ಬೆಂಗಳೂರು, (www.bengaluruwire.com) : ನಮ್ಮ ಮೆಟ್ರೊ ಎರಡನೇ ಹಂತದ ರೈಲುಮಾರ್ಗ ನಿರ್ಮಾಣದಲ್ಲಿ ಊರ್ಜಾ ಸುರಂಗ ಕೊರೆಯುವ ಯಂತ್ರ (TBM Machine) ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನ 27 ಮೀಟರ್ ಭೂಮಿಯನ್ನು ಕೊರೆಯುವ ಮೂಲಕ ಮೆಟ್ರೊ 2ನೇ ಹಂತದಲ್ಲಿ ಅತಿಹೆಚ್ಚು ಸುರಂಗ ಮಾರ್ಗ ನಿರ್ಮಿಸಿದ ಕೀರ್ತಿಗೆ ಭಾಜನವಾಗಿದೆ.
ಕಂಟೋನ್ಮೆಂಟ್ ನಿಂದ ಪಾಟರಿ ಟೌನ್ ಮಾರ್ಗದಲ್ಲಿ ಊರ್ಜಾ ಟಿಬಿಎಂ ಯಂತ್ರ ಸದ್ಯ ಸುರಂಗ ಮಾರ್ಗ ನಿರ್ಮಾಣದಲ್ಲಿ ತೊಡಗಿದೆ. ಸಾಮಾನ್ಯವಾಗಿ ಟಿಬಿಎಮ್ ಯಂತ್ರವು ಕಲ್ಲು ಬಂಡೆ ಎದುರಾದರೆ ಪ್ರತಿನಿತ್ಯ ಸರಾಸರಿ 3 ಮೀಟರ್ ಸುರಂಗ ಮಾರ್ಗ ಕೊರೆಯುತ್ತದೆ. ಭೂಮಿಯಡಿ ಮಣ್ಣಿನ ಪದರ ಎದುರಾದರೆ 10 ರಿಂದ 12 ಮೀಟರ್ ಕೊರೆಯುತ್ತದೆ. ಆದರೆ ಒಂದೇ ದಿನ 27 ಮೀಟರ್ ಉದ್ದ ಕೊರೆಯುವ ಮೂಲಕ ಊರ್ಜಾ ಟಿಬಿಎಂ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಏಪ್ರಿಲ್ 25ರಂದು ಊರ್ಜಾ ಯಂತ್ರ ಈ ದಾಖಲೆ ನಿರ್ಮಿಸಿದೆ.
20 ಆಗಸ್ಟ್ 2020ರಂದು ಮೆಟ್ರೊ ಎರಡನೇ ಹಂತದ ರೈಲ್ವೆ ಮಾರ್ಗದಲ್ಲಿ 9 ಟಿಬಿಎಮ್ ಯಂತ್ರಗಳ ಪೈಕಿ ಊರ್ಜಾ ಮೊದಲಿಗೆ ಕಂಟೋನ್ಮೆಂಟ್ ನಿಂದ ಶಿವಾಜಿನಗರ ಮಾರ್ಗದಲ್ಲಿ ಸುರಂಗಮಾರ್ಗ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿ ಮೊದಲ ಹಂತದಲ್ಲಿ 864.7 ಮೀಟರ್ ಮಾರ್ಗವನ್ನು ನಿರ್ಮಿಸುವಲ್ಲಿ ಯಶಸ್ವಿಯಾಯಿತು. ಆನಂತರ ಎರಡನೇ ಹಂತದಲ್ಲಿ 28 ಡಿಸೆಂಬರ್ 2021ರಂದು ಕಂಟೋನ್ಮೆಂಟ್ ನಿಂದ ಪಾಟರಿಟೌನ್ 900 ಮೀಟರ್ ಸುರಂಗ ಕೊರೆಯಲು ಆರಂಭಿಸಿ ಈತನಕ ಅಂದಾಜು 500 ಮೀಟರ್ ನಷ್ಟು ಸುರಂಗ ನಿರ್ಮಾಣ ಮಾಡಲಾಗಿದೆ ಎಂದು ಮೆಟ್ರೊ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಡೈರಿ ವೃತ್ತದಿಂದ ನಾಗಾವರದ ತನಕ ಒಟ್ಟು 13.88 ಕಿ.ಮೀ ಸುರಂಗಮಾರ್ಗ ನಿರ್ಮಿಸಲಿದೆ. ಇದಕ್ಕಾಗಿ ಒಟ್ಟು 9 ಟಿಬಿಎಂ ಯಂತ್ರಗಳನ್ನು ಬಳಸಲಾಗುತ್ತಿದೆ. ಊರ್ಜಾ ಟಿಬಿಎಂಯಂತ್ರ ಹಾಗೂ ಅದೇ ಮಾರ್ಗದಲ್ಲಿ ಪಕ್ಕದಲ್ಲೇ ಸಾಗುತ್ತಿರುವ ವಿಂಧ್ಯಾ ಟಿಬಿಎಂ ಯಂತ್ರ ಎರಡು ಕಡೆಗಳಿಂದ ತಲಾ 2.5 ಕಿ.ಮೀ ಸುರಂಗ ಮಾರ್ಗವನ್ನು 2023ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ತಮ್ಮ ಕಾರ್ಯ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ದಿನದ 24 ಗಂಟೆಗಳ ಕಾಲವೂ ಮೆಟ್ರೊ ಟಿಬಿಎಂ ಯಂತ್ರಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಸುರಂಗ ಕೊರೆಯುವಾಗ ಹಲವು ಹಂತಗಳ ಕಾರ್ಯಗಳನ್ನು ಏಕ ಕಾಲಕ್ಕೆ ತಪ್ಪಿಲ್ಲದೆ ಯಂತ್ರಗಳನ್ನು ಬಳಸಿ ಭೂಮಿಯೊಳಗೆ ಕಾರ್ಯನಿರ್ವಹಿಸುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಊರ್ಜಾ ಟಿಬಿಎಂ ಮೆಟ್ಟಿನಿಂತಿದೆ.