ಬೆಂಗಳೂರು, (www.bengaluruwire.com) : ನಗರದ ಕೆಂಗೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ ಟಿಸಿ ಬಸ್ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ನಡೆದಿದೆ. ಈ ಅಪಘಾತದಿಂದಾಗಿ ಬಸ್ ನಲ್ಲಿದ್ದ 45 ಜನರ ಪೈಕಿ 29 ಜನ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ ಟಿ ಸಿ ಬಸ್ ಕೆಂಗೇರಿಯ ಭಾರತ್ ಪೆಟ್ರೋಲ್ ಬಂಕ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ ಬಸ್ ಡಿಕ್ಕಿ ಆಗಿದೆ. ರಾತ್ರಿ 1.30 ರ ಸುಮಾರಿಗೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಾಲ್ಕು ಅಡಿವರೆಗೆ ರಸ್ತೆಪಕ್ಕದ ತಡೆಗೋಡೆಗೆ ಗುದ್ದಿ ನಂತರ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.
ರಾಮನಗರದಿಂದಿಚೆಗೆ ಬಸ್ ಚಾಲಕ ಅತೀವೇಗವಾಗಿ ಬಸ್ ಓಡಿಸುತ್ತಿದ್ದ. ಈತನ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದು ಪಿಲ್ಲರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಹುತೇಕ ಪ್ರಯಾಣಿಕರ ಬಾಯಿ, ಹಲ್ಲು, ಮುಖದ ಭಾಗಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ವಿಕ್ಟೋರಿಯಾ, ಬಿಜಿಎಸ್, ಕೆಂಗೇರಿ ಉಪನಗರದ ಸುಪ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನಿಗೂ ಸಹ ಗಾಯವಾಗಿದ್ದು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಗೊಂಡ 29 ಪ್ರಯಾಣಿಕರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.