ಲಕ್ಷಾಂತರ ಹೂಡಿಕೆದಾರರು ಕಾತುರದಿಂದ ಕಾಯುತ್ತಿದ್ದ ಹಾಗೂ ಬಹಳ ಸಮಯದಿಂದ ಸುದ್ದಿಯಲ್ಲಿರುವ ಭಾರತೀಯ ಜೀವ ವಿಮಾನಿಗಮ (LIC) ಪಾಲು ಬಂಡವಾಳದ ಆರಂಭಿಕ ಸಾರ್ವಜನಿಕ ಕೊಡುಗೆಯು (IPO) ಅಂತೂ ಘೋಷಣೆಯಾಗಿದೆ. ಮುಂದಿನ ತಿಂಗಳು ಮೇ 3ರಿಂದ 9ರ ತನಕ ಹೂಡಿಕೆದಾರರು ಐಪಿಒ ಗಾಗಿ ಅರ್ಜಿ ಸಲ್ಲಿಸಬಹುದು. ಭಾರತೀಯ ಷೇರು ಮಾರುಕಟ್ಟೆಯ ಅತಿದೊಡ್ಡ ನೀಡಿಕೆಯಾಗಿ ಹೊರಹೊಮ್ಮಲಿದೆ ಎಂದೇ ಷೇರು ಮಾರುಕಟ್ಟೆಯಲ್ಲಿ ಬಣ್ಣಿಸಲಾಗಿದೆ.
ಐಪಿಒ ಮೂಲಕ ಎಲ್ ಐಸಿಯ ಪಾಲು ಬಂಡವಾಳದ ಶೇ.3.5ರಷ್ಟು ಅಂದರೆ ಸರಿಸುಮಾರು 22.14 ಕೋಟಿ ಷೇರುಗಳನ್ನು ಕೇಂದ್ರ ಸರ್ಕಾರವು ಮಾರಾಟ ಮಾಡಿ ಆ ಮೂಲಕ 21 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಈ ಪೈಕಿ 2.21 ಕೋಟಿ ಷೇರುಗಳನ್ನು ಎಲ್ ಐಸಿ ಪಾಲಿಸಿ ಹೊಂದಿದವರಿಗಾಗಿ ಮೀಸಲಿಟ್ಟಿದೆ. ಅಲ್ಲದೆ ತನ್ನ ಎಲ್ ಐಸಿ ನೌಕರರಿಗಾಗಿ 15 ಲಕ್ಷ ಷೇರುಗಳನ್ನು, ಇನ್ನುಳಿದ ಷೇರುಗಳ ಪೈಕಿ ಶೇ.50ರಷ್ಟನ್ನು ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ, ಶೇ.35ರಷ್ಟನ್ನು ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಿಟ್ಟಿದೆ ಎಂದು ತಿಳಿದು ಬಂದಿದೆ.
ಪ್ರತಿ ಷೇರಿನ ಮುಖಬೆಲೆಯು 10ರೂ. ಆಗಿದ್ದರೂ 902ರೂ.ನಿಂದ 949 ರೂ. ವರೆಗೆ ನಿಗದಿ ಮಾಡಲಾಗಿದೆ. ಈ ನೀಡಿಕೆಯಲ್ಲಿ ನಿರ್ಧರಿಸಲ್ಪಟ್ಟ ಷೇರು ದರದ ಆಧಾರದಲ್ಲಿ ಜೀವ ವಿಮಾ ನಿಗಮದ ಸಾಂಸ್ಥಿಕ ಮೌಲ್ಯಮಾಪನ ಸುಮಾರು 6 ಲಕ್ಷ ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.
ಎಲ್ ಐಸಿಗೆ ದೇಶದಲ್ಲಿ 65 ವರ್ಷಗಳ ಇತಿಹಾಸವಿದ್ದು, ಒಂದು ತಲೆಮಾರಿನ ಭಾರತೀಯರೊಂದಿಗೆ ಅವರ ಜೀವವಿಮೆಯ ಅವಶ್ಯಕತೆಯನ್ನು ಪೂರೈಸುವ ಮಿತ್ರನಾಗಿ, ಬಂಧುವಾಗಿ, ಒಂದು ನೆಲೆಯಲ್ಲಿ ಅವರೊಂದಿಗೆ ಚಾರಿತ್ರಿಕ ಪಯಣದಲ್ಲಿ ಸಾಗಿದೆ ಎಂದೇ ಹೇಳಬಹುದು. ಆಗಿನ ಕಾಲಘಟ್ಟದ ಆರ್ಥಿಕ ನೀತಿಗೆ ಅನುಗುಣವಾಗಿ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಜನ್ಮತಾಳಿ ಅಲ್ಲಿಂದ ಮುಂದಿನ ಆರು ದಶಕಗಳ ಕಾಲ ಜೀವ ವಿಮಾ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸುವ ದೊಡ್ಡ ಸಂಸ್ಥೆಯಾಗಿ ಬೆಳೆದು ಗಮನಾರ್ಹ ಸಾಧನೆಯನ್ನು ಮಾಡಿದೆ. ಎಲ್ ಐಸಿ ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ ಭಾಗವಹಿಸಿ ಅದರ ಷೇರು ಖರೀದಿಸುವುದು ಎಂದರೆ ಎಲ್ ಐಸಿಯ ಪಾಲು ಬಂಡವಾಳದಲ್ಲಿ ಹೂಡಿಕೆ ಮಾಡಿ ಆ ಸಂಸ್ಥೆಯ ಒಡೆತನ ಹೊಂದುವ ಅವಕಾಶವೆಂದೇ ಪರಿಗಣಿಸಲಾಗುತ್ತದೆ.
ಕೇಂದ್ರ ಸರ್ಕಾರ ಈ ಹಿಂದೆ ಶೇ.5ರಷ್ಟು ಷೇರು ವಿಕ್ರಯಕ್ಕೆ ನಿರ್ಧರಿಸಿತ್ತು :
ತೊಂಭತ್ತರ ದಶಕದಲ್ಲಿ ಆರಂಭವಾದ ಆರ್ಥಿಕ ಉದಾರೀಕರಣದ ಮುಂದುವರೆದ ಭಾಗವಾಗಿ ಎಲ್ ಐಸಿಯ ಪಾಲು ಬಂಡವಾಳದ ಷೇರು ಮಾರಾಟದ ಪ್ರಕ್ರಿಯೆ ಈಗ ನಡೆಯುತ್ತಿದೆ. ಈ ಹಿಂದೆ ಎಲ್ ಐಸಿಯ ಶೇ.100ರಷ್ಟು ಬಂಡವಾಳ ಕೇಂದ್ರ ಸರ್ಕಾರದ ಒಡೆತನದಲ್ಲಿತ್ತು. ಆದರೀಗ ಷೇರು ಮಾರುಕಟ್ಟೆಯ ಪ್ರವೇಶ ಮಾಡಿ ತನ್ನ ಶೇ.96.5ರಷ್ಟು ಬಂಡವಾಳವನ್ನು ಕೇಂದ್ರ ಸರ್ಕಾರ ತನ್ನ ಬಳಿಯೇ ಇಟ್ಟುಕೊಂಡು, ಉಳಿದ ಶೇ.3.5ರಷ್ಟು ಷೇರನ್ನು ಮಾರಾಟ ಮಾಡಲು ಹೊರಟಿದೆ. ದೇಶದ ಜೀವವಿಮಾ ಕ್ಷೇತ್ರದಲ್ಲಿ ಅತಿ ದೈತ್ಯ ಸಂಸ್ಥೆಯಾದ ಎಲ್ ಐಸಿಯಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಬಹಳ ಕಾಲದಿಂದ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಹಿಂದೆ ಫೆಬ್ರವರಿಯಲ್ಲಿ 31.6 ಕೋಟಿ ಶೇರುಗಳನ್ನು (ಶೇ. 5ರಷ್ಟು) ಮಾರಾಟ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿತ್ತು.
ಅಲ್ಲದೆ ಈ ಬಗ್ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (SEBI) ಐಪಿಒ ಷೇರು ವಿಕ್ರಯ ಕುರಿತಂತೆ ಕರಡು ದಾಖಲೆ ಸಲ್ಲಿಸಿತ್ತು. ಆದರೆ ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿ ಐಪಿಒ ಪ್ರಕ್ರಿಯೆಗೆ ಹಿನ್ನಡೆಯಾಯಿತು. ತದನಂತರ ಕೇಂದ್ರ ಸರ್ಕಾರ ಷೇರು ವಿಕ್ರಯದ ಪ್ರಮಾಣವನ್ನು ಶೇ.3.5ಕ್ಕೆ ಇಳಿಸುವ ತೀರ್ಮಾನವನ್ನು ಇತ್ತೀಚೆಗೆ ಕೈಗೊಂಡಿತ್ತು.
ಎಲ್ ಐಸಿ ಪಾಲಿಸಿದಾರರು ಮತ್ತು ಸಣ್ಣ ಹೂಡಿಕೆದಾರರಿಗೆ ರಿಯಾಯ್ತಿ :
ಎಲ್ ಐಸಿಯು ತನ್ನ ಪಾಲಿಸಿ ಹೊಂದಿರುವ ಹೂಡಿಕೆದಾರರಿಗೆ (ಯಾವ ಎಲ್ ಐಸಿ ಪಾಲಿಸಿದಾರನ ಪ್ಯಾನ್ ಕಾರ್ಡ್ 28 ಫೆಬ್ರವರಿ 2022ರ ಮುಂಚೆ ಸಂಸ್ಥೆಯ ದಾಖಲೆಗಳಲ್ಲಿ ಸೇರ್ಪಡೆಯಾಗಿದೆಯೋ ಅಂತಹ ಪಾಲಿಸಿದಾರರಿಗೆ) ಪ್ರತಿ ಷೇರಿಗೆ 60 ರೂ.ನಷ್ಟು ರಿಯಾಯಿತಿ ನೀಡಲಿದೆ. ಅಲ್ಲದೆ 2 ಲಕ್ಷ ರೂ.ಗಿಂತ ಕಡಿಮೆ ಹೂಡಿಕೆ ಮಾಡುವ ಸಣ್ಣ ಹೂಡಿಕೆದಾರರಿಗೆ ಹಾಗೂ ತನ್ನ ನೌಕರರಿಗೆ ಪ್ರತಿ ಷೇರಿಗೆ 40 ರೂ.ನಷ್ಟು ರಿಯಾಯಿತಿ ನೀಡಲಿದೆ.
ಎಲ್ ಐಸಿ ಈ ಐಪಿಒ ನಲ್ಲಿ ಭಾಗವಹಿಸಲು ಇಚ್ಛಿಸುವ ಹೂಡಿಕೆದಾರರು ಡಿಮ್ಯಾಟ್ ಅಕೌಂಟ್ ಹೊಂದಿರುವುದು ಅವಶ್ಯಕವಾಗಿದೆ. ಇಲ್ಲವಾದಲ್ಲಿ ಎಲ್ ಐಸಿಯ ಆರಂಭಿಕ ಕೊಡುಗೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದು. ಈಗಾಗಲೇ ಬ್ರೋಕರಿಂಗ್ ಸಂಸ್ಥೆಗಳ ಮೂಲಕ ಷೇರುಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಷೇರು ಖರೀದಿಯಲ್ಲಿ ತೊಡಗಿದ್ದರೆ, ತಮ್ಮ ಬ್ರೋಕರ್ ಅನ್ನು ಸಂಪರ್ಕಿಸಿ ಈ ವಿಕ್ರಯದಲ್ಲಿ ಭಾಗವಹಿಸುವಿಕೆ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಬಹುದಾಗಿದೆ.
ಐಪಿಒ ಗಾಗಿ ಡಿಮ್ಯಾಟ್ ಅಕೌಂಟ್ ಹೊಂದುವುದು ಅಗತ್ಯ :
ಯಾವ ಹೂಡಿಕೆದಾರರು ಪ್ರಸಕ್ತ ಷೇರು ಮಾರುಕಟ್ಟೆಯಲ್ಲಿ ಯಾವುದೇ ವ್ಯವಹಾರ ಮಾಡದಿದ್ದಲ್ಲಿ, ಅಂತಹ ಹೊಸ ಹೂಡಿಕೆದಾರರು ಷೇರು ಮಾರ್ಕೇಟ್ ಬ್ರೋಕರಿಂಗ್ ಸಂಸ್ಥೆಯಲ್ಲಿ ಡಿಮ್ಯಾಟ್ ಖಾತೆ ಪ್ರಾರಂಭಿಸಲು ನಿಗಧಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿದರೆ, ಬ್ರೋಕರಿಂಗ್ ಸಂಸ್ಥೆಯು ಅರ್ಜಿ ಪರಿಶೀಲಿಸಿ ಖಾತೆ ಪ್ರಾರಂಭಿಸಲಿದೆ. ಆನ್ ಲೈನ್ ಷೇರು ವಹಿವಾಟು ವೇದಿಕೆಗಳ (ಝೆರೋದಾ -ZERODA, ಐಸಿಐಸಿಐ ಡೈರೆಕ್ಟ್- ICICI DIRECT, ಎಚ್ ಡಿಎಫ್ ಸಿ ಡೈರೆಕ್ಟ್ – HDFC DIRECT ಸೇರಿದಂತೆ ನಾನಾ ಬ್ರೋಕರಿಂಗ್ ಸಂಸ್ಥೆ) ಮೂಲಕ ಈ ಷೇರು ವಿಕ್ರಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ದೇಶದ ಅತಿದೊಡ್ಡ ಜೀವ ವಿಮಾ ಸಂಸ್ಥೆಯಾಗಿರುವ ಎಲ್ ಐಸಿಯ ಬಹುನಿರೀಕ್ಷಿತ ಷೇರು ನೀಡಿಕೆಯಾಗಿರುವ ಹಿನ್ನಲೆಯಲ್ಲಿ ಮತ್ತು ಅದರಿಂದಾಗಿ ಷೇರು ಬೇಡಿಕೆ ಹೆಚ್ಚಳವಾಗುವ ಸನ್ನಿವೇಶದಲ್ಲಿ ಅರ್ಜಿದಾರರು ಸಲ್ಲಿಸಿದಷ್ಟು ಷೇರುಗಳು ಅವರಿಗೆ ಹಂಚಿಕೆಯಾಗುವುದಿಲ್ಲ. ಷೇರು ನೀಡಿಕೆಯ ಪೂರ್ಣ ಜವಾಬ್ದಾರಿ ಹೊತ್ತಿರುವ ಮರ್ಚೆಂಟ್ ಬ್ಯಾಂಕರ್ಸ್ ಮೊದಲೇ ಸಿದ್ದಪಡಿಸಿದ ಅನುಪಾತದಂತೆ ಷೇರುಗಳ ವಿತರಣೆ ಮಾಡಲಿವೆ. ಅಂತಹ ಪರಿಸ್ಥಿತಿಯಲ್ಲಿ ಷೇರು ಅಲಾಟ್ ಮೆಂಟ್ ಮಾಡಿ ಬಾಕಿ ಉಳಿದ ಹಣವನ್ನು ಮರ್ಚೆಂಟ್ ಬ್ಯಾಂಕರ್ಸ್ ಐಪಿಒ ಷೇರು ನೀಡಿಕೆ ಪ್ರಕ್ರಿಯೆ ಮುಗಿದ ಬಳಿಕ ಹೂಡಿಕೆದಾರರ ಬ್ಯಾಂಕ್ ಖಾತೆಗೆ ನೇರವಾಗಿ ವಾಪಸ್ ಜಮೆ ಮಾಡುತ್ತಾರೆ.
ಐಪಿಒ ಆರಂಭಿಕ ನೀಡಿಕೆಗೆ ಅರ್ಜಿ ಸಲ್ಲಿಸಲು ಮೇ 9ನೇ ತಾರೀಖು ಕೊನೆಯ ದಿನವಾಗಿದೆ. ಅಲ್ಲಿಂದ ಒಂದು ವಾರದ ಒಳಗೆ ಷೇರುಗಳ ವಿತರಣೆ ಪೂರ್ಣಗೊಳ್ಳಲಿದೆ. ಮೇ 17ರಿಂದ ಷೇರು ವಿನಿಮಯ ಕೇಂದ್ರ (BSE/NSE) ಗಳಲ್ಲಿ ಕೊಡು ಕೊಳ್ಳುವಿಕೆ ಆರಂಭವಾಗುವುದು. ಆ ಸಮಯದ ಬೇಡಿಕೆ ಪೂರೈಕೆಗೆ ಅನುಗುಣವಾಗಿ ಪ್ರತಿ ಷೇರಿನ ದರ ನಿರ್ಧರಿಸಲ್ಪಡುತ್ತದೆ. ಅದು ಆರಂಭಿಕ ಷೇರು ವಿಕ್ರಯ ದರಕ್ಕಿಂತ ಹೆಚ್ಚೂ ಇರಬಹುದು ಅಥವಾ ಕಡಿಮೆಯೂ ಇರಬಹುದು.
ಈ ಐಪಿಒ ಮೂಲಕ ಬರೋಬ್ಬರಿ 21 ಸಾವಿರ ಕೋಟಿ ರೂ. ಸಂಗ್ರಹಿಸಲಿರುವ ಕೇಂದ್ರ ಸರ್ಕಾರದ ಖಜಾನೆಗೆ ಈ ಹಣವು ಸೇರಲಿದೆ. ಪ್ರಸಕ್ತ ದೇಶದ ಹಾಗೂ ರಷ್ಯಾ- ಉಕ್ರೇನ್ ಸಮರ ಸೇರಿದಂತೆ ಜಾಗತಿಕ ಪರಿಸ್ಥಿತಿಯ ನೆಲೆಯಲ್ಲಿ ನೋಡುವುದಾದರೆ ಭಾರತೀಯ ಜೀವ ವಿಮಾ ನಿಗಮದ ಈ ಭಾರೀ ಷೇರು ಬಂಡವಾಳದ ವಿಕ್ರಯವು, ಆರ್ಥಿಕ ಸಂಪನ್ಮೂಲ ಅನಿಶ್ಚಿತತೆಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಒಂದು ದೊಡ್ಡ ವರದಾನವಾಗಲಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
- ಭವ್ಯಕುಮಾರ್, ಮ್ಯೂಚಲ್ ಫಂಡ್ ವಿತರಕರು ಮತ್ತು ಅಂಕಣಕಾರರು
ಸೂಚನೆ : ಹೂಡಿಕೆದಾರರ ಮಾಹಿತಿಗಷ್ಟೆ ಈ ಲೇಖನವನ್ನು ನೀಡಲಾಗಿದೆ. ಎಲ್ ಐಸಿಯ ಐಪಿಒ ನೀಡಿಕೆಗೆ ಸಂಬಂಧಪಟ್ಟ ದಾಖಲೆಗಳನ್ನು ಓದಿ, ತಿಳಿದುಕೊಂಡು ವ್ಯವಹಾರ ನಡೆಸುವಂತೆ ಈ ಮೂಲಕ ತಿಳಿಸಲಾಗಿದೆ.