ಬೆಂಗಳೂರು, ಮೇ.12 (www.bengaluruwire.com) : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಉದ್ದೇಶಿತ ಡಾ. ಶಿವರಾಮ ಕಾರಂತ ಬಡಾವಣೆಯ ಸುಮಾರು 480 ಕಟ್ಟಡಗಳನ್ನು ಸರ್ವೋಚ್ಛ ನ್ಯಾಯಾಲಯವು ಸಕ್ರಮಗೊಳಿಸಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಸಲ್ಲಿಸಿದ 14ನೆಯ ವರದಿಯನ್ನು ಅಂಗೀಕರಿಸಿದ ಸರ್ವೋಚ್ಛ ನ್ಯಾಯಾಲಯ ಈ ಕಟ್ಟಡಗಳನ್ನು ಸಕ್ರಮಗೊಳಿಸಿದೆ. ಸಮಿತಿ ನೀಡಿದ ವರದಿಯ ಆದಾರದ ಮೇಲೆ 2018 ಕ್ಕಿಂತ ಮುಂಚೆ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದು ಕಟ್ಟಿದ ಕಟ್ಟಡಗಳ ಮಾಲೀಕರು ಸಲ್ಲಿಸಿದ ದಾಖಲೆಗಳ ಮೇಲೆ ಸರ್ವೋಚ್ಛ ನ್ಯಾಯಾಲಯ ಈ ಕಟ್ಟೆಗಳನ್ನು ಸಕ್ರಮಗೊಳಿಸಿ ಆದೇಶಿಸಿದೆ.
ನ್ಯಾಯಾಲಯದ ಆದೇಶದಂತೆ ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಕಟ್ಟಡಗಳ ಮಾಲೀಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಕ್ರಮ ಪ್ರಮಾಣ ಪತ್ರವನ್ನು ವಿತರಿಸುವಂತೆಯೂ ಹಾಗೂ ಕಾನೂನು ರೀತ್ಯ ಬೆಟರ್ ಮೆಂಟ್ ಶುಲ್ಕ ವಿಧಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.
ಸುಪ್ರೀಂಕೋರ್ಟ್ ಈತನಕ 2,825 ಕಟ್ಟಡಗಳನ್ನು ಸಕ್ರಮಗೊಳಿಸಿ ಆದೇಶಿಸಿದೆ.
ನ್ಯಾಯಾಲಯದ ಆದೇಶದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಟ್ಟಡಗಳ ಮಾಲೀಕರಿಗೆ ಸಕ್ರಮ ಪ್ರಮಾಣ ಪತ್ರವನ್ನು ದಿನಾಂಕ 13.05.2022 ರಿಂದ ವಿತರಿಸಲಿದೆ. ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಮೇಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಈ ಸಕ್ರಮ ಪ್ರಮಾಣ ಪತ್ರವನ್ನು ನೀಡಲಿದೆ.
ಫಲಾನುಭವಿಗಳು ಸಕ್ರಮ ಪ್ರಮಾಣ ಪತ್ರವನ್ನು ಪಡೆಯಲು ತಮ್ಮೊಂದಿಗೆ ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಆಧಾರ್ಕಾರ್ಡ್, ಸಮಿತಿಯಿಂದ ಸ್ವೀಕರಿಸಿರುವ ಎಸ್.ಎಂ.ಎಸ್., ಸಮಿತಿಯು ನೀಡಿರುವ ರಸೀದಿಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.