ಬೆಂಗಳೂರು, ಮೇ.11 (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.
ರಾಜರಾಜೇಶ್ವರಿ ನಗರ ವಾರ್ಡ್ ಬಂಗಾರಪ್ಪ ನಗರ ಮುಖ್ಯ ರಸ್ತೆಯಲ್ಲಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಹಾಗೂ ಶಿವನಪಾಳ್ಯ ಬಳಿ ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಗೆ ಮುಖ್ಯ ಆಯುಕ್ತರು ಭೇಟಿ ನಿಡಿ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ 57 ಆಟೋ ಟಿಪ್ಪರ್ ಪೈಕಿ 50 ಆಟೋಗಳಿಗೆ GPS ತಂತ್ರಾಂಶ ಅಳವಡಿಸಿದ್ದು, ಅದನ್ನು ಕರಾರುವಕ್ಕಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಅಲ್ಲದೇ ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ, ಆಟೋ ಟಿಪ್ಪರ್ ಚಾಲಕ ಮತ್ತು ಸಹಾಯಕರಿಗೆ ಪ್ರತಿ ತಿಂಗಳು ಸೂಕ್ತ ಅವಧಿಯಲ್ಲಿ ಗುತ್ತಿಗೆದಾರರು ವೇತನ ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ದಾಖಲೆಗಳೊಂದಿಗೆ ಸಂಬಂಧಪಟ್ಟ ಗುತ್ತಿಗೆದಾರರು ಆಯಾ ತಿಂಗಳು ಪಾಲಿಕೆಗೆ ಬಿಲ್ ಸಲ್ಲಿಸಿ ಹಣ ಪಡೆದು ನಿಗದಿತ ಸಮಯಕ್ಕೆ ಸಿಬ್ಬಂದಿಗೆ ವೇತನ ನೀಡಬೇಕು. ಈ ಸಂಬಂಧ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಉಲ್ಲಾಳ ವಾರ್ಡ್ ನ ಒಣತ್ಯಾಜ್ಯ ಸಂಗ್ರಣಾ ಘಟಕ ಕಾಮಗಾರಿ ಪರಿಶೀಲನೆ :
ಉಲ್ಲಾಳು ವಾರ್ಡ್ ವಾಪ್ತಿಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಒಣತ್ಯಾಜ್ಯ ಸಂಗ್ರಹಣಾ ಘಟಕ ಕಾಮಗಾರಿ ನಿರ್ಮಾಣವಾಗುತ್ತಿದ್ದು, ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಪಕ್ಕದಲ್ಲೇ ಟ್ರಾನ್ಸ್ ಫರ್ ಸ್ಟೇಷನ್ ಅನ್ನು ಪರಿಶೀಲಿಸಿ ಕಸವನ್ನು ಕಂಪ್ರೆಸ್ ಮಾಡಿ ಅದರಿಂದ ಬಂದ ತ್ಯಾಜ್ಯ ನೀರಿನ ದ್ರಾವಣ(ಲಿಚೆಟ್)ವನ್ನು ಸಮರ್ಪಕವಾಗಿ ಸಂಗ್ರಹಿಸಲು ತಿಳಿಸಿದರು. ಈ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ನಗರದಲ್ಲಿ 50 ಕಡೆ ಟ್ರಾನ್ಸ್ ಫರ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪೈಕಿ 12 ಅನ್ನು ಸ್ಥಾಪಿಸಲಾಗಿದ್ದು, 8 ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ :
ಮೈಸೂರು ರಸ್ತೆಯಿಂದ ಬೆಂಗಳೂರು ವಿಶ್ವ ವಿದ್ಯಾನಿಲಯ ಹಳೆಯ ಹೊರವರ್ತುಲ ರಸ್ತೆಯ ಹೊಯ್ಸಳ ವೃತ್ತದವರೆಗೆ 5.3 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಅದರಲ್ಲಿ ಈಗಾಗಲೇ ಒಂದು ಭಾಗದ ವೈಟ್ ಟಾಪಿಂಗ್ ಮುಗಿದಿದ್ದು, ಪಾದಚಾರಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಇನ್ನುಳಿದರ್ಧ ಭಾಗದಲ್ಲಿ 3.5 ಕಿ.ಮೀ ವೈಟ್ ಟಾಪಿಂಗ್ ಆಗಿದ್ದು, ಜಲಮಂಡಳಿ ವತಿಯಿಂದ ಕುಡಿಯುವ ನೀರು, ಒಳಚರಂಡಿ ಕಾಮಗಾರಿ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ರಸ್ತೆ ಮೀಡಿಯನ್ ಭಾಗವನ್ನು ಯೋಜನಾ ವಿಭಾಗ ಹಾಗೂ ತೋಟಗಾರಿಕಾ ವಿಭಾಗ ಸಮನ್ವಯ ಮಾಡಿಕೊಂಡು ಸರಿಯಾಗಿ ಅಭಿವೃದ್ಧಿಪಡಿಸಲು ತಿಳಿಸಿದರು.
ಉತ್ತರಹಳ್ಳಿ ಮುಖ್ಯ ರಸ್ತೆ ಅಗಲೀಕರಣ ಹಾಗೂ ರಾಜಕಾಲುವೆಯ ಸೇತುವೆ ಸ್ಥಳ ಪರಿಶೀಲನೆ :
ಉತ್ತರಹಳ್ಳಿ ಮುಖ್ಯ ರಸ್ತೆ(ಕೆಂಗೇರಿಯಿಂದ ಕನಕಪುರ ಮುಖ್ಯ ರಸ್ತೆಯ ಮಾರ್ಗ) 3.5 ಕಿ.ಮೀ ಉದ್ದದ ರಸ್ತೆಯನ್ನು ಅಗಲೀಕರಣ ಮಾಡಬೇಕಿದೆ. ಆದರೆ, ಅಭಿವೃದ್ಧಿ ಹಕ್ಕು ಹಸ್ತಾಂತರ(ಟಿಡಿಆರ್) ಹಾಗೂ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯಬೇಕಿದ್ದು, ಇರುವ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಇತ್ಯರ್ಥಪಡಿಸಿಕೊಂಡು ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ರಸ್ತೆಯನ್ನು ವಾಹನಗಳ ಸುಗಮ ಸಂಚರಕ್ಕಾಗಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ತಿಳಿಸಿದರು.
ಉತ್ತರಹಳ್ಳಿ ರಾಜಕಾಲುವೆಯನ್ನು ಕೂಡಲೆ ಅಭಿವೃದ್ಧಿಪಡಿಸಿ ಆರ್.ಸಿ.ಸಿ ತಡೆಗೋಡೆ ನಿರ್ಮಾಣ ಮಾಡಿ ಮಳೆ ನೀರು ಹೊರಬಾರದಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ರಾಜರಾಜೇಶ್ವೇರಿ ನಗರ ವಾರ್ಡ್ ಶ್ರೀನಿವಾಸ ಕ್ರಾಸ್ ಜಂಕ್ಷನ್(ಇಂದ್ರಪ್ರಸ್ತ ಹೋಟೆಲ್ ಬಳಿ) ರಾಜಕಾಲುವೆ ಬಫರ್ ಜೋನ್ ಸ್ಥಳದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಈ ಕೂಡಲೆ ಅದನ್ನು ತೆರವುಗೊಳಿಸಲು ರಾಜಕಾಲುವೆ ವಿಭಾಗದ ಇಂಜಿನಿಯರ್‌ಗಳಿಗೆ ಖಡಕ್ ಸೂಚನೆ ನೀಡಿದರು.
ಮಲ್ಲತಹಳ್ಳಿ ಕೆರೆ ಪರಿಶೀಲನೆ :
ಜ್ಞಾನ ಭಾರತಿ ವಾರ್ಡ್ ವ್ಯಾಪ್ತಿಯಲ್ಲಿ 72.15 ಎಕರೆ ಪ್ರದೇಶದ ಮಲ್ಲತಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯ ಆಯುಕ್ತರು, 59 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಕೆರೆಯಲ್ಲಿ ಹೂಳೆತ್ತುವ, ತಡೆಗೋಡೆ ನಿರ್ಮಾಣ, ಗಾಜಿನ ಮನೆ, ತೇಲುವ ಹಾಗೂ ಪಾದಚಾರಿ ಸೇತುವೆ ನಿರ್ಮಾಣ, ತೆರೆದ ರಂಗಮಂದಿರ, ಮನರಂಜನಾ ರೈಲು ಮಾರ್ಗ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕೊಳಚೆ ನೀರಿನ ಕಾಲುವೆ ನಿರ್ಮಾಣ, ವಾಯುವಿಹಾರ ಮಾರ್ಗ ಅಭಿವೃದ್ಧಿ, ವಾಯುವಿಹಾರಿಗಳ ವಿಶ್ರಾಂತಿಗಾಗಿ ಆಸನಗಳ ವ್ಯವಸ್ಥೆ, ಶೌಚಾಲಯ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೇರೋಹಳ್ಳಿ ವಾರ್ಡ್ ನಲ್ಲಿ ಡಯಾಲಿಸಿಸ್ ಸೆಂಟರ್ ಪರಿಶೀಲನೆ :
ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಡಯಾಲಿಸ್ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದ್ದು, ಜಿ + 2 ಕಟ್ಟಡದಲ್ಲಿ 10 ಹಾಸಿಗೆ ಸಾಮರ್ಥ್ಯದ ಹೆರಿಗೆ ಆಸ್ಪತ್ರೆ ಕೂಡಾ ಇರಲಿದೆ. ಆಸ್ಪತ್ರೆಯಲ್ಲಿ ಐಸಿಯು, ಹೆಚ್.ಐ.ವಿ ರೋಗಿಗಳ ಕೊಠಡಿ, ವೈದ್ಯರ ಸಮಾಲೋಚನ ಕೊಠಡಿ, ಲ್ಯಾಬ್, ಶೌಚಾಲಯ, ಆಪರೇಷನ್ ಥಿಯೇಟರ್ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಲಭ್ಯವಿರಲಿದೆ. ಮುಂದಿನ ಮೂರು ತಿಂಗಳಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಘಾಟನೆಗೆ ಸಿದ್ದಗೊಂಡ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಜೆ.ಪಿ ಪಾರ್ಕ್ ಉದ್ಯಾನವನದಲ್ಲಿ 37 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇದೇ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ವಲಯ ಜಂಟಿ ಆಯುಕ್ತರಾದ ನಾಗರಾಜ್, ಮುಖ್ಯ ಇಂಜಿನಿಯರ್ ಗಳಾದ ವಿಜಯ್ ಕುಮಾರ್, ಪ್ರಹ್ಲಾದ್, ಲೋಕೇಶ್, ವಿಜಯ್ ಕುಮಾರ್ ಹರಿದಾಸ್, ಸುಗುಣಾ, ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.