ಬೆಂಗಳೂರು, ಮೇ.10, (www.bengaluruwire.com) : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಹುಕ್ಕಾಬಾರ್ ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಸಾರ್ವಜನಿಕರಿಗೆ ಹುಕ್ಕಾ ಸೇದಲು ಅವಕಾಶ ನೀಡುತ್ತಿದ್ದ ಹುಕ್ಕಾಬಾರ್ ಮೇಲೆ ಪೊಲೀಸರು ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದಾರೆ.
ಆತಿಕುರ್ ರೆಹಮಾನ್ (25), ಅಯೂಬ್ ಖಾನ್ 26), ಗಣೇಶ್ (19) ಬಂಧಿತ ಆರೋಪಿಗಳು.
ಆದರೆ ವಾಸೀಂ ಅಹಮದ್, ಮಹಮದ್ ಸಲಾಂ ಕೆಐಎಎಲ್ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ “ಕೆಫೆ ರನ್ ವೇ” ಎಂಬ ಹುಕ್ಕಾ ಬಾರ್ ನಡೆಸುತ್ತಿದ್ದು, ಇವರ ಮೇಲೂ ವಿವಿಧ ಪ್ರಕರಣಗಳಡಿ ಮೊಕದ್ದಮೆ ದಾಖಲಿಸಲಾಗಿದೆ. ಈ ಹುಕ್ಕಾಬಾರ್ ನಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ರಾಸಾಯನಿಕಗಳನ್ನು ಹುಕ್ಕಾ ಚಿಲುಮೆಯಲ್ಲಿ ಬೆರೆಸಿ ಅಲ್ಲಿಗೆ ಬರುವ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಹುಕ್ಕಾ ಚಿಲುಮೆ ನೀಡುತ್ತಿದ್ದರು.
ಯಾವುದೇ ಪೂರ್ವಾನುಮತಿ ಇಲ್ಲದೇ ಹುಕ್ಕಾಬಾರ್ ನಡೆಸುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಮೂವರು ಬಂಧಿತ ಆರೋಪಿಗಳಿಂದ 12 ಹುಕ್ಕಾ ಚಿಲುಮೆ, 12 ಹುಕ್ಕಾ ಪೈಪು, 15 ಫ್ಲೇವರ್ಸ್, 5 ಕಿಂಗ್ ಸಿಗರೇಟ್ ಪ್ಯಾಕ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.