ಬೆಂಗಳೂರು, ಮೇ.8, (www.bengaluruwire.com) : ನಗರದ ಅಭಿವೃದ್ಧಿಗಾಗಿ ಮುಂದಿನ ಒಂದು ವರ್ಷಗಳ ಕಾಲ ವೆಚ್ಚ ಮಾಡುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2022-23ನೇ ಸಾಲಿನ ಬಜೆಟ್ ಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದ್ದು, ಪಾಲಿಕೆ ಈ ಹಿಂದೆ ಮಂಡಿಸಿದ ಬಜೆಟ್ ಗಿಂತ 377.5 ಕೋಟಿ ರೂ. ಸೇರಿಸಿ 10,861.78 ಗಾತ್ರದ ಬಜೆಟ್ ಗೆ ಒಪ್ಪಿಗೆ ನೀಡಿದೆ.
ಮಾ.31ರಂದು ರಾತ್ರಿ ಬಿಬಿಎಂಪಿಯು 2022-23ನೇ ಸಾಲಿನ ಬಜೆಟ್ ಅನ್ನು ತನ್ನ ವೆಬ್ ಸೈಟ್ ನಲ್ಲಿ 10,484.28 ಕೋಟಿ ರೂ. ಆದಾಯ ನಿರೀಕ್ಷಿಸಿ ಹಾಗೂ 10,480.93 ಕೋಟಿ ರೂ. ವೆಚ್ಚ ಮಾಡುವ ಉದ್ದೇಶಿತ ಬಜೆಟ್ ಅನ್ನು ಅಧಿಕೃತವಾಗಿ ಪ್ರಕಟಿಸಿತ್ತು. ಆನಂತರ ಬಿಬಿಎಂಪಿಯು ಬಜೆಟ್ ಗೆ ಅನುಮೋದನೆ ನೀಡುವಂತೆ ಕೋರಿ ಏ.8ರಂದು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿತ್ತು. ಆರ್ಥಿಕ ವರ್ಷ ಪ್ರಾರಂಭವಾಗಿ ಒಂದು ತಿಂಗಳಿಗೂ ಹೆಚ್ಚು ಕಾಲವಾದರೂ ಪಾಲಿಕೆ ಬಜೆಟ್ ಗೆ ಒಪ್ಪಿಗೆ ಸಿಕ್ಕಿರದ ಬಗ್ಗೆ ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ಎಚ್ಚೆತ್ತುಕೊಂಡು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ 202-23ನೇ ಸಾಲಿನ ಬಜೆಟ್ ಗೆ ಮೇ.7ರಂದು ಒಪ್ಪಿಗೆ ನೀಡಿ ಆದೇಶಿಸಿದೆ.
ನಗರಾಭಿವೃದ್ಧಿಗೆ ಇಲಾಖೆಯು ಬಿಬಿಎಂಪಿಯ ಈ ಬಾರಿಯ ಬಜೆಟ್‌ಗೆ ಅನುಮೋದನೆ ನೀಡುವಾಗ ಕೆಲವೊಂದು ಕಾಮಗಾರಿಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಅನುದಾನವನ್ನು ಹೆಚ್ಚಳ ಮಾಡಿದೆ. ಹೆಚ್ಚುವರಿಯಾಗಿ ಸಂಗ್ರಹಿಸಬಹುದಾದ ಆದಾಯವನ್ನು ಖಾತರಿಪಡಿಸಿಕೊಂಡ ನಂತರವೇ ಈ ಹೆಚ್ಚುವರಿ ಅನುದಾನದಡಿ ಜಾರಿಗೊಳಿಸಲು ಉದ್ದೇಶಿಸಿರುವ ಕಾರ್ಯಕ್ರಮಗಳನ್ನು ಅಥವಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.
ಹೈಕೋರ್ಟ್ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಸ ವಿಲೇವಾರಿ ಮಾಡುವ ಭೂಭರ್ತಿ ಘಟಕಗಳು, ಕಸ ವಿಲೇವಾರಿ ಘಟಕಗಳು ಮತ್ತು ಕ್ವಾರಿಗಳ ನಿರ್ವಹಣೆಗೆ ನಿಗದಿಪಡಿಸಿದ್ದ 20 ಕೋಟಿ ರೂ. ಅನುದಾನವನ್ನು 95 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಕಸ ನಿರ್ವಹಣೆ ಘಟಕಗಳ ಮತ್ತು ಯಂತ್ರೋಪಕರಣಗಳ ದುರಸ್ತಿ ಮತ್ತು ನಿರ್ವಹಣೆ ಸಲುವಾಗಿ ಬಜೆಟ್‌ನಲ್ಲಿ ₹ 15 ಕೋಟಿ ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು 90 ಕೋಟಿ ರೂ. ಗೆ ಏರಿಕೆ ಮಾಡಲಾಗಿದೆ. ನಗರದಲ್ಲಿ ಕುಡಿಯುವ ನೀರು ಪೂರೈಕೆಗಾಗಿ 40 ಕೋಟಿ ರೂ. ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು 65 ಕೋಟಿ ರೂ. ಗೆ ಹೆಚ್ಚಿಸಲಾಗಿದೆ. ಇದಕ್ಕೆ ಬಳಸಬೇಕಾಗುವ ಹೆಚ್ಚುವರಿ ₹ 25 ಕೋಟಿಯನ್ನು ಕೊಳವೆಬಾವಿಗಳ ನಿರ್ವಹಣೆಗೆ ವಿನಿಯೋಗಿಸಬೇಕು. ಈ ಕಾರ್ಯವನ್ನು ಬೆಂಗಳೂರು ಜಲಮಂಡಳಿ ಮೂಲಕ ನಿರ್ವಹಿಸಿದರೆ, ಅನುದಾನವನ್ನೂ ಅವರಿಗೇ ವರ್ಗಾಯಿಸಬೇಕು ಎಂದು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಸರ್ಕಾರದ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳಿಗೆ ಬಿಬಿಎಂಪಿ ವತಿಯಿಂದ ನೀಡಲಾಗುವ ಹೊಂದಾಣಿಕೆ ವಂತಿಗೆ ಮೊತ್ತಕ್ಕಾಗಿ 200 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಮಹಾಪೌರರ ವಿವೇಚನೆ ಕೋಟಾದಡಿ ಪತ್ರಕರ್ತರಿಗೆ ನೀಡುವ ವೈದ್ಯಕೀಯ ವೆಚ್ಚದ ಪರಿಹಾರದ ಅನುದಾನವನ್ನು ಈ ಹಿಂದೆ ನಿಗಧಿಪಡಿಸಲಾಗಿದ್ದ 50 ಲಕ್ಷ ರೂ. ನಿಂದ 2 ಕೋಟಿ ರೂ. ಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ ಐಪಿಡಿ ಸಾಲಪ್ಪನವರ ಸ್ಮರಣಾರ್ಥ ಕೈಗೊಳ್ಳುವ ಕಲ್ಯಾಣ ಕಾರ್ಯಕ್ರಮಗಳಿಗೆ 1 ಕೋಟಿ ರೂ. ಅನುದಾನ ಒದಗಿಸಲಾಗಿದೆ.