ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಹಿಂದಿನ ಮುಖ್ಯ ಅಯುಕ್ತರಾಗಿದ್ದ ಗೌರವ್ ಗುಪ್ತ ರವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ತುಷಾರ್ ಗಿರಿನಾಥ್ ಅವರಿಗೆ ಸಾಂಕೇತಿಕವಾಗಿ ಬೆಳ್ಳಿಯ ಬ್ಯಾಟನ್ (ಅಧಿಕಾರ ದಂಡ) ನೀಡಿ ಅಧಿಕಾರ ಹಸ್ತಾಂತರಿಸಿದರು.
ಇದೇ ವೇಳೆ ಮಾತನಾಡಿದ ನೂತನ ಮುಖ್ಯ ಆಯುಕ್ತರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿವೆ. ಆ ಸವಾಲನ್ನು ಎದುರಿಸಿ ಸಮಸ್ಯೆ ಬಗೆಹರಿಸುತ್ತೇನೆ. ಒಂದೇ ದಿನದಲ್ಲಿ ಆ ಸಮಸ್ಯೆಗಳೆಲ್ಲ ಬಗೆಹರಿಯೋದಿಲ್ಲ. ಇದಕ್ಕೆ ಜನರ ಸಹಕಾರ ಕೂಡ ಮುಖ್ಯವಾಗಿದೆ. ಮಳೆಗಾಲದಲ್ಲಿ ಆಗುವ ಸಮಸ್ಯೆ, ಕೋವಿಡ್, ರಸ್ತೆ ಗುಂಡಿ, ಕಸ ಸೇರಿದಂತೆ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಪ್ರತಿಯೊಂದು ಹುದ್ದೆಗೂ ತಮ್ಮದೇ ಆದ ಸವಾಲಿರುತ್ತದೆ. ನಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ದೊಡ್ಡ ಹುದ್ದೆ ಸಿಕ್ಕಿದೆ ಅಂತಾ ತಾವು ಇಲ್ಲಿಗೆ ಬಂದಿಲ್ಲ. ಸರ್ಕಾರದ ಕೆಲಸ ಮಾಡಲು, ಜನರ ಸೇವೆ ಮಾಡಲು ಬಂದಿದ್ದೇವೆ. ರಸ್ತೆ ಗುಂಡಿ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ಸಿಗುತ್ತಿದೆ. ಜನರಿಗೆ ಗುಂಡಿ ಮುಕ್ತ ರಸ್ತೆ ನೀಡಲು ಶೇಕಡಾ ನೂರರಷ್ಟು ಶ್ರಮ ವಹಿಸುತ್ತೇನೆ.
ಜಲಮಂಡಳಿ, ಬೆಸ್ಕಾಂ ಸೇರಿದಂತೆ ಹಲವು ಇಲಾಖೆಯ ಜೊತೆ ಒಂದು ಸಮನ್ವಯ ಸಾಧಿಸಲಾಗುತ್ತದೆ. ಈ ಮೊದಲು ತಾವು ಕೂಡ ಜಲಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಎಲ್ಲಾವನ್ನೂ ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದರು.
ನಿರ್ಗಮಿತ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದೇನು?
ಜನರ ಸಮಸ್ಯೆಗಳನ್ನು ಮಾಧ್ಯಮಗಳು ತಮ್ಮ ಗಮನಕ್ಕೆ ಮುಂದೆ ತಂದಿದ್ದಕ್ಕೆ ಧನ್ಯವಾದಗಳು. ತಾವು ಅದನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ನೂತನ ಆಯುಕ್ತರು ಜನರ ಸಮಸ್ಯೆ ಮೇಲೆ ಗಮನ ಹರಿಸುತ್ತಾರೆ ಎಂದು ನಿರ್ಗಮಿತ ಆಯುಕ್ತ ಗೌರವ್ ಗುಪ್ತ ಹೇಳಿದರು.
ರಸ್ತೆಗಳ ಸುಧಾರಣಾ ಕೆಲಸ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೊಸ ಮುಖ್ಯ ಆಯುಕ್ತರಿಗೆ ಅನುಭವಯಿದೆ ಎಲ್ಲಾ ಸಮಸ್ಯೆ ದೂರ ಮಾಡುವ ನಿಟ್ಟಿನಲ್ಲಿ ಕಾರ್ಯ ಮುಂದುವರೆಸಲಿ ಎಂದು ಹಾರೈಸಿದರು.
ಈ ವೇಳೆ ವಿಶೇಷ ಆಯುಕ್ತರುಗಳಾದ ತುಳಸಿ ಮದ್ದಿನೇನಿ, ರವೀಂದ್ರ, ದೀಪಕ್, ರಂಗಪ್ಪ, ಡಾ.ಹರೀಶ್ ಕುಮಾರ್, ರೆಡ್ಡಿ ಶಂಕರಬಾಬು, ಡಾ.ತ್ರಿಲೋಕ್ ಚಂದ್ರ, ಶರತ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.