ಬೆಂಗಳೂರು, ಮೇ.10 (www.bengaluruwire.com) : ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಕಿಯಿರುವ ಸ್ಥಳೀಯಾಡಳಿತ ಚುನಾವಣೆ ನಡೆಸುವಂತೆ ಮಂಗಳವಾರ ಆದೇಶಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಕಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ಸುರೇಶ್ ಮಹಾಜನ್ ಹಾಗೂ ಮಧ್ಯಪ್ರದೇಶ ಸರ್ಕಾರದ ನಡುವಿನ ಮೇಲ್ಮನವಿ ಪ್ರಕರಣದಲ್ಲಿ ಈ ಪ್ರಮುಖ ಆದೇಶ ಹೊರಡಿಸಿ, ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಆಯೋಗ ಸ್ಥಳೀಯಾಡಳಿತ ಚುನಾವಣೆ ನಡೆಸುವ ಸಂಬಂಧ 15 ದಿನದ ಒಳಗಾಗಿ ಚುನಾವಣೆ ನಡೆಸುವಂತೆ ತೀರ್ಪು ನೀಡಿದೆ.
ಈ ಹಿನ್ನಲೆಯಲ್ಲಿ ಒಂದೂವರೆ ವರ್ಷದಿಂದ ಆಡಳಿತಾಧಿಕಾರಿಗಳ ನೇತೃತ್ವದ ಬಿಬಿಎಂಪಿಯಲ್ಲಿ ಚುನಾವಣೆ ನಡೆಯುವ ಆಶಾಭಾವನೆ ಮತ್ತೆ ಕಾರ್ಪೊರೇಟರ್ ಆಕಾಂಕ್ಷಿಗಳಲ್ಲಿ ಚಿಗುರೊಡೆದಿದೆ.
ಸುಪ್ರೀಂಕೋರ್ಟ್ ಆದೇಶದ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್, ಸ್ಥಳೀಯ ಚುನಾವಣೆ ಸಂಬಂಧ ಎರಡು ವಾರದಲ್ಲಿ ಚುನಾವಣೆ ಘೋಷಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಆಗಬೇಕಿದೆ.
ಕರ್ನಾಟಕ ಮಟ್ಟಿಗೆ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮದ್ಯಪ್ರದೇಶ ಹಾಗೂ ಸುರೇಶ್ ಮಹಾಜನ್ ನಡುವಿನ ಪ್ರಕರಣದಲ್ಲಿ ತ್ರಿಸದಸ್ಯ ಪೀಠದ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ. ಬಿಬಿಎಂಪಿ ಚುನಾವಣೆ ಸಂಬಂಧ ಪ್ರತ್ಯೇಕ ಕೇಸ್ ಇತ್ತು. ಅದು ವಿಚಾರಣೆಗೆ ಬರಲು ಮೂರು ತಿಂಗಳು ಬಾಕಿಯಿತ್ತು. ಈ ತೀರ್ಪು ಮಧ್ಯಪ್ರದೇಶ ಆದೇಶಕ್ಕೆ ಅನ್ವಯವಾಗುವುದರ ಜೊತೆಗೆ ಎಲ್ಲಾ ರಾಜ್ಯಕ್ಕೂ ಅನ್ವಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಎಲ್ಲಾ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮಾಡಬೇಕು ಅಂತ ಹೇಳಲಾಗಿದೆ. ಕಳೆದ ಬಾರಿ ನಡೆದ ಚುನಾವಣೆ ಪ್ರಕಾರವೇ ನಡೆಸಲು ಸೂಚಿಸಿದೆ. ಹಾಗಾಗಿ ಬಿಬಿಎಂಪಿಯಲ್ಲಿ 243 ವಾರ್ಡ್ ಗಳಿಗೆ ಬದಲಾಗಿ ಈ ಹಿಂದಿನಂತೆ 198 ವಾರ್ಡ್ ಪ್ರಕಾರವೇ ನಡೆಯಬೇಕಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮೀಸಲಾತಿ ಪ್ರಕಾರ ಈ ಚುನಾವಣೆ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ತಜ್ಞರ ಜೊತೆ ಮಾತಾಡುತ್ತೇವೆ. ರಾಜ್ಯ ಸರ್ಕಾರವಂತೂ ಚುನಾವಣೆ ಮಾಡಲು ತಯಾರಿದೆ. ಚುನಾವಣೆ ಯಾವಾಗ ಬಂದರೂ ಎದುರಿಸಲು ಸಿದ್ದ. ಬಿಜೆಪಿ ಪಕ್ಷ ಕೂಡ ತಯಾರಿದೆ.
ಬಿಜೆಪಿ ಪಕ್ಷದ ಬೂತ್ ಮಟ್ಟದ ಕಾರ್ಯಕ್ರಮ, ಸಮಾವೇಶ ಈಗಾಗಲೇ ಮುಗಿದಿದೆ. ವಾರ್ಡ್ ಗಳ ಅಭ್ಯರ್ಥಿಗಳ ಆಯ್ಕೆ ಮಾತ್ರ ಬಾಕಿ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು ದೊಡ್ಡದಾಗಿ ಬೆಳೆದಿದೆ. ಕೆಲ ವಾರ್ಡ್ ಗಳಲ್ಲಿ ಒಂದುವರೆ ಲಕ್ಷ ಜನರಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಬೆಂಗಳೂರಿನಲ್ಲಿ ಎಲ್ಲಾ ವಾರ್ಡ್‌ಗಳು ಸಮನಾಗಿ ಇರಬೇಕು. ಹಾಗಾಗಿ ವಾರ್ಡ್ ಮರುವಿಂಗಡಣೆ ಮಾಡಲು ಸಮಯ ತೆಗೆದುಕೊಂಡಿದ್ದೆವು. ಈಗ ಚುನಾವಣೆಗೆ ನಾವು ಸಿದ್ದರಿದ್ದೇವೆ ಎಂದು ತಮ್ಮ ಪಕ್ಷ ಹಾಗೂ ಸರ್ಕಾರ ಪಾಲಿಕೆ ಲೋಕಲ್ ಫೈಟ್ ಗೆ ರೆಡಿ ಎಂಬ ಸಂದೇಶವನ್ನು ಪ್ರತಿಪಕ್ಷಗಳಿಗೆ ರವಾನಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಬಿಬಿಎಂಪಿಗೆ ಕೂಡಲೇ ಚುನಾವಣೆ ನಡೆಸುವಂತೆ ಬಿಬಿಎಂಪಿ ಮಾಜಿ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಒತ್ತಾಯಿಸಿದ್ದಾರೆ.