ಬೆಂಗಳೂರು, ಮೇ.12 (www.bengaluruwire.com) : ವರ್ತೂರಿನ ಕೆರೆ ಕೋಡಿಯಿಂದ ವರ್ತೂರಿನ ವಿಶಾಲ್ ಮಾರ್ಟ್ ವರೆಗೆ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಲೆಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) ನಿರ್ಮಿಸಲು ಹೊರಟಿರುವ ಎಲಿವೇಟೆಡ್ ಕಾರಿಡಾರ್ ಮೇಲ್ಸೇತುವೆಗೆ ವರ್ತೂರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಸಹಿ ಸಂಗ್ರಹ ಚಳುವಳಿ ಆರಂಭಿಸಿದ್ದಾರೆ.
482 ಕೋಟಿ ರೂ. ವೆಚ್ಚದ ಈ ಯೋಜನೆ ನಿರ್ಮಾಣದಿಂದ ವರ್ತೂರಿನ ಸುಮಾರು 20 ಸಾವಿರ ಗ್ರಾಮಸ್ಥರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಈ ಫ್ಲೈಓವರ್ ಮಾಡುವುದರಿಂದ ವರ್ತೂರಿನ ವ್ಯಾಪಾರ ವಹಿವಾಟಿಗೂ, ಭೂಮಿಯ ಬೆಲೆಗೂ ಕುತ್ತು ಬರಲಿದೆ. ಅಲ್ಲದೆ ವರ್ತೂರಿನ ಮುಖ್ಯರಸ್ತೆಯಲ್ಲಿರುವ ಪುರಾತನ ಇತಿಹಾಸಕ್ಕೂ ಧಕ್ಕೆಯಾಗಲಿದೆ. ಇನ್ನು ವರ್ತೂರಿನ ಸುಪ್ರಸಿದ್ಧ ಶ್ರೀ ಚನ್ನರಾಯಸ್ವಾಮಿ ಜಾತ್ರೆಯ ಹೆಸರುವಾಸಿ ರಥದ ಮೆರವಣಿಗೂ ಅಡ್ಡಿಯಾಗುತ್ತದೆ. ಮುಂದೊಂದು ದಿನ ವರ್ತೂರಿನ ಜನರಿಗೆ ಮೆಟ್ರೊ ರೈಲು ಮಾರ್ಗದ ಸೌಲಭ್ಯವೂ ಸಿಗದಂತಾಗುತ್ತದೆ ಎಂದು ಸಹಿ ಸಂಗ್ರಹ ಚಳುವಳಿಯಲ್ಲಿ ತೊಡಗಿರುವ ವರ್ತೂರು ರೈಸಿಂಗ್, ವರ್ತೂರು ನಾಗರೀಕ ರಕ್ಷಣಾ ವೇದಿಕೆ, ವೈಟ್ ಫೀಲ್ಡ್ ರೈಸಿಂಗ್ ಸಂಘಟನೆ ಸೇರಿದಂತೆ ಹಲವು ನಾಗರೀಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ರಸ್ತೆ ಅಗಲೀಕರಣ ಮಾಡಿ ಅಥವಾ ಅಂಡರ್ ಪಾಸ್ ನಿರ್ಮಿಸಿ :
ಈ ಫ್ಲೈಓವರ್ ಕಟ್ಟುವ ಬದಲು ವರ್ತೂರು ಮುಖ್ಯ ರಸ್ತೆಯಲ್ಲಿರುವ ಕಟ್ಟಡ ಮಾಲೀಕರ ಮನವೊಲಿಸಿ ರಸ್ತೆ ಅಗಲೀಕರಣ ಮಾಡಲಿ ಅಥವಾ ವರ್ತೂರು ಹೈಸ್ಕೂಲ್ ಮುಂಭಾಗ, ವರ್ತೂರು ಪೊಲೀಸ್ ಸ್ಟೇಷನ್ ಹಾಗೂ ಬಳಗೆರೆ ರಸ್ತೆ ಸಂಪರ್ಕಿಸುವ ಜಾಗದಲ್ಲಿ ಕುಂದಲಹಳ್ಳಿ ಜಂಕ್ಷನ್ ನಲ್ಲಿ ನಿರ್ಮಿಸಿರುವಂತಹ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಲಿ. ಆಗ ಟ್ರಾಫಿಕ್ ಸಮಸ್ಯೆ ಪರಿಹಾರವಾಗಿ, ಹಾಲಿ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಆಸಕ್ತಿವಹಿಸಿ ನಿರ್ಮಾಣ ಮಾಡಲು ಹೊರಟಿರುವ ಫ್ಲೈಓವರ್ ಅವಶ್ಯಕತೆಯಿರುವುದಿಲ್ಲ. ವರ್ತೂರು ಮುಖ್ಯರಸ್ತೆಯಲ್ಲಿ ಯಾವುದೇ ಪಕ್ಷದ ಮುಖಂಡರು ಅಥವಾ ಕಾರ್ಯಕರ್ತರು ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬೆಂಬಲ ನೀಡಿದರೂ ಅವರೆಲ್ಲ ವರ್ತೂರಿನ ಭವಿಷ್ಯದ ಅಭಿವೃದ್ಧಿಯನ್ನು ವಿರೋಧಿಸುವವರು ಎಂದು ತಿಳಿಯಬೇಕಾಗುತ್ತದೆ ಎಂದು ಸಹಿಸಂಗ್ರಹ ಚಳುವಳಿಯಲ್ಲಿ ತೊಡಗಿರುವವರು ಎಚ್ಚರಿಕೆ ನೀಡಿದ್ದಾರೆ.
ವರ್ತೂರು ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಗ್ರಾಮಗಳಾದ ಸೋರಹುಣಸೆ, ಮಧುರಾನಗರ, ವಾಲೇಪುರ, ಮುತ್ಸಂದ್ರ, ಹಾರೋಹಳ್ಳಿ, ಬಳಗೆರೆ, ಹಲಸಹಳ್ಳಿ ಹಾಗೂ ತಿಪ್ಪಸಂದ್ರ ಗ್ರಾಮಗಳ ಅಭಿವೃದ್ಧಿಗೂ ಈ ಎಲಿವೇಟೆಡ್ ಕಾರಿಡಾರ್ ನಿಂದ ತೊಂದರೆಯಾಗಲಿದೆ. ಈ ಫ್ಲೈಓವರ್ ಒಂದೊಮ್ಮೆ ನಿರ್ಮಾಣವಾದರೆ ಅದರಿಂದ ವರ್ತೂರಿನ ನಾಗರೀಕರಿಗೆ ಪ್ರಯೋಜನವಾಗದು. ಬದಲಿಗೆ ವಿಶಾಲ್ ಮಾರ್ಟ್ ಆದ ನಂತರ ಇರುವ ಅಪಾರ್ಟ್ ಮೆಂಟ್ ಗಳಿಗೆ ಮಾತ್ರ ಅನುಕೂಲಕಾರಿಯಾಗಿದೆ.ವರ್ತೂರಿನ ಜನರನ್ನು ಓಟಿಗೆ ಮಾತ್ರ ಉಪಯೋಗಿಸಿಕೊಂಡು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇಲ್ಲಿನ ಜನಪ್ರತಿನಿಧಿಗಳು ಈ ವಿಚಾರದಲ್ಲಿ ವರ್ತಿಸುತ್ತಿದ್ದಾರೆ ಎಂದು ಸಹಿ ಸಂಗ್ರಹ ಚಳುವಳಿಯಲ್ಲಿ ತೊಡಗಿರುವ ನಾಗರೀಕರು ದೂರಿದ್ದಾರೆ.
ಅಭಿವೃದ್ಧಿಗೆ ವರ್ತೂರು ಗ್ರಾಮಸ್ಥರ ವಿರೋಧವಿಲ್ಲ. ಆದರೆ ಅಭಿವೃದ್ಧಿ ಹೆಸರಿನಲ್ಲಿ ವರ್ತೂರು ಮುಖ್ಯರಸ್ತೆಯಲ್ಲಿ ಅನಗತ್ಯವಾದ ಎಲಿವೇಟೆಡ್ ಕಾರಿಡಾರ್ ನಿರ್ಮಿಸಿ ವರ್ತೂರನ್ನು 50 ವರ್ಷಗಳ ಹಿಂದಕ್ಕೆ ತಳ್ಳುವುದು ಬೇಡ. ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿಯಿಂದ ವೈಟ್ ಫೀಲ್ಡ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಈ ವರ್ತೂರು ಮುಖ್ಯರಸ್ತೆಯನ್ನು ಅಗಲೀಕರಣ ಮಾಡಿದರೆ ಸಾಕಷ್ಟು ಸಮಸ್ಯೆಗಳು ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂದು ತಿಂಗಳವರೆಗೆ ನಡೆಯಲಿದೆ ಸಹಿಸಂಗ್ರಹ ಚಳುವಳಿ :
“ಎಲಿವೇಟೆಡ್ ಕಾರಿಡಾರ್ ನಿರ್ಮಾಣದಿಂದ ವರ್ತೂರು ಸುತ್ತಮುತ್ತಲಿನ ಊರಿನವರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಈ ಕುರಿತಂತೆ ಸರ್ಕಾರಕ್ಕೆ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಾಲ್ಕು ದಿನದಿಂದ ಎಲ್ಲಾ ನಾಗರೀಕ ಸಂಘಟನೆಗಳು ಜೊತೆಗೂಡಿ ಸಾರ್ವಜನಿಕರಿಂದ ಸಹಿಸಂಗ್ರಹ ಚಳುವಳಿ ಆರಂಭಿಸಿದ್ದೇವೆ. ಒಂದು ತಿಂಗಳ ಅವಧಿಯವರೆಗೆ ಈ ಅಭಿಯಾನ ನಡೆಯಲಿದೆ. ಬಳಿಕ ಮುಖ್ಯಮಂತ್ರಿಗಳು, ಸ್ಥಳೀಯ ಶಾಸಕರು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಸಂಗ್ರಹಿಸಿದ ಸಹಿಯೊಂದಿಗೆ ತಮ್ಮ ಮನವಿ ನೀಡಲಿದ್ದೇವೆ. ಜನರಿಗೆ ಅನಗತ್ಯವಾದ ಎಲಿವೇಟೆಡ್ ಕಾರಿಡಾರ್ ಅನ್ನು ಬಲವಂತವಾಗಿ ನಿರ್ಮಿಸಲು ಹೊರಟಿರುವುದು ಏಕೆ?”
– ಜಗದೀಶ್ ರೆಡ್ಡಿ, ವರ್ತೂರು ರೈಸಿಂಗ್ ಸದಸ್ಯರು
ಈ ಹಿಂದೆ ಕೆಆರ್ ಡಿಸಿಎಲ್ ವರ್ತೂರು ಮುಖ್ಯ ರಸ್ತೆಯಲ್ಲಿ 187 ಕೋಟಿ ರೂ. ವೆಚ್ಚದಲ್ಲಿ 1.3 ಕಿ.ಮೀ ಉದ್ದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಆನಂತರ ಯೋಜನೆಯಲ್ಲಿ ಬದಲಾವಣೆ ಮಾಡಿ 1.92 ಕಿ.ಮೀ ಉದ್ದದ ಎಲಿವೇಟೆಡ್ ಫ್ಲೈಓವರನ್ನು 482 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಹೊರಟಿದೆ. ಈ ಯೋಜನೆ ಅನುಷ್ಠಾನ ವಿಚಾರದಲ್ಲಿ ಸ್ಥಳೀಯ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ- ಸೂಚನೆ ಪಡೆಯದೇ ಕೇವಲ ಕೆಲವು ಪಕ್ಷಗಳ ಕಾರ್ಯಕರ್ತರು, ಮುಖಂಡರನ್ನು ಮಾತ್ರ ಸಂಪರ್ಕಿಸಿ ಯೋಜನೆ ಜಾರಿಗೆ ತರಲು ಹೊರಟಿದ್ದಾರೆ. ಫ್ಲೈಓವರ್ ನಿರ್ಮಾಣಕ್ಕೆಂದು ಮುಖ್ಯರಸ್ತೆಯಲ್ಲಿರುವ ಶೇ.30ರಷ್ಟು ಮಂದಿಗೆ ಮಾತ್ರ ರಸ್ತೆ ಅಗಲೀಕರಣಕ್ಕೆ ಆಸ್ತಿ ಬಿಟ್ಟು ಕೊಡಲು ನೋಟಿಸ್ ನೀಡಲಾಗಿದೆ. ಯೋಜನೆಯಿಂದ ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ವಿಚಾರದಲ್ಲೂ ಕೆಆರ್ ಡಿಸಿಎಲ್ ಆಗಲಿ, ಜನಪ್ರತಿನಿಧಿಗಳಾಗಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ ಎಂದು ವರ್ತೂರಿನ ಜನತೆ ಅಲವತ್ತುಕೊಂಡಿದ್ದಾರೆ.
ವರ್ತೂರು ಫ್ಲೈಓವರ್ ಯೋಜನೆ ಹಾಗೂ ನಾಗರೀಕರ ಸಹಿ ಸಂಗ್ರಹ ಚಳುವಳಿ ಕುರಿತಂತೆ ಕೆಆರ್ ಡಿಸಿಎಲ್ ಮುಖ್ಯ ಎಂಜಿನಿಯರ್ ಆರ್.ಪ್ರಸಾದ್ ಹಾಗೂ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
2016-17ರಲ್ಲೇ ಆರಂಭವಾಗಬೇಕಿದ್ದ ಯೋಜನೆಗೆ ಗ್ರಹಣ :
ಕೆಆರ್ ಡಿಸಿಎಲ್ ಸಂಸ್ಥೆಯು 35 ಅಡಿಯಿಂದ 60 ಅಡಿ ಅಗಲವಿರುವ ವರ್ತೂರು ಮುಖ್ಯರಸ್ತೆಯನ್ನು 150 ಅಡಿಯಷ್ಟು ಅಗಲೀಕರಣ ಮಾಡಿ ಫ್ಲೈಓವರ್ ನಿರ್ಮಿಸುವ ಉದ್ದೇಶ ಹೊಂದಿತ್ತು. 2016-17ರಲ್ಲೇ ಆರಂಭವಾಗಬೇಕಿದ್ದ ವರ್ತೂರು ಫ್ಲೈಓವರ್ ಕಾಮಗಾರಿ ಸ್ಥಳೀಯರ ವಿರೋಧ, ಜನಪ್ರತಿನಿಧಿಗಳ ಹಸ್ತಕ್ಷೇಪ, ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳ ಕಾರಣಕ್ಕೆ ಯೋಜನೆ ಅನುಷ್ಠಾನ ಮಾಡುವಲ್ಲಿ ಸೋತಿದೆ. ಇತ್ತ ಸ್ಥಳೀಯರ ಬೇಡಿಕೆಯಂತೆ ರಸ್ತೆ ಅಗಲೀಕರಣವೂ ಆಗಿಲ್ಲ. ಅತ್ತ ವರ್ತೂರು ಎಲಿವೇಟೆಡ್ ಕಾರಿಡಾರ್ ಯೋಜನೆಯು ಅಂದುಕೊಂಡಂತೆಯೂ ಸಾಗುತ್ತಿಲ್ಲ. ಇದರ ಮಧ್ಯೆ ದಿನೇ ದಿನೇ ಇಲ್ಲಿನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ವಾಹನ ಸವಾರರು ಪ್ರತಿ ನಿತ್ಯ ಪರದಾಡುವಂತಾಗಿದೆ.