ಬೆಂಗಳೂರು, ಮೇ.12 (www.bengaluruwire.com) : ರಾಜಧಾನಿಯ ಹೊರವಲಯದಲ್ಲಿರುವ ದೇಶದ 6ನೇ ಅತಿಹಳೆಯ ದೊಡ್ಡ ಆಲದ ಮರದ ಬೀಳಲು ಬೇರು ಸಮೂಹ ಭಾರೀ ಮಳೆಯಿಂದ ಬಿದ್ದು ಹೋಗಿರುವ ಸ್ಥಳಕ್ಕೆ ಇಂದು ದೊಡ್ಡ ಆಲದ ಮರ ಸಂರಕ್ಷಣಾ ಸಮಿತಿ ಸದಸ್ಯರು ಹಾಗೂ ತಜ್ಞರು ಭೇಟಿ ನೀಡಿ ಆಲದ ಮರದ ಆರೋಗ್ಯ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿ, ಮರದ ಸಂರಕ್ಷಣೆ ಬಗ್ಗೆ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು.
ದೊಡ್ಡ ಆಲದ ಮರುವು ಒಟ್ಟು 400 ವರ್ಷಗಳಷ್ಟು ಹಳೆಯದಾಗಿದ್ದು, 3 ಎಕರೆ ಪ್ರದೇಶದಲ್ಲಿ 1,359 ಬೀಳಲು ಬೇರುಗಳನ್ನು ಹೊಂದಿದೆ. ಆ ಪೈಕಿ 811 ಸಂಖ್ಯೆಯ ಬೀಳಲು ನೆಲಕ್ಕೆ ಬೇರು ಬಿಟ್ಟಿದೆ. ಉಳಿದ 548 ಸಂಖ್ಯೆಯ ಬೀಳಲಿನ ಬೇರುಗಳು ನೆಲದಿಂದ 10 ರಿಂದ 20 ಅಡಿ ಎತ್ತರದಲ್ಲಿ ತೂಗುತ್ತಿದೆ. ಇವುಗಳ ಪೈಕಿ ಒಂದು ಬೀಳಲಿನ ಬೇರು ಸಮೂಹ ಮೇ.8ರಂದು ಭಾನುವಾರ ರಾತ್ರಿ ಸುರಿದ ಮಳೆಗೆ ಸಂಪೂರ್ಣವಾಗಿ ಬಿದ್ದು ಹೋಗಿತ್ತು.
ಈ ಹಿನ್ನಲೆಯಲ್ಲಿ ದೊಡ್ಡ ಆಲದ ಮರ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಹಾಗೂ ಸದಸ್ಯರು, ತಜ್ಞರು ಈ ಮರವನ್ನು ಪರಿಶೀಲಿಸಿ ದೊಡ್ಡ ಆಲದ ಮರ ನಿರಂತರವಾಗಿ ಬೆಳೆಯುವ ಮರವಾಗಿದ್ದು, ಹಳೆಯ ಬೀಳಲು ಬೇರು ಮತ್ತು ಬೇರುಗಳ ಸಮೂಹದ ದೃಢತೆಯ ಚೈತನ್ಯವು ಸ್ವಾಭಾವಿಕವಾಗಿ ಹೊಸ ಬೀಳಲು ಬೇರುಗಳ ದೃಢತೆಯ ಚೈತನ್ಯಕ್ಕಿಂತ ಕಡಿಮೆಯಿರುತ್ತದೆ. ಪ್ರಸ್ತುತ ಉರುಳಿ ಬಿದ್ದಿರುವ ಬೀಳಲು ಬೇರುಗಳ ಸಮೂಹ ಭಾರಿ ಗಾಳಿ- ಮಳೆಯಿಂದ ನೈಸರ್ಗಿಕವಾಗಿ ಉರುಳಿ ಬಿದ್ದಿದೆ. ದೊಡ್ಡ ಆಲದ ಮರದ ಮೂಲ ಕಾಂಡವು 60 ವರ್ಷಗಳ ಹಿಂದೆಯೇ ನೈಸರ್ಗಿಕವಾಗಿ ಬಿದ್ದು ನಾಶವಾಗಿದೆ ಎಂದರು.
ದೊಡ್ಡ ಆಲದ ಮರ ಸಂರಕ್ಷಣಾ ಸಮಿತಿ ಈ ಕೆಳಕಂಡಂತೆ ಕ್ರಮ ಕೈಗೊಳ್ಳಲು ತೋಟಗಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ :
ಹಾಲಿ ಉರುಳಿ ಬಿದ್ದಿರುವ ಬೀಳಲು ಬೇರುಗಳ ಕಾಂಡ ಸಮೂಹ ಪಕ್ಕದ ಬೇರು ಸಮೂಹಕ್ಕೆ ಹಾನಿ ಮಾಡುವುದನ್ನು ತಪ್ಪಿಸಲು, ಈಗಾಗಲೇ ಬಿದ್ದಿರುವ ಬೇರು ಸಮೂಹವನ್ನು ತ್ವರಿತವಾಗಿ ಕತ್ತರಿಸಿ ತೆರವುಗೊಳಿಸಬೇಕು. ಬಿದ್ದಿರುವ ಬೀಳಲು ಬೇರುಗಳ ಸಮೂಹದ ಆಯ್ದ 8-10 ಅಡಿ ಎತ್ತರದ ಕತ್ತರಿಸಿದ ಕಾಂಡದ ತುಂಡುಗಳನ್ನು ತಯಾರಿಸಿಕೊಂಡು, ಕತ್ತರಿಸಿದ ಭಾಗಕ್ಕೆ VAM (Veslcular Arbuscular Mycorrhiza) ಹೆಚ್ಚಾಗಿ ಹೊಸ ಬೇರು ಬೆಳೆಯಲು ಸಹಕಾರಿಯಾಗಿರುವ ಸೂಕ್ಷ್ಮಾಣು ಪೌಡರ್ ಅನ್ನು ಹಚ್ಚಿ ಬೇರು ಸಮೂಹ ಬಿದ್ದ ಸ್ಥಳದಲ್ಲಿ 2 ರಿಂದ 3 ಕಾಂಡದ ತುಂಡುಗಳನ್ನು ನೆಡುವಂತೆ ಸಲಹೆ ನೀಡಿದ್ದಾರೆ. ಇದರಿಂದಾಗಿ ಕಾಂಡು ಚಿಗುರಿ, ಬೇರುಬಿಟ್ಟು ಮುಂದೆ ಆಲದ ಮರದ ಭಾಗವಾಗುತ್ತದೆ. ಹಾಗೆಯೇ ಹಿಂದೆ ಮರದ ಕಾಂಡ ಬಿದ್ದು ಪಾಳಾಬಿದ್ದಿರುವ 5-6 ಸ್ಥಳದಲ್ಲಿಯೂ ಸಹಾ ಇದೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಪರಿಶೀಲನಾ ಸಮಯದಲ್ಲಿ 2 ಬೀಳಲು ಬೇರುಗಳ ಸಮೂಹದ ದೃಢತೆ ನೈಸರ್ಗಿಕವಾಗಿ ಕುಗ್ಗಿದ್ದು, ಮುಂದೆ ಮಳೆ- ಗಾಳಿಗೆ ಬೀಳುವ ಸಂಭವಿರುವುದನ್ನು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದನ್ನು ತಪ್ಪಿಸಲು ಈ ಬೀಳಲು ಬೇರುಗಳ ಸುತ್ತಲೂ ಕಲ್ಲಿನ ಬೋಲ್ಡರ್ಸ್ ಗಳನ್ನು ಜೋಡಿಸಿ, ಮಧ್ಯಭಾಗಕ್ಕೆ ಕೆಂಪು ಮಣ್ಣನ್ನು ತುಂಬಿಸಿದಲ್ಲಿ ಮುಂದೆ ಆಗುವ ನೈಸರ್ಗಿಕ ಅವಘಡದ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದೆಂದು ತಜ್ಞರು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಾಸ್ತವವಾಗಿ ಎತ್ತರದ ಬೀಳಲು ಬೇರುಗಳಿಗೆ ಕಬ್ಬಿಣದ ರಾಡ್ ಗಳ ಆಸರೆ ಒದಗಿಸಲು ಸಾಧ್ಯವಿಲ್ಲ. ಇದರಿಂದ ನಿರೀಕ್ಷಿತ ಸಂರಕ್ಷಣೆಯನ್ನು ಸಹ ನೀಡಲು ಸಾಧ್ಯವಿಲ್ಲ. ಹಾಗಾಗಿ ವಾಸ್ತವಾಂಶವನ್ನು ಅವಲೋಕಿಸಿದ ಸಮಿತಿಯು ಭೂಮಿಗೆ ತಾಗುವ ಸಾಧ್ಯತೆಯಿರುವ ಕಾಂಡಗಳಿಗೆ ಮಾತ್ರ ಕಬ್ಬಿಣದ ಲೋಹದ ವೈ ಆಕಾರದ ಆಸರೆ ನೀಡಲು ತಿಳಿಸಿದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೇ ತಿಂಗಳ ಆರಂಭದಿಂದ ಈತನಕ ಹೆಚ್ಚು ಗಾಳಿ- ಮಳೆಯಿಂದ 201 ಮರಗಳು ಬುಡ ಸಮೇತ ಉರುಳಿ ಬಿದ್ದಿದೆ. ಅಲ್ಲದೆ ಸುಮಾರು 845 ಮರಗಳ ರೆಂಬೆಗಳು ಮುರಿದು ಬಿದ್ದಿದೆ. ಅಲ್ಲದೆ ತಮಿಳುನಾಡಿನಲ್ಲಿರುವ ದೇಶದ 3ನೇ ಅತಿದೊಡ್ಡ ಆಲದ ಮರದ ಕೆಲವು ಭಾಗಗಳು ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಹಾನಿಗೀಡಾಗಿದೆ. ಇಂತಹ ನೈಸರ್ಗಿಕ ಪರಿಸ್ಥಿತಿಯಲ್ಲಿ ಮಳೆ ಮತ್ತು ಗಾಳಿಯ ತೀವ್ರತೆಯಿಂದಾಗಿ ಯಾವುದೇ ಮರಗಳು ನೈಸರ್ಗಿಕವಾಗಿ ಹಾನಿಗೀಡಾಗುತ್ತದೆಂದು ದೊಡ್ಡ ಆಲದ ಮರ ಸಂರಕ್ಷಣಾ ಸಮಿತಿಯು ಅಭಿಪ್ರಾಯಪಟ್ಟಿತು.
ದೊಡ್ಡ ಆಲದ ಮರ ಪರಿಶೀಲನೆ ಸಂದರ್ಭದಲ್ಲಿ ಬಟಾನಿಕಲ್ ಸರ್ವೇ ಆಫ್ ಇಂಡಿಯಾ ನಿರ್ದೇಶಕರು ಹಾಗೂ ಕೋಲ್ಕತಾ ಬಟಾನಿಕಲ್ ಗಾರ್ಡನ್ ನ ದೇಶದ ಅತಿದೊಡ್ಡ ಆಲದ ಮರದ ಉಸ್ತುವಾರಿ ತಜ್ಞರಾದ ಡಾ.ಸಂಜಪ್ಪ, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಸಸ್ಯಶಾಸ್ತ್ರೀಯ ವಿಭಾಗದ ಡೀನ್ ಮತ್ತು ಮುಖ್ಯಸ್ಥರಾದ ಡಾ.ಬಾಲಕೃಷ್ಣಗೌಡ, ರಾಜ್ಯ ತೋಟಗಾರಿಕೆ ಜಂಟಿ ನಿರ್ದೇಶಕರಾದ ಡಾ.ಎಂ.ಜಗದೀಶ್, ಕೇತೋಹಳ್ಳಿ ಗ್ರಾಮಸ್ಥರು, ಪರಿಸರ ಪ್ರಿಯರು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.