ಲಾಸ್ ಏಂಜಲೀಸ್ (ಅಮೆರಿಕ) (www.bengaluruwire.com) : ಅಮೆರಿಕದ ಮೊದಲ ಖಾಸಗಿ ಗಗನಯಾತ್ರಿ ಮಿಷನ್ ಆಕ್ಸಿಯೋಮ್ ಸ್ಪೇಸ್ಎಕ್ಸ್-1 ಬಾಹ್ಯಾಕಾಶ ನೌಕೆಯು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS)ದಿಂದ ಭೂಮಿಗೆ ಬಂದಿಳಿದಿದೆ. ಆಗ್ನೇಯ ಅಮೆರಿಕದ ಫ್ಲೋರಿಡಾದ ಜಾಕ್ಸನ್‌ವಿಲ್ಲೆ ಕರಾವಳಿ ತೀರದ ಬಾಹ್ಯಾಕಾಶ ಉಡ್ಡಯನ ಕೇಂದ್ರವನ್ನು ತಲುಪಿದೆ ಎಂದು ಸ್ಪೇಸ್‌ಎಕ್ಸ್ ಖಾತ್ರಿಪಡಿಸಿದೆ.
17 ದಿನಗಳ ಕಾಲ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಆಕ್ಸಿಯೋಮ್ ಸ್ಪೇಸ್ಎಕ್ಸ್-1 ಮತ್ತು ಡ್ರ್ಯಾಗನ್ ತಂಡದ ನಾಲ್ವರು ಗಗನಯಾನಿಗಳು ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ. ಐಎಸ್ ಎಸ್ ಕೇಂದ್ರದಲ್ಲಿದ್ದ ವೇಳೆ ಬಾಹ್ಯಾಕಾಶದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಸಂಶೋಧನೆ, ಐಎಸ್ ಎಸ್ ಕೇಂದ್ರದಲ್ಲಿ ಗಾಳಿ ಶುದ್ಧೀಕರಣ ಯಂತ್ರ ಬಳಕೆ ಬಗ್ಗೆ ಪರೀಕ್ಷೆ, ಬಾಹ್ಯಾಕಾಶ ಕೇಂದ್ರದಲ್ಲಿ ಮುಂದೆ ನಿರ್ಮಾಣ ಕಾಮಗಾರಿ ನಡೆಸುವ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿರುವುದು ಸೇರಿದಂತೆ ಹಲವು ಸಂಶೋಧನೆ ಹಾಗೂ ಪರೀಕ್ಷೆಗಳನ್ನು ಈ ತಂಡ ನೆರವೇರಿಸಿದೆ.
ಅಮೆರಿಕದ ಪೈಲಟ್ ಲ್ಯಾರಿ ಕಾನರ್ ಮತ್ತು ಕಮಾಂಡರ್ ಮೈಕೆಲ್ ಲೋಪೆಜ್ – ಅಲೆಗ್ರಿಯಾ, ಕೆನಡಾದ ಮಿಷನ್ ಸ್ಪೆಷಲಿಸ್ಟ್ ಮಾರ್ಕ್ ಪಾಥಿ ಹಾಗೂ ಇಸ್ರೇಲ್‌ನ ಮಿಷನ್ ಸ್ಪೆಷಲಿಸ್ಟ್ ಐಟಾನ್ ಸ್ಟಿಬ್ಬೆ ಅಮೆರಿಕದ ಮೊತ್ತ ಮೊದಲ ಖಾಸಗಿ ಮಿಷನ್ ನಲ್ಲಿ ಪಾಲ್ಗೊಂಡಿದ್ದರು.
ಸ್ಪೇಸೆಕ್ಸ್ ಡ್ರಾಗನ್ ಸ್ಪೇಸ್ ಕ್ರಾಫ್ಟ್ ಭಾನುವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು 9.10 ರಾತ್ರಿ ತೊರೆದು ಭೂಮಿಯತ್ತ ಹೊರಟು ಸೋಮವಾರ (ಏಪ್ರಿಲ್ 25) ಬೆಳಗ್ಗೆ ಅಮೆರಿಕದ ಆಗ್ನೇಯ ಭಾಗದಲ್ಲಿನ ಫ್ಲೋರಿಡಾದ ಕರಾವಳಿ ತೀರಕ್ಕೆ ಸ್ಥಳೀಯ ಕಾಲಮಾನ 1.06ಕ್ಕೆ ಸುರಕ್ಷಿತವಾಗಿ ಬಂದಿಳಿಯಿತು. ಏಪ್ರಿಲ್ 8 ರಂದು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್ ಮಾನವಸಹಿತ ಉಪಗ್ರಹ ಉಡಾವಣೆಯಾಗಿತ್ತು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಮೊದಲ ಖಾಸಗಿ ಮಿಷನ್ ತನ್ನ ಉದ್ದೇಶದಲ್ಲಿ ಯಶಸ್ಸು ಸಾಧಿಸಿದೆ. ಆ ಮೂಲಕ ಬಾಹ್ಯಾಕಾಶ ಪ್ರಯಾಣ ಮತ್ತು ಭೂಮಿ ಕೆಳಮಟ್ಟದ ಕಕ್ಷೆಯಲ್ಲಿ ಬಾಹ್ಯಾಕಾಶ ವಾಣಿಜ್ಯ ವ್ಯವಹಾರ ನಡೆಸಲು ಹೊಸ ಅವಕಾಶವನ್ನು ತೆರೆದಂತಾಗಿದೆ. ಇದಲ್ಲದೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಖಾಸಗಿ ಉದ್ಯಮದೊಂದಿಗೆ ಸೇರಿ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಮೊದಲ ಹೆಜ್ಜೆ ಆಗಿದೆ. ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶದ ವಾಣಿಜ್ಯ ವ್ಯವಹಾರ ಸಕ್ರಿಯಗೊಳಿಸುವ ನಾಸಾದ ಗುರಿಯನ್ನು ಸಾಧಿಸಲು ಈ ಕಾರ್ಯಕ್ರಮ ನೆರವಾಗಿದೆ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ತಿಳಿಸಿದ್ದಾರೆ.