ಬೆಂಗಳೂರು, ಮೇ.13 (www.bengaluruwire.com) : ನಗರದ ಶಂಕರಪುರದಲ್ಲಿನ ಶೃಂಗೇರಿ ಶ್ರೀ ಶಾರದಾ ಪೀಠದ ಶಂಕರಮಠದಲ್ಲಿ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ವಿಜಯ ಯಾತ್ರೆ 2022ರ ಪ್ರಯುಕ್ತ ಸ್ವಾಮಿಗಳು ಶಂಕರಮಠ ಶಂಕರಪುರಂ ನಲ್ಲಿ ಇಂದು ಮಾಗಡಿಯಿಂದ ಬೆಂಗಳೂರಿಗೆ ಬರಲಿದ್ದಾರೆ.
50 ದಿನಗಳ ಶಂಕರಮಠದಲ್ಲಿ ವಾಸ್ತವ್ಯ ಮಾಡಿ ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ. ಶ್ರೀಗಳ ವಿಜಯಯಾತ್ರೆ ಮೊದಲನೆಯ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಬಸವನಗುಡಿಯ ನಾರ್ಥ್ ರೋಡ್ ಮಾಗಡಿ ಕನಿಕರ ವೇದ ಪಾಠಶಾಲಾ ಮುಂಭಾಗದಿಂದ ಶಂಕರಪುರಂನ ಶೃಂಗೇರಿ ಶಂಕರಮಠದವರೆಗೂ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ವಿಶೇಷ ಮೆರವಣಿಗೆಯು ವೇದ ಮಂತ್ರ ಘೋಷ ಹಾಗೂ ವಿವಿಧ ಜಾನಪದ ಕಲೆಗಳೊಂದಿಗೆ ನಡೆಯಲಿದೆ.
ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ 37ನೆಯ ಉತ್ತರಾಧಿಕಾರಿಯಾಗಿರುವ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು 2015ರಂದು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.
ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ವಿಜಯ ಯಾತ್ರೆ 2022 ಇದೇ ಮೇ ತಿಂಗಳ 8ರಿಂದ ಶೃಂಗೇರಿಯಿಂದ ಆರಂಭವಾಗಿ ಹಾಸನದ ಮೂಲಕ ಮೈಸೂರಿನ ಶಂಕರಮಠದಲ್ಲಿ ವಾಸ್ತವ್ಯ ಮಾಡಿದ್ದರು. ಬಳಿಕ ಚಾಮರಾಜನಗರದ ಹೆಬ್ಬಸೂರು ಹಾಗೂ ಮಾಗಡಿಯ ಮೂಲಕ ಇಂದು ಬೆಂಗಳೂರಿಗೆ ಬರಲಿದ್ದಾರೆ.