ಬೆಂಗಳೂರು, (www.bengaluruwire.com) : ನಗರದಲ್ಲಿ ಆಸ್ತಿ ತೆರಿಗೆ ಕಟ್ಟುವ ಮಾಲೀಕರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದಾರೆ. ಏಪ್ರಿಲ್ 30ರ ಒಳಗಾಗಿ 2022-23ನೇ ಸಾಲಿನ ಆಸ್ತಿ ತೆರಿಗೆ ಕಟ್ಟುವ ಮಾಲೀಕರಿಗೆ ನೀಡುತ್ತಿದ್ದ ಶೇ.5 ರಿಯಾಯ್ತಿಯನ್ನು ಮೇ ತಿಂಗಳ 31ರ ತನಕಕ್ಕೆ ಮುಂದುವರೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಾರಿ ಏಪ್ರಿಲ್ ತಿಂಗಳಿನಲ್ಲಿ ಶೇ.5ರ ರಿಯಾಯ್ತಿ ಪಡೆದು ನಗರದ ಆಸ್ತಿ ತೆರಿಗೆ ಮಾಲೀಕರು 30 ದಿನದಲ್ಲಿ ಬರೋಬ್ಬರಿ 1 ಸಾವಿರ ಕೋಟಿ ರೂ. ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಿದ್ದಾರೆ. ಇದರಿಂದ ಪ್ರೇರಿತರಾದ ಮುಖ್ಯಮಂತ್ರಿಗಳು ನಗರದ ಸ್ವತ್ತಿನ ಮಾಲೀಕರಿಗೆ ಹೊಸ ಕೊಡುಗೆ ನೀಡಿದ್ದಾರೆ.
ಬಿಬಿಎಂಪಿಯಿಂದ ಆಸ್ತಿ ತೆರಿಗೆ ರಿಯಾಯ್ತಿಯನ್ನು ಮೇ ತಿಂಗಳಿಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ತಮ್ಮ ಸಮ್ಮತಿ ಸೂಚಿಸಿದ್ದಾರೆ.