ಬೆಂಗಳೂರು, (www.bengaluruwire.com) : ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿ ಮತ್ತು ವಿದ್ಯುತ್ ದರ ಹೆಚ್ಚಳ, ಸಾಗಾಣಿಕೆ ವೆಚ್ಚ ಹೆಚ್ಚಳ ಸೇರಿದಂತೆ ಎಲ್ಲಾ ವೆಚ್ಚಗಳು ಶೇ.25 ರಿಂದ 30ರಷ್ಟು ಹೆಚ್ಚಾಗಿರುವುದನ್ನು ಪರಿಗಣಿಸಿ ಕೂಡಲೇ ಹಾಲಿನ ದರವನ್ನು ಲೀಟರ್ ಗೆ ಕನಿಷ್ಠ 3 ರೂ. ಏರಿಕೆ ಮಾಡುವಂತೆ ಕರ್ನಾಟಕ ಹಾಲು ಮಹಾಮಂಡಳ (KMF) ದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಲೀಟರ್ ಹಾಲಿಗೆ ಕನಿಷ್ಟ 3 ರೂ. ಹೆಚ್ಚಳ ಮಾಡಬೇಕು. ಇದರಲ್ಲಿ ಎರಡು ರೂ.ಗಳನ್ನು ಹಾಲು ಉತ್ಪಾದಿಸು ರೈತರಿಗೆ ನೀಡಲಾಗುವುದು. ಉಳಿಕೆ 1 ರೂ. ಅನ್ನು ಹಾಲು ಉತ್ಪಾದಕರ ಸಹಕಾರ ಸಂಘ, ಹಾಲು ಒಕ್ಕೂಟ ಹಾಗೂ ಹಾಲು ಮಾರಾಟಗಾರರಿಗೆ ನೀಡಲಾಗುವುದು. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಒತ್ತಾಯಪೂರ್ವಕವಾಗಿ ಮನವಿ ಮಾಡಲಾಗಿದೆ ಎಂದು ಕೆಎಂಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಮೂಲ್ ಸೇರಿ ದೇಶದ ನಾನಾ ಸಹಕಾರ ಮತ್ತು ಖಾಸಗಿ ಸಂಸ್ಥೆಗಳು ಹಾಲಿನ ದರವನ್ನು ಈಗಾಗಲೇ ಹೆಚ್ಚಳ ಮಾಡಿದೆ. ಒಟ್ಟಾರೆ ನಂದಿನಿ ಹಾಲಿನ ದರಕ್ಕೆ ಹೋಲಿಸಿದರೆ ಇತರ ಸಂಸ್ಥೆಗಳ ಹಾಲಿನ ದರವು ಲೀಟರ್‌ಗೆ 8 ರಿಂದ 10 ರೂ. ಹೆಚ್ಚಿದೆ. ಹಾಗಾಗಿ, ಕೆಎಂಎಫ್ ಹಾಲಿನ ದರವನ್ನು ಲೀಟರ್‌ಗೆ ಕನಿಷ್ಠ 3 ರೂ. ಏರಿಕೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.
ರಾಜ್ಯದಲ್ಲಿರುವ ರೈತರು ಹಾಲು ಉತ್ಪಾದನಾ ಹೆಚ್ಚಳದಿಂದ ಬಸವಳಿದಿದ್ದು, ಹಾಲಿನ ದರ ಏರಿಕೆಗೆ ಕೆಎಂಎಫ್ ಅಡಿಯಲ್ಲಿರುವ ಹಾಲು ಒಕ್ಕೂಟಗಳ ಮೇಲೆ ಒತ್ತಡ ಹೇರಿರುವುದು ಕರ್ನಾಟಕ ಹಾಲು ಮಹಾಮಂಡಳಕ್ಕೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಕೆಎಂಎಫ್ ಅಧ್ಯಕ್ಷರು ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ರಾಜ್ಯದ ಅಕ್ಕ-ಪಕ್ಕದ ನಗರಗಳಿಗೆ ಪ್ರತಿನಿತ್ಯ 10 ಲಕ್ಷ ಲೀ. ಹಾಲು ಮಾರಾಟ :
ಚೆನ್ನೈ, ಮುಂಬೈ, ಗೋವಾ, ಹೈದರಾಬಾದ್, ಪುಣೆಗಳಲ್ಲಿ ಪ್ರತಿನಿತ್ಯ 10 ಲಕ್ಷ ಲೀಟರ್ ನಂದಿನಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಮಾರಾಟದ ಜಾಲವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ನಾಗಾಪುರದಲ್ಲಿ ಹಾಲಿನ ಮಾರಾಟ ಕೇಂದ್ರ ಸ್ಥಾಪಿಸಲಾಗಿದ್ದು, ಪ್ರಸ್ತುತ ಪ್ರತಿನಿತ್ಯ 30 ಸಾವಿರ ಲೀ. ಹಾಲು ಮಾರಾಟವಾಗುತ್ತಿದೆ. ಕೆಫೆ ಕಾಫೀ ಡೇ ಮಾದರಿಯಲ್ಲಿ ವಿನೂತನ ನಂದಿನಿ ಕೆಫೆ ಮ್ಹೂ ಅನ್ನು ಈಗಾಗಲೇ ರಾಜ್ಯಾದ್ಯಂತ 25 ಕಡೆಗಳಲ್ಲಿ ಸ್ಥಾಪಿಸಲಾಗಿದೆ. 2022-23ನೇ ಸಾಲಿನಲ್ಲಿ ಬೇರೆ ಬೇರೆ ನಗರಗಳು, ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ 100ಕ್ಕೂ ಅಧಿಕ ವಿನೂತನ ನಂದಿನಿ ಕೆಫೆ ಮ್ಹೂ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
2022-23ನೇ ಸಾಲಿನಲ್ಲಿ ಕೆಎಂಎಫ್ ವಹಿವಾಟು ಗುರಿ 25 ಸಾವಿರ ಕೋಟಿ ರೂ. :
ರಾಜ್ಯದಲ್ಲಿ ಹಾಲು ಮಾರಾಟಕ್ಕೆ ಕೈಗೊಂಡಿರುವ ಸುಧಾರಣಾ ಕ್ರಮಗಳಿಂದಾಗಿ ಕರ್ನಾಟಕ ಹಾಲು ಮಹಾಮಂಡಳ ಹಾಗೂ ಹಾಲು ಒಕ್ಕೂಟಗಳ ಒಟ್ಟಾರೆ ವಹಿವಾಟು 2019-20ರಲ್ಲಿ 16,440.74 ಕೋಟಿ ರೂ. ಆಗಿದ್ದು, 2021-22ನೇ ಸಾಲಿನಲ್ಲಿ 19,732 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಹಾಲು ಮಾರಾಟ ಹಾಗೂ ವಹಿವಾಟಿನಲ್ಲಿ ಶೇ.20ರಷ್ಟು ಏರಿಕೆಯಾಗಿದೆ. 2022-23ನೇ ಸಾಲಿನಲ್ಲಿ ಒಟ್ಟಾರೆಯಾಗಿ ಕೆಎಂಎಫ್ ವಹಿವಾಟು 25 ಸಾವಿರ ಕೋಟಿ ರೂ. ತಲುಪುವ ಗುರಿಯಿದೆ ಎಂದು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಎರಡೂವರೆ ವರ್ಷದಲ್ಲಿ ಪಶು ಆಹಾರದಲ್ಲಿ 160 ಕೋಟಿ ರೂ. ರಿಯಾಯ್ತಿ : ಕೆಎಂಎಫ್ ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಹಾಗೂ ಹಸುಗಳ ಆರೋಗ್ಯ ಕಾಪಾಡಲು ಸಮತೋಲಿತ ಪಶು ಆಹಾರವನ್ನು ರಿಯಾಯ್ತಿ ದರದಲ್ಲಿ ಪೂರೈಕೆ ಮಾಡುತ್ತಿದೆ. ರೈತರ ಹಾಲು ಉತ್ಪಾದನಾ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಪಶು ಆಹಾರದ ದರದಲ್ಲಿ ಪ್ರತಿ ಟನ್ ಗೆ 500 ರೂ. ನಿಂದ 2 ಸಾವಿರ ರೂ. ತನಕ ವಿವಿಧ ಸಂದರ್ಭಗಳಲ್ಲಿ ಒಟ್ಟಾರೆ 160 ಕೋಟಿ ರೂ. ರಿಯಾಯ್ತಿ ನೀಡಲಾಗಿದೆ ಎಂದು ಅವರು ಪ್ರಸ್ತಾವನೆಯಲ್ಲಿ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಒಟ್ಟಾರೆ ಹಾಲು ಉತ್ಪಾದನೆ, ಸಂಸ್ಕರಣೆ, ವಿತರಣೆ ಸೇರಿದಂತೆ ಎಲ್ಲಾ ಹಂತಗಳಲ್ಲಿ ವೆಚ್ಚ ಹೆಚ್ಚಳವಾಗಿರುವುದರಿಂದ ಹಾಲಿನ ದರವನ್ನು ಲೀಟರ್ ಗೆ ಕನಿಷ್ಟ 3 ರೂ. ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ