ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ 545 PSI ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ನಡೆಸಲಾಗಿದ್ದ ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲಾಗುವುದು.
ಶುಕ್ರವಾರ ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಈ ವಿಷಯ ತಿಳಿಸಿ, ಈ ಹಿಂದೆ ಪರೀಕ್ಷೆ ಬರೆದಿದ್ದ ಎಲ್ಲಾ 54,289 ಪರೀಕ್ಷಾರ್ಥಿ ಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಪಡೆಯಲಿದ್ದಾರೆ.
ಆದರೆ ಸಿಐಡಿ ಯಿಂದ ಬಂಧಿತರಾದ ಅಭ್ಯರ್ಥಿಗಳಿಗೆ ಮರು ಪರೀಕ್ಷೆಯಿಂದ ಹೊರಗಿಡಲಾಗುವುದು. ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ನಿಗದಿಗೊಳಿಸಲಾಗುವುದು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಮರು ಪರೀಕ್ಷೆ ನಿರ್ಧಾರದಿಂದ, ಅಕ್ರಮವಾಗಿ ನೇಮಕಾತಿ ಪಡೆದವರ ಜಾಗಕ್ಕೆ, ಪ್ರತಿಭಾವಂತ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವಕಾಶ ದೊರಕಲಿದೆ ಎಂದು ಉತ್ತರಿಸಿದರು.
ಪರೀಕ್ಷಾ ಅಕ್ರಮಗಳು ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ನಡೆದಿದೆ ಎಂಬ ಬಗ್ಗೆಯೂ ಅನುಮಾನಗಳಿದ್ದು , ಮರು ಪರೀಕ್ಷೆ ನಡೆಸುವ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ ಎಂದು ಮುಂದಿನ ದಿನಗಳಲ್ಲಿ ಇಂಥಹ ಅಕ್ರಮಗಳು ನಡೆಯದಂತೆ ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಬಗ್ಗೆಯೂ ಅಲೋಚಿಸಲಾಗುವುದು ಎಂದು ಸಚಿವರು ನುಡಿದರು.
ದಿವ್ಯಾ ಹಾಗರಗಿ ಪುಣೆಯಲ್ಲಿ ವಶ :
ಪಿಎಸ್ ಐ ನೇಮಕಾತಿ ಅಕ್ರಮ ದಲ್ಲಿ ದಿವ್ಯಾ ಹಾಗರಗಿ, ಅರ್ಚನಾ, ಡ್ರೈವರ್ ಸದ್ದಾಂ, ಸುರೇಶ್, ಕಾಳಿದಾಸ್ ಸಹಾಯಕರು, ಕೆಲಸದವಳು ಸುನಂದಾ ಅವರನ್ನು ಪೊಲೀಸರು ಪುಣೆಯಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಡಿಜಿಪಿ ಪ್ರವೀಣ್ ಸೂದ್ ಉಪಸ್ಥಿತರಿದ್ದರು.
ದಿವ್ಯಾ ಹಾಗರಗಿ ಬಂಧನದ ಕಾರ್ಯಾಚರಣೆ ಹೇಗೆ ನಡೆದಿತ್ತು?
ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪುಣೆಯಿಂದ ನೆನ್ನೆ ಸಂಜೆ ದಿವ್ಯಾಹಾಗರಗಿ ಸ್ನೇಹಿತೆಯರಿಗೆ ಕರೆ ಮಾಡಿದಾಗ ಅವರ ಬಂಧನಕ್ಕೆ ಅಗತ್ಯವಾದ ಮೊದಲ ಸುಳಿವು ಪೊಲೀಸರ ತಾಂತ್ರಿಕ ತಂಡಕ್ಕೆ ಸಿಕ್ಕಿತ್ತು.
ಈ ಒಂದು ಕರೆಯ ಜಾಡು ಹಿಡಿದು ಪುಣೆಯಲ್ಲಿ ಬೀಡುಬಿಟ್ಟಿದ್ದ ಸಿಐಡಿ ಡಿವೈಎಸ್ ಪಿ ಪ್ರಕಾಶ್ ರಾಥೋಡ್ ಟೀಂ, ದಿವ್ಯಾ ಹಾಗರಗಿ ಉಳಿದುಕೊಂಡಿದ್ದ ಮನೆ ಲೊಕೇಷನ್ ಸ್ಥಳಕ್ಕೆ ಬಂದಿದ್ದರು. ಅದೇ ಲೋಕೇಷನ್ ನಿಂದ ಬೇರೊಂದು ನಂಬರ್ ನಿಂದ ದಿವ್ಯಾ ಸ್ನೇಹಿತರಿಗೆ ಪೋನ್ ಹೋಗಿದ್ದು ಖಚಿತವಾಗುತ್ತಿದ್ದಂತೆ ಗುರುವಾರ ರಾತ್ರಿ 11.30 ಕ್ಕೆ ಮನೆಯೊಳಗೆ ಪೊಲೀಸರು ಪ್ರವೇಶಿಸಿದರು.
ಆ ಸಂದರ್ಭದಲ್ಲಿ ದಿವ್ಯಾ ಹಾಗರಗಿ ಮತ್ತು ಅರ್ಚನ ಇಬ್ಬರೂ ಜೊತೆಯಲ್ಲಿ ಮನೆಯ ಹಾಲ್ ನಲ್ಲಿ ಕುಳಿತುಕೊಂಡಿದ್ದರು. ಪೊಲೀಸರು ಮನೆಯೊಳಗೆ ಬರುತ್ತಿದ್ದಂತೆ ಒಂದು ಕ್ಷಣ ಶಾಕ್ ಒಳಗಾಗಿದ್ದರು ದಿವ್ಯಾ. 11.45 ಕ್ಕೆ ದಿವ್ಯಾ ಹಾಗರಗಿಯನ್ನು ಪೊಲೀಸರು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡರು.
ಮತ್ತೊಂದು ಟೀಂ ದಿವ್ಯಾ ಜೊತೆಯಲ್ಲಿದ್ದ ಅರ್ಚನ ಮತ್ತಿಬ್ಬರನ್ನ ಬಂಧಿಸಿ ಕರೆತಂದಿತ್ತು. ಗುರುವಾರ ಮಧ್ಯರಾತ್ರಿಯೇ ಪುಣೆಯನ್ನು ಬಿಟ್ಟ ಪೊಲೀಸರು ನೇರವಾಗಿ ಆರೋಪಿಗಳೊಂದಿಗೆ ಕಲ್ಬುರ್ಗಿಗೆ ಬಂದಿದ್ದರು.