ಬೆಂಗಳೂರು, (www.bengaluruwire.com) : ನಿನ್ನೆ ಬೆಂಗಳೂರು ನಗರ ಹಾಗು ಗ್ರಾಮಾಂತರ ಪ್ರದೇಶದಲ್ಲಿ ಸುರಿದ ಧಾರಾಕಾರ ಗಾಳಿ-ಮಳೆಯಿಂದಾಗಿ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಪುನರ್ ಸ್ಥಾಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಭಾರೀ ಗಾಳಿ ಮಳೆಗೆ ಭಾನುವಾರ ರಾತ್ರಿ ಸುಮಾರು 238 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಸುಮಾರು 300 ಮರಗಳು ಹಾಗು ಅದರ ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದವು. ಇದರಿಂದಾಗಿ ಬೆಸ್ಕಾಂ ವ್ಯಾಪ್ತಿಯ ಹೆಚ್ಚಿನ ವಿಭಾಗ ಗಳಲ್ಲಿ ಹಲವು ತಾಸು ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮುರಿದ ಕಂಬಗಳ ದುರಸ್ಥಿ ಕಾರ್ಯ ಮುಗಿದಿದ್ದು, ಹಲವೆಡೆ ವಿದ್ಯುತ್ ಪೂರೈಕೆ ಕೆಲಸ ಪೂರ್ಣಗೊಳಿಸಿ ವಿದ್ಯುತ್ ಪೂರೈಕೆ ಮಾಡಲಾಗಿದೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಮರು ಜೋಡಣೆ ಕಾರ್ಯದಲ್ಲಿ ಬೆಸ್ಕಾಂನ ಒಟ್ಟು 855 ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು. ಭಾನುವಾರ ರಾತ್ರಿ 228 ಸಿಬ್ಬಂದಿ ಮತ್ತು ಸೋಮವಾರ 627 ಸಿಬ್ಬಂದಿ ವಿದ್ಯುತ್ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದರು ಎಂದು ಬೆಸ್ಕಾಂ ತಿಳಿಸಿದೆ.
ರಾಮನಗರ, ಚಂದಾಪುರ, ಕನಕಪುರ ಹಾಗು ಮಾಗಡಿ ವಿಭಾಗ ಗಳಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು ಮುರಿದ ಕಂಬಗಳ ತೆರವು ಕಾರ್ಯ ಭರದಿಂದ ಸಾಗಿದೆ. ಬೆಂಗಳೂರು ನಗರದ ಕೆಲವು ಬಡಾವಣೆಗಳಲ್ಲಿ ನಿನ್ನೆ ರಾತ್ರಿಯೇ ತಾಂತ್ರಿಕ ಸಮಸ್ಯೆ ನಿವಾರಿಸಿ ವಿದ್ಯುತ್ ಪೂರೈಕೆ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ವಿದ್ಯುತ್ ಮರುಸ್ಥಾಪಿಸುವ ಕಾರ್ಯ ಮುಗಿದಿದ್ದು, ಉಳಿದ ಪ್ರದೇಶಗಳಲ್ಲಿ ಸೋಮವಾರ ಸಂಜೆಯೊಳಗೆ ಮುರಿದಿರುವ ಎಲ್ಲ ವಿದ್ಯುತ್ ಕಂಬಗಳನ್ನು ಬದಲಿಸಲು ಬೆಸ್ಕಾಂ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗ ದಲ್ಲಿ 21 ವಿದ್ಯುತ್ ಕಂಬಗಳು ಮುರಿದಿದ್ದರೆ, ಪೂರ್ವ ವಿಭಾಗದಲ್ಲಿ ಹಾನಿಗೊಳಗಾದ ಎಲ್ಲ 13 ಕಂಬಗಳ ಮರು ಸ್ಥಾಪನೆ ಮಾಡಿ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಅದೇ ರೀತಿ ಪಶ್ಚಿಮ ವಿಭಾಗದಲ್ಲಿ 7 ಕಂಬಗಳು ರಾಮನಗರದ ವಿಭಾಗದಲ್ಲಿ 100 ಹಾಗೂ ಕೋಲಾರ ವಿಭಾಗದಲ್ಲಿ 70 ಕಂಬಗಳು ಹಾನಿಗೊಳಗಾಗಿದ್ದು, ಪುನರ್ ಸ್ಥಾಪನೆ ಕಾರ್ಯ ಭರದಿಂದ ಸಾಗಿತ್ತು. ಸಂಜೆ ಒಳಗೆ ಎಲ್ಲ ಕಂಬಗಳ ದುರಸ್ಥಿ ಕಾರ್ಯ ಮುಗಿಯಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಜೈನ್ ಸ್ವಾಯತ್ತ ವಿಶ್ವವಿದ್ಯಾಲಯ ರಾಜಧಾನಿಯಲ್ಲಿ ಆಯೋಜಿಸಿರುವ ಖೇಲೋ ಇಂಡಿಯಾ ಕ್ರೀಡಾ ಕಾರ್ಯಕ್ರಮದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಾಕಷ್ಟು ತೊಂದರೆಯಾಯಿತು. ಬೆಸ್ಕಾಂ ಸಿಬ್ಬಂದಿ ಸೂಕ್ತ ಕಾಲಾವಧಿಯಲ್ಲಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡ ಬಳಿಕ ವಿದ್ಯುತ್ ಪೂರೈಕೆ ಯಥಾಸ್ಥಿತಿಗೆ ಮರಳಿತು.