಿತ್ತು. ಹಾಗಾಗಿ ಬಯೋಮೆಟ್ರಿಕ್ ಗೆ ಬೆರಳಚ್ಚು ಕೊಡುವ ಸ್ಥಳದಲ್ಲಿ ಗುಂಡ್ ಪಿನ್ ಅಥವಾ ಇನ್ನಾವುದೇ ಚೂಪಾದ ವಸ್ತುವಿನಿಂದ ಗೀರಿ ಥಂಬ್ ಇಂಪ್ರೆಶನ್ ಪಡೆಯಲಾಗದಂತೆ ಯಂತ್ರವನ್ನು ಹಾಳುಗೆಡುವ ಪ್ರಕರಣಗಳು ಅಲ್ಲಲ್ಲಿ ಕಂಡು ಬಂದಿತ್ತು.
ಬಹಳಷ್ಟು ಅಧಿಕಾರಿ, ನೌಕರರು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ಮೊದಲಿನಿಂದಲೂ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಜನಪ್ರತಿನಿಧಿಗಳ ಆಡಳಿತವಿದ್ದಾಗ ಸಿಬ್ಬಂದಿ ಮತ್ತು ಆಡಳಿತ ಸ್ಥಾಯಿ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದ ಸಂದರ್ಭದಲ್ಲೂ ಹಲವು ಬಾರಿ ಬಯೋಮೆಟ್ರಿಕ್ ಅಟೆಂಡೆನ್ಸ್ ಹಾಕಲು ಸಿಬ್ಬಂದಿ ಹಿಂದೇಟು ಹಾಕುತ್ತಿರುವ ವಿಷಯಗಳು ಬಹಿರಂಗವಾಗಿತ್ತು. ಹಲವು ಬಾರಿ ಈ ವಿಚಾರ ಕೌನ್ಸಿಲ್ ಸಭೆಗಳಲ್ಲೂ ಸಾಕಷ್ಟು ಸದ್ದು ಮಾಡುತ್ತಿತ್ತು.
ಅಲ್ಲದೆ ಬಯೋಮೆಟ್ರಿಕ್ ಯಂತ್ರವನ್ನು ಪೂರೈಸಿ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಗೆ ಸೂಕ್ತ ಅವಧಿಯಲ್ಲಿ ವಾರ್ಷಿಕ ಒಪ್ಪಂದವನ್ನು ನವೀಕರಣ ಮಾಡಿಕೊಳ್ಳದೆ, ಹಣವನ್ನು ಪಾವತಿ ಮಾಡದ ಕಾರಣಕ್ಕೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯೇ ಮಕಾಡೆ ಮಲಗಿತ್ತು. 2019ರ ಆರಂಭದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರಯೋಗಾರ್ಥವಾಗಿ ಫೇಸಿಯಲ್ ರೆಕೆಗ್ನಿಷನ್ ಸಿಸ್ಟಮ್ (ವ್ಯಕ್ತಿಯ ಮುಖವನ್ನು ಗುರುತಿಸುವ ವ್ಯವಸ್ಥೆ) ಆಧಾರಿತ ಹಾಜರಾತಿ ಯಂತ್ರವನ್ನು ಅಳವಡಿಸಲಾಗಿತ್ತು. ಅದೂ ಕೂಡ ಸೂಕ್ತ ರೀತಿ ಸ್ಪಂದನೆ ಸಿಗದೆ ಯೋಜನೆ ವಿಫಲವಾಗಿತ್ತು.
ಇದೀಗ ಹೊಸದಾಗಿ ಮುಖ್ಯ ಆಯುಕ್ತರಾಗಿ ಬಂದಿರುವ ತುಷಾರ್ ಗಿರಿನಾಥ್ ಪಾಲಿಕೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಬಿಗಿಕ್ರಮವನ್ನು ಕೈಗೊಂಡಿರುವ ಹಿನ್ನಲೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಪುನಃ ಜಾರಿಗೆ ತರಲು ಹೊರಟಿದ್ದಾರೆ.
“ಕರೋನಾ ಸೋಂಕು ಹಿನ್ನಲೆಯಲ್ಲಿ ಈ ಹಿಂದೆ ಬಿಬಿಎಂಪಿಯಲ್ಲಿ ಬಯೋಮೆಟ್ರಿಕ್ ಅಟೆಂಡೆನ್ಸ್ ವ್ಯವಸ್ಥೆಯನ್ನು ನಿಲ್ಲಿಸಲಾಗಿತ್ತು. ಪಾಲಿಕೆ ಮುಖ್ಯ ಆಯುಕ್ತರ ಸೂಚನೆ ಹಿನ್ನಲೆಯಲ್ಲಿ ಕೇಂದ್ರ ಕಚೇರಿ, 8 ವಲಯ ಕಚೇರಿ, ವಿಭಾಗ ಹಾಗೂ ಉಪವಿಭಾಗೀಯ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರುವಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಈ ಸಂಬಂಧ ಎಲ್ಲೆಲ್ಲಿ ಬಯೋಮೆಟ್ರಿಕ್ ಯಂತ್ರವು ಹಾಳಾಗಿದೆಯೋ ಅವುಗಳನ್ನು ಪುನಃ ದುರಸ್ತಿಪಡಿಸಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮರುಜಾರಿಗೆ ತರುವಂತೆ ಸೂಚಿಸಲಾಗಿದೆ. ಶೀಘ್ರದಲ್ಲೇ ಇವು ಕಾರ್ಯಗತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
– ಎಸ್.ರಂಗಪ್ಪ, ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರು
ಜಿಪಿಎಸ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿಗೆ ಚಿಂತನೆ :
ಬಿಬಿಎಂಪಿಯು ಸ್ಥಳೀಯವಾಗಿ ಆಡಳಿತ ನಡೆಸುವ ಸಂಸ್ಥೆಯಾದ ಕಾರಣ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿರುವ ಎಂಜನಿಯರ್ ಗಳು, ಹಿರಿಯ ಅಧಿಕಾರಿಗಳು ಕಚೇರಿ ಅವಧಿಗೂ ಮುನ್ನವೇ ಕೆಲಸಕ್ಕೆ ಆಗಮಿಸಿಬೇಕಾದ ಅಥವಾ ಕೆಲಸದ ಅವಧಿ ಮೀರಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿರುತ್ತದೆ. ಉದಾಹರಣೆಗೆ ಕೆರೆ ಅಭಿವೃದ್ಧಿ ಪರಿಶೀಲನೆ, ಘನತ್ಯಾಜ್ಯ ವಿಲೇವಾರಿ ಘಟಕಗಳ ಪರಿಶೀಲನೆ, ರಸ್ತೆ ಗುಂಡಿ ಕಾಮಗಾರಿ ಪರಿಶೀಲನೆ, ಭಾರೀ ಮಳೆಯಿಂದಾಗಿ ಅವಘಡ ಸಂಭವಿಸಿದಾಗ ತುರ್ತು ಕಾಮಗಾರಿ ಕೈಗೊಳ್ಳುವಾಗ ಹೀಗೆ ವಿವಿಧ ಸಂದರ್ಭದಲ್ಲಿ ತಾವು ಕೆಲಸ ನಿರ್ವಹಿಸುತ್ತಿರುವ ಸ್ಥಳಕ್ಕೆ ಆಗಮಿಸಿ ಕಚೇರಿ ಬಂದು ಬಯೋಮೆಟ್ರಿಕ್ ಅಟೆಂಡೆನ್ಸ್ ಹಾಕುವುದು ಕಷ್ಟಸಾಧ್ಯ. ಹೀಗಾಗಿ ತಾವು ಕೆಲಸ ನಿರ್ವಹಿಸುತ್ತಿರುವ ಸ್ಥಳದಿಂದಲೇ ಭೌಗೋಳಿಕ ಮಾಹಿತಿ ವ್ಯವಸ್ಥೆ ಜೊತೆಗೂಡಿದ ಬಯೋಮೆಟ್ರಿಕ್ ಅಟೆಂಡೆನ್ಸ್ ಹಾಕುವ ಸಿಸ್ಟಮ್ ಅಳವಡಿಸಲು ಬಿಬಿಎಂಪಿ ಇದೀಗ ಚಿಂತನೆ ನಡೆಸಿದೆ.
ಈ ಸಂಬಂಧ ಕೆಲವು ದಿನಗಳ ಹಿಂದಷ್ಟೇ ಖಾಸಗಿ ಸಂಸ್ಥೆಯೊಂದು ಈ ವ್ಯವಸ್ಥೆ ಕೆಲಸ ನಿರ್ವಹಿಸುವ ಬಗ್ಗೆ ಸುಧೀರ್ಘ ಮಾಹಿತಿಯನ್ನು ಆಡಳಿತ ವಿಭಾಗದ ಅಧಿಕಾರಿಗಳಿಗೆ ನೀಡಿದೆ. ಈಗಿರುವ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪುನಃ ಜಾರಿಗೆ ತಂದು ಎಕ್ಸಿಕ್ಯೂಟಿವ್ ಹುದ್ದೆಯಲ್ಲಿರುವವರಿಗೆ ತಾವು ಕಚೇರಿ ಹೊರಗೆ ತಾವು ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದಲೇ ಅಟೆಂಡೆನ್ಸ್ ಹಾಕುವ ಹಾಗೂ ಕಚೇರಿಯಲ್ಲಿ ಕೆಲಸ ಮಾಡುವ ಎಫ್ ಡಿಎ, ಎಸ್ ಡಿಎ ಮತ್ತಿತರ ನಾನ್ ಎಕ್ಸಿಕ್ಯೂಟಿವ್ ಸಿಬ್ಬಂದಿಗೆ ಕಚೇರಿಯಲ್ಲಿ ಈಗಿನಂತೆ ಅಳವಡಿಸಿರುವ ಬಯೋಮೆಟ್ರಿಕ್ ಯಂತ್ರದ ಮೂಲಕ ಹಾಜರಾತಿ ಹಾಕುವುದನ್ನು ಮುಂದುವರೆಸುವ ಬಗ್ಗೆ ಪಾಲಿಕೆ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದು ಬಳಿಕ ಪಾಲಿಕೆ ಅಗತ್ಯಕ್ಕೆ ತಕ್ಕಂತೆ ಸಾಫ್ಟ್ ವೇರ್ ಹಾಗೂ ತಾಂತ್ರಿಕ ಬದಲಾವಣೆಯನ್ನು ಮಾಡಿ ಹೊಸ ವ್ಯವಸ್ಥೆ ಜಾರಿಗೆ ತರಬೇಕಾಗಿರುತ್ತದೆ. ಇದಕ್ಕೆ ಸಮಯ ಹಿಡಿಯಲಿದೆ ಎಂದು ಬಿಬಿಎಂಪಿಯ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.
ಒಟ್ಟಿನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲು ಸಮಯ ಹಿಡಿಯಲಿದೆ. ಅಲ್ಲಿಯ ತನಕ ಶೀಘ್ರದಲ್ಲೇ ಈಗಿರುವ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತಂದರೆ ಅಷ್ಟರ ಮಟ್ಟಿಗೆ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಗಳಿಗೆ, ಬಿಬಿಎಂಪಿಯ ಆಡಳಿತ ನಡೆಸಲು ಅನುಕೂಲವಾಗಲಿದೆ ಎಂದು ನಾಗರೀಕ ಸಂಘ ಸಂಸ್ಥೆಗಳ ಅಭಿಪ್ರಾಯವಾಗಿದೆ.