ಬೆಂಗಳೂರು, (www.bengaluruwire.com) : ಬಿರು ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಸಂಜೆ ಆಲೀಕಲ್ಲು ಸಹಿತ ಭಾರೀ ಮಳೆಯಾಯಿತು. ಇದರಿಂದ ನಗರದ ಹಲವು ಭಾಗಗಳಲ್ಲಿ ರಸ್ತೆ, ತಗ್ಗು ಪ್ರದೇಶಗಳಲ್ಲಿ ರಸ್ತೆಯಲ್ಲಿ ಮಳೆನೀರು ನಿಂತು ವಾಹನ ಸವಾರರು ಪರದಾಡಿದರು.
ನಗರದಾದ್ಯಂತ ಬೆಳಗ್ಗೆಯಿಂದ 33.9 ಡಿಗ್ರಿ ಸೆಲ್ಸಿಯಷ್ಟು ಉಷ್ಣಾಂಶದ ತಾಪಮಾನ ದಾಖಲಾಗಿತ್ತು. ನಾಳೆಯೂ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವು ಭಾಗಗಳಲ್ಲಿ ರಾಜಕಾಲುವೆ ಉಕ್ಕಿಹರಿದು ನಿವಾಸಿಗಳು ಪರದಾಡಿದರು. ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಕೋರಮಂಗಲ, ಬಿಟಿಎಂ ಲೇಔಟ್, ಬೇಗೂರು ಹೊಸೂರು ರಸ್ತೆ, ಮಡಿವಾಳ, ಎಚ್.ಎಸ್.ಆರ್ ಲೇಔಟ್, ಬಿಳೇಕಳ್ಳಿ ಸೇರಿ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಒಟ್ಟಾರೆ ಮೂರುವರೆ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.
ಧಾರಾಕಾರ ಮಳೆಯಿಂದಾಗಿ ಬಿಟಿಎಂ ಲೇಔಟ್ನಲ್ಲಿ 3 ಕಡೆ ಮರಗಳು ಧರೆಗೆ ಉರುಳಿದವು. ಕೋರಮಂಗಲ, ವೈಟ್ಫೀಲ್ಡ್ನಲ್ಲೂ ಮರ ಬಿದ್ದವು ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿಯಿಂದ ಮಾಹಿತಿ ಲಭ್ಯವಾಗಿದೆ.
ಸಂಜೆ ಹೊತ್ತಿಗೆ ಆರಂಭವಾದ ಮಳೆ ಬಹಳ ಹೊತ್ತಿನ ತನಕ ಧಾರಾಕಾರವಾಗಿ ಸುರಿಯಿತು. ಚಿಕ್ಕಪೇಟೆ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್, ಮೆಜೆಸ್ಟಿಕ್, ಗಾಂಧೀನಗರ, ವಿಧಾನಸೌಧ, ಮಾರ್ಕೆಟ್, ಚಾಮರಾಜಪೇಟೆ, ಚಾಲುಕ್ಯ ವೃತ್ತ, ವಸಂತನಗರ, ಕೆ.ಆರ್.ಸರ್ಕಲ್, ಕೆಂಗೇರಿ , ರಾಜರಾಜೇಶ್ವರಿ, ಕುಂಬಳಗೋಡು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ
ಗುಡುಗು, ಗಾಳಿ ಸಮೇತವಾಗಿ ಮಳೆಯಾಯಿತು.
ಲಕ್ಷಯ್ಯ ಲೇಔಟ್ ನಲ್ಲಿ ದ್ವೀಪದಂತಾದ ಹಲವು ಮನೆಗಳು :
ಉತ್ತರಹಳ್ಳಿಯ ಲಕ್ಷ್ಮಯ್ಯ ಲೇಔಟ್ ನಲ್ಲಿ 100 ಕ್ಕೂ ಹೆಚ್ಚು ಮನೆ ಅಂಗಡಿಗಳಿಗೆ ನೀರು ನುಗ್ಗಿ ಇಡೀ ಪ್ರದೇಶವೇ ಜಲಾವೃತವಾಗಿದೆ. ಕಳೆದ 20 ದಿನ ಹಿಂದೆಯೂ ಇದೇ ಸ್ಥಳವು ಮಳೆ ಬಂದಾಗ ರಾಜಕಾಲುವೆ ತುಂಬಿ ರಸ್ತೆ, ಮನೆಗಳಿಗೆ ನೀರು ತುಂಬಿ ಹರಿದು ಸ್ಥಳೀಯರೆಲ್ಲರು ತೊಂದರೆಗೆ ಸಿಲುಕಿದ್ದರು. ಇಂದು ಅದೇ ಪರಿಸ್ಥಿತಿ ಎದುರಾದ ಕಾರಣ ಸೂಕ್ತ ರೀತಿ ರಾಜಕಾಲುವೆ ನೀರು ಉಕ್ಕಿ ಹರಿಯುವ ಸಮಸ್ಯೆ ಬಗೆಹರಿಸದಿರುವುದಕ್ಕೆ ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಡಬಲ್ ರೋಡ್ ನಲ್ಲಿ ಕೆಟ್ಟುನಿಂತ ಹಲವು ವಾಹನಗಳು :
ವಿಪರೀತ ಮಳೆಯಿಂದಾಗಿ ಶಾಂತಿ ನಗರ ಮುಖ್ಯರಸ್ತೆಯಲ್ಲಿ 5 ಕ್ಕೂ ಹೆಚ್ಚು ಕಾರು, 15 ಹೆಚ್ಚು ದ್ವಿಚಕ್ರ ಹಾಗೂ ಆಟೋಗಳು ವಾಹನಗಳು ಕೆಟ್ಟು ನಿಂತವು. ರಸ್ತೆಯಲ್ಲಿ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ರಸ್ತೆ ಮಧ್ಯದಲ್ಲೇ ವಾಹನ ಸವಾರರು ಸಿಲುಕಿದರು. ನೀರಿನಿಂದ ವಾಹನಗಳನ್ನ ಆಚೆ ತರಲು ವಾಹನ ಸವಾರರು ಪರದಾಡಿದರು.
ಕಾವಲ್ ಬೈರಸಂದ್ರದ ಕಾವೇರಿ ನಗರದಲ್ಲಿ ಮಳೆ ಆರ್ಭಟದಿಂದಾಗಿ ಒಳಚರಂಡಿ ನೀರು ಉಕ್ಕಿ ಹಲವು ಮನೆಗಳಿಗೆ ನೀರು ನುಗ್ಗಿದವು.