ಬೆಂಗಳೂರು, ಮೇ.10, (www.bengaluruwire.com) : ರಾಜ್ಯದಲ್ಲಿ ಬ್ಯಾಂಕ್ ಗಳಿಂದ ಸಾಲ ಪಡೆಯಲು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಸಕಾಲದಲ್ಲಿ ಮತ್ತು ಸುಲಭವಾಗಿ ಸಾಲ ಸಿಗುವಂತೆ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಈ ಸಂಬಂಧ ಪತ್ರ ಬರೆದು ಮನವಿ ಮಾಡಿದೆ.
ಈ ಎರಡು ಸಂಘಟನೆಗಳ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರ್ ಬಿಐ ಕರ್ನಾಟಕ ವಲಯದ ಸಹಾಯಕ ಕಾರ್ಯನಿರ್ವಾಹಕ ವ್ಯವಸ್ಥಾಪಕರಿಗೆ ಬರೆದಿರುವ ಪತ್ರದಲ್ಲಿ, ರೈತರು ಸಕಾಲದಲ್ಲಿ ಬ್ಯಾಂಕ್ ನಿಂದ ಸಾಲ ನೀಡುವಂತೆ ಕೋರಿಕೆ ಸಲ್ಲಿಸಿದಾಗ, ಬ್ಯಾಂಕ್ ನವರು ರೈತರ ಸಿಬಿಲ್ ಸ್ಕೋರ್ ಪರಿಶೀಲಿಸಿ ಸಾಲ ನೀಡಬೇಕೆ? ಅಥವಾ ಬೇಡವೇ ? ಎಂದು ತೀರ್ಮಾನಿಸುವುದಾಗಿ ಹೇಳುತ್ತಾರೆ. ಇದರಿಂದಾಗಿ ಹಲವಾರು ರೈತರಿಗೆ ಬ್ಯಾಂಕಿನಿಂದ ಸಾಲ ದೊರೆಯುತ್ತಿಲ್ಲ. ಕೆಲವು ಸಂದರ್ಭದಲ್ಲಿ ಬೆಳಹಾನಿ, ಅತಿವೃಷ್ಟಿ, ಅನಾವೃಷ್ಟಿ ಪ್ರಕೃತಿ ವಿಕೋಪದಿಂದಾಗಿ ರೈತರು ನಷ್ಟ ಅನುಭವಿಸುತ್ತಾರೆ.
ಹಾಗಾಗಿ ನಿಯಮಗಳ ಪ್ರಕಾರ ಸಕಾಲದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗಿವುದಿಲ್ಲ. ಈ ಕಾರಣದಿಂದ ರೈತರ ಸಿಬಿಲ್ ಸ್ಕೋರ್ ಉತ್ತಮವಾಗಿರಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಈ ಸಂದರ್ಭಗಳೆಲ್ಲವನ್ನೂ ಪರಿಗಣಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿ ರದ್ದುಪಡಿಸಬೇಕು.
ಪ್ರತಿವರ್ಷ ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿ ಸಭೆ ನಡೆಸಿ ಕೃಷಿ ಚಟುವಟಿಕೆಗಳನ್ನು ನಡೆಸುವ ಬೆಳೆಗಳಿಗೆ ಬೆಳೆ ಸಾಲ ನೀಡಲು ನಿಯಮಗಳನ್ನು ರಚಿಸುತ್ತದೆ. ಈ ಸಭೆಯಲ್ಲಿ ರೈತ ಪ್ರತಿನಿಧಿಗಳನ್ನು ಚರ್ಚೆಗೆ ಕರೆಯದೆ, ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಸೂಕ್ತವಾಗಿ ಅರಿಯದೆ, ನಿರ್ಧಾರ ಮಾಡುವುದು ಸರಿಯಾದ ಕ್ರಮವಲ್ಲ. ರೈತ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿ ಅವರ ಸಮಸ್ಯೆಗಳನ್ನು ಅರಿತು ತೀರ್ಮಾನ ಕೈಗೊಳ್ಳಲು ಆರ್ ಬಿಐ ನಿಂದ ಸೂಕ್ತ ನಿರ್ದೇಶನ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.
ರೈತರ ಕೃಷಿ ಭೂಮಿ ಮೌಲ್ಯ ಆಧರಿಸಿ ಶೇ.70ರಷ್ಟು ಸಾಲ ಸೌಲಭ್ಯ ನೀಡುವ ಪದ್ಧತಿ ಜಾರಿಗೆ ತರಬೇಕು. ಇದರಿಂದಾಗಿ ರೈತರ ಅನೇಕ ಸಮಸ್ಯೆಗಳು ಬಗೆಹರಿಯುತ್ತದೆ. ನೆಮ್ಮದಿಯಾಗಿ ಕೃಷಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಲಿದೆ. ರೈತರು ಕೆಲವು ಸಂದರ್ಭದಲ್ಲಿ ಕೃಷಿ ಕಾರ್ಯಗಳಿಗೆ ಬ್ಯಾಂಕ್ ಗಳಲ್ಲಿ ಚಿನ್ನ ಅಡವಿಟ್ಟು ಗಿರವಿ ಸಾಲ ಪಡೆಯುತ್ತಾರೆ. ಇಂತಹ ಸಾಲಕ್ಕೆ ವಾರ್ಷಿಕ ಶೇ.7ರ ಬಡ್ಡಿದರದಲ್ಲಿ ಕಾಲಮಿತಿಯೊಳಗೆ ಹಣ ತುಂಬಿದ ರೈತರಿಗೆ ಕೇಂದ್ರ ಸರ್ಕಾರವು ಶೇ.4ರಷ್ಟು ಬಡ್ಡಿಯನ್ನು ಸಹಾಯಧನದ ರೂಪದಲ್ಲಿ ನೀಡುತ್ತದೆ. ಆದರೆ ಈ ಸಹಾಯಧನದ ಹಣವನ್ನು ಬ್ಯಾಂಕ್ ಗಳು ರೈತರಿಗೆ ನೀಡುವುದಿಲ್ಲ. ಈ ಕುರಿತ ನಿಯಮಗಳೇನಿವೆ ಎಂಬುದನ್ನು ತಿಳಿಸುವಂತೆ ಕುರುಬೂರು ಶಾಂತಕುಮಾರ್ ಪತ್ರದಲ್ಲಿ ಆಗ್ರಹಿಸಿದ್ದಾರೆ.