ಬೆಂಗಳೂರು, ಮೇ.8, (www.bengaluruwire.com) : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕಗಳ (Transformers) ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇವುಗಳ ನಿರ್ವಹಣೆ ಮತ್ತು ಹಾಳಾದ ಟಿಸಿಗಳನ್ನು ದುರಸ್ತಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಕೇವಲ ಎರಡು ದಿನಗಳಲ್ಲಿ ಬೆಸ್ಕಾಂ ವ್ತಾಪ್ತಿಯಲ್ಲಿ 1146 ಟಿಸಿಗಳ ನಿರ್ವಹಣೆ ಆಗಿದೆ ಎಂದು ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಧನ ಇಲಾಖೆ ಕೈಗೆತ್ತಿಕೊಂಡಿರುವ ಟಿಸಿ ನಿರ್ವಹಣೆ ಅಭಿಯಾನಕ್ಕೆ ಮೇ 5 ರಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಚಾಲನೆ ನೀಡಿದ್ದು, ಟಿಸಿ ಗಳ ನಿರ್ವಹಣೆ ಕಾರ್ಯವನ್ನು ಬೆಸ್ಕಾಂ ಏಕಕಾಲದಲ್ಲಿ 8 ಜಿಲ್ಲೆಗಳಲ್ಲಿ ಆರಂಭಿಸಿದೆ. ಬೆಸ್ಕಾಂ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಕ್ವೀನ್ಸ್ ರಸ್ತೆಯ ಕೆ.ಪಿ.ಸಿ.ಸಿ. ಕಛೇರಿ ಸಮೀಪ ಪಾದಚಾರಿ ಮಾರ್ಗದಲ್ಲಿನ ಪರಿವರ್ತಕದ ನಿರ್ವಹಣೆಗೆ ಮೇ 5 ರಂದು ಚಾಲನೆ ನೀಡಿದ್ದರು.
ಎಲ್ಲಾ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ಆಯಾ ಶಾಖಾ ವ್ಯಾಪ್ತಿಯಲ್ಲಿನ ನಿರ್ವಹಣಾ ಸ್ಥಳಕ್ಕೆ ಭೇಟಿ ನೀಡಿ ಟಸಿ ನಿರ್ವಹಣೆ ಕಾರ್ಯದ ಮೇಲುಸ್ತುವಾರಿ ವಹಿಸಿದ್ದಾರೆ. ಬೆಸ್ಕಾಂ ನ ಎಲ್ಲ 8 ಜಿಲ್ಲೆಗಳಲ್ಲೂ ಈ ಅಭಿಯಾನಕ್ಕೆ ಅವಶ್ಯವಾಗಿರುವ ಮಾನವ ಸಂಪನ್ಮೂಲ, ಸಾಮಗ್ರಿಗಳು ಮತ್ತು ಸಲಕರಣೆಗಳನ್ನು ನೀಡಲಾಗಿದ್ದು, ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಕಾರ್ಯನಿರ್ವಹಣೆ ಮಾಡುವಂತೆ ಸೂಚನೆಗಳನ್ನು ನೀಡಲಾಗಿದೆ.
ಟಿಸಿ ನಿರ್ವಹಣೆ ಅಭಿಯಾನದಲ್ಲಿ ಎಲ್ಲಾ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಪವರ್ ಮ್ಯಾನ್ ಗಳು ಭಾಗವಹಿಸಿ ಪಾಲನಾ ಕಾರ್ಯವನ್ನು ಸಂಪೂರ್ಣವಾಗಿ ಹಾಗೂ ಸುಸೂತ್ರವಾಗಿ ನಿರ್ವಹಿಸುತ್ತಿದ್ದಾರೆ. ಬೆಸ್ಕಾಂನ 535 ಶಾಖೆಗಳಲ್ಲಿ 1146 ಪರಿವರ್ತಕಗಳ ನಿರ್ವಹಣೆಯನ್ನು ಮಾಡಿರುವ ಕುರಿತು ಬೆಸ್ಕಾಂ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಖಚಿತ ಪಡಿಸಕೊಂಡಿದ್ದಾರೆ.
ಇಂಧನ ಸಚಿವರು ಸೂಚಿಸಿರುವ ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣಾ ಅಭಿಯಾನದಿಂದ ಆಗಾಗಿ ಟಿಸಿ ಹಾಳಾಗುವ ಪ್ರಕರಣಗಳನ್ನು ಕಡಿಮೆ ಮಾಡುವುದಲ್ಲದೇ, ವಿದ್ಯುತ್ ಅವಘಡಗಳನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ ಬೆಸ್ಕಾಂಗೆ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಬಹುದಾಗಿರುತ್ತದೆ. ಇದರಿಂದಾಗಿ ಗ್ರಾಹಕರಿಗೆ ನಿರಂತರ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ನೀಡಲು ಅನುಕೂಲವಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಅಭಿಯಾನಕ್ಕೆ ಚಾಲನೆ ದೊರಕಿದ ದಿನದಂದು (ಮೇ.5) 542 ಟಿಸಿ ಗಳ ನಿರ್ವಹಣೆ ಆಗಿದ್ದರೆ, ಮೇ 6 ರಂದು 604 ಟಿಸಿಗಳ ನಿರ್ವಹಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಬೆಸ್ಕಾಂ ಟಿಸಿ ನಿರ್ವಹಣೆ ವಿವರ ಈ ರೀತಿಯಿದೆ :
ಬೆಂಗಳೂರು ಪಶ್ಚಿಮ ವೃತ್ತ- 105, ದಕ್ಷಿಣ ವೃತ್ತ- 94, ಪೂರ್ವ ವೃತ್ತ- 96, ಉತ್ತರ ವೃತ್ತ -135, ಬಿಆರ್ ಸಿ- 69, ರಾಮನಗರ- 122, ಕೋಲಾರ- 171, ತುಮಕೂರು- 154, ದಾವಣಗೆರೆ- 200 ಟಿಸಿಗಳ ನಿರ್ವಹಣೆ ಮಾಡಲಾಗಿದೆ.
ಈ ಅಭಿಯಾನ ಮೇ 15ಕ್ಕೆ ಪೂರ್ಣಗೊಳ್ಳಲಿದೆ. ಟಿಸಿ ನಿರ್ವಹಣೆ ಅಭಿಯಾನದಲ್ಲಿ ದುಸ್ಥಿತಿಯಲ್ಲಿರುವ ಟಿಸಿಗಳ ಸಮರ್ಪಕ ನಿರ್ವಹಣೆ, ಹೊಸ ಟಿಸಿಗಳ ಅಳವಡಿಕೆ, ಸುರಕ್ಷಿತ ಸ್ಥಳ ಗಳಿಗೆ ಟಿಸಿಗಳ ಸ್ಥಳಾಂತರ ಮಾಡಲಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಬೆವಿಕಂ ವ್ಯಾಪ್ತಿಗೆ ಒಳಪಡುವ ಒಟ್ಟು 535 ಶಾಖೆಗಳಲ್ಲಿ ಸಂಬಂಧಪಟ್ಟ ಶಾಖಾಧಿಕಾರಿಯು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಂಡುಬಂದಿರುವ ಅಪಾಯಕಾರಿ ಸ್ಥಿತಿಯಲ್ಲಿರುವ, ಶಿಥಿಲಾವಸ್ಥೆಯಲ್ಲಿರುವ ಅಥವಾ ಹಾನಿಯಾಗಿರುವ ಪರಿವರ್ತಕವನ್ನು ಶಾಖಾವಾರು ದಿನಕ್ಕೆ ಕನಿಷ್ಟ ಒಂದರಂತೆ ಗುರುತಿಸಿ ನಿರ್ವಹಣೆಯನ್ನು ಕೈಗೊಳ್ಳುವಂತೆ ಸೂಚಿಸಲಾಗಿರುತ್ತದೆ.
2021-22ನೇ ಸಾಲಿನಲ್ಲಿ 35,987 ಟಿಸಿ ವಿಫಲ :
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಪ್ರಸ್ತುತ ಒಟ್ಟು 4.55 ಲಕ್ಷ ಟ್ರಾನ್ಸ್ ಫಾರ್ಮರ್ ಗಳಿವೆ. ಅಲ್ಲದೆ ಪ್ರತಿವರ್ಷ ಸರಾಸರಿಯಾಗಿ 38,500 ಹೊಸದಾಗಿ ಸೇರ್ಪಡೆ ಮಾಡಲಾಗುತ್ತದೆ. 2021-22ನೇ ಸಾಲಿನಲ್ಲಿ ಮಾರ್ಚ್ ಅಂತ್ಯದವರೆಗೆ 35,987 ಟಿಸಿಗಳು ಹಾಳಾಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಅಂದರೆ ಶೇ.7.9ರಷ್ಟು ದೂರುಗಳು ದಾಖಲಾಗುತ್ತಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗಗಳಲ್ಲಿ ಶೇ.93ರಷ್ಟು ಟಿಸಿಗಳ ಹಾಳಾಗುತ್ತವೆ. ಬೆಸ್ಕಾಂ ವ್ಯಾಪ್ತಿಯಲ್ಲಿ ತಾಲೂಕು ಮಟ್ಟದಲ್ಲಿ ಟ್ರಾನ್ಸ್ ಫಾರ್ಮರ್ ಗಳ ದುರಸ್ತಿಗಾಗಿ 45 ಕೇಂದ್ರಗಳನ್ನು ಈ ಹಿಂದೆಯೇ ಪ್ರಾರಂಭಿಸಲಾಗಿದ್ದು, ಆ ಕೇಂದ್ರದ ಮೂಲಕ ದುರಸ್ತಿ ಮತ್ತು ನಿರ್ವಹಣೆ ಕಾರ್ಯವು ನಡೆಯುತ್ತಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಯಾವುದೇ ವಿದ್ಯುತ್ ಸಂಬಂಧಿ ದೂರುಗಳು, ಸಲಹೆಗಳಿದ್ದಲ್ಲಿ ಗ್ರಾಹಕರು 1912 ಸಂಖ್ಯೆಗೆ ಕರೆ ಮಾಡಬಹುದು. ಟ್ರಾನ್ಸ್ ಫಾರ್ಮರ್ ಕೈಕೊಟ್ಟಿದ್ದರೂ ಬೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ನಿಮ್ಮ ನೆರವಿಗೆ ಧಾವಿಸಲಿದ್ದಾರೆ.